Home ದಾವಣಗೆರೆ ಬೆಂಗಳೂರಿನಲ್ಲಿ ಜೂನ್ 21 ಕ್ಕೆ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪದಗ್ರಹಣ: ದಾವಣಗೆರೆಯ ಸಾವಿರಾರು ಕಾರ್ಯಕರ್ತರು ಭಾಗಿ
ದಾವಣಗೆರೆನವದೆಹಲಿಬೆಂಗಳೂರು

ಬೆಂಗಳೂರಿನಲ್ಲಿ ಜೂನ್ 21 ಕ್ಕೆ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪದಗ್ರಹಣ: ದಾವಣಗೆರೆಯ ಸಾವಿರಾರು ಕಾರ್ಯಕರ್ತರು ಭಾಗಿ

Share
ದಾವಣಗೆರೆ
Share

ದಾವಣಗೆರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (KPCC) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಐತಿಹಾಸಿಕ ಅಧಿಕಾರ ಸ್ವೀಕಾರ ಸಮಾರಂಭವು ಇದೇ ಜೂನ್ 21 ರ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ಡಿ. ಬಸವರಾಜ್ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದ್ದಾರೆ.

ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಾಮಾನ್ಯ ಕಾರ್ಯಕರ್ತನಿಂದ ಕೆಪಿಸಿಸಿ ಸಾರಥಿಯವರೆಗೆ:

ವಿದ್ಯಾರ್ಥಿ ಕಾಂಗ್ರೆಸ್ (NSUI) ಮೂಲಕ ರಾಜಕೀಯ ಜೀವನ ಆರಂಭಿಸಿದ ಬಿ.ಕೆ. ಹರಿಪ್ರಸಾದ್, ಯುವ ಕಾಂಗ್ರೆಸ್, ಸೇವಾದಳದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೇಶದ 20 ರಾಜ್ಯಗಳ ಉಸ್ತುವಾರಿ ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. 4 ಬಾರಿ ರಾಜ್ಯಸಭಾ ಸದಸ್ಯರಾಗಿ, 2ನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಇವರ ಸಂಘಟನಾ ಶಕ್ತಿಯನ್ನು ಅರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಜವಾಬ್ದಾರಿಯನ್ನು ನೀಡಿದ್ದಾರೆ.

ದಿಗ್ಗಜ ನಾಯಕರಿಗೆ ಅಭಿನಂದನೆ:

ಇದೇ ಸಂದರ್ಭದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಡಬ್ಲ್ಯೂಸಿ ಸದಸ್ಯರಾಗಿ ನೇಮಕಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ್ ಅವರಿಗೆ ಕೆಪಿಸಿಸಿ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು.

ಕಾರ್ಯಕ್ರಮದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ರಾಜ್ಯದ ಸಚಿವರು, ಶಾಸಕರು ಮತ್ತು ಮುಖಂಡರು ಭಾಗವಹಿಸಲಿದ್ದಾರೆ.

ದಾವಣಗೆರೆಯ ಸಾವಿರಾರು ಕಾರ್ಯಕರ್ತರು ಭಾಗಿ

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಜಿಲ್ಲೆಯ ಶಾಸಕರುಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಗ್ಯಾರಂಟಿ ಸಮಿತಿ ಸದಸ್ಯರು ಮತ್ತು ಮಹಿಳಾ, ಯುವ, ಎಸ್‌ಸಿ-ಎಸ್‌ಟಿ ಘಟಕದ ಸಹಸ್ರಾರು ಕಾರ್ಯಕರ್ತರು ಭಾಗವಹಿಸಬೇಕಾಗಿ ಡಿ. ಬಸವರಾಜ್ ಮನವಿ ಮಾಡಿದರು.

ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ಬಿಬಿಎಂಪಿ ಚುನಾವಣೆಗಳ ದೃಷ್ಟಿಯಿಂದ ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್‌ಗೆ ಸೂಕ್ತ ಸೇನಾಧಿಪತಿಯಾಗಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕೆಪಿಸಿಸಿ ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರು ಮತ್ತು ದಾವಣಗೆರೆ ಎಸ್ಸಿ ಘಟಕದ ಉಪಾಧ್ಯಕ್ಷ ಬಿ. ಎನ್. ವಿನಾಯಕ್, ಮಾಜಿ ಮೇಯರ್ ಕೆ. ಚಮನ್ ಸಾಬ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *