Home ಕ್ರೈಂ ನ್ಯೂಸ್ ಮದುವೆ ನಿಶ್ಚಯ ಬೆನ್ನಲ್ಲೇ ದುರಂತ: ಮಾಜಿ ಪ್ರೇಯಸಿಯ 30 ಬಾರಿ ಇರಿದು ಕೊಂದ ಮಾಜಿ ಪ್ರೇಮಿ ಆತ್ಮಹತ್ಯೆಗೆ ಯತ್ನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮದುವೆ ನಿಶ್ಚಯ ಬೆನ್ನಲ್ಲೇ ದುರಂತ: ಮಾಜಿ ಪ್ರೇಯಸಿಯ 30 ಬಾರಿ ಇರಿದು ಕೊಂದ ಮಾಜಿ ಪ್ರೇಮಿ ಆತ್ಮಹತ್ಯೆಗೆ ಯತ್ನ!

Share
ಮದುವೆ
Share

ಮೊಹಾಲಿ: ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ 29 ವರ್ಷದ ಯುವತಿಯೊಬ್ಬಳನ್ನು ಆಕೆಯ ಮಾಜಿ ಪ್ರೇಮಿಯೇ ಆಫೀಸ್‌ನಲ್ಲೇ ಸಹೋದ್ಯೋಗಿಗಳ ಕಣ್ಣೆದುರೇ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಧೃತಿಗೆಡಿಸುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿಯನ್ನು ಪಟಿಯಾಲ ಮೂಲದ ಡಿಂಪಲ್ (29) ಎಂದು ಗುರುತಿಸಲಾಗಿದೆ. ಈಕೆಯನ್ನು ಹತ್ಯೆ ಮಾಡಿದ ಆಕೆಯ ಮಾಜಿ ಪ್ರೇಮಿ ಹರ್ಜಿಂದರ್ ಸಿಂಗ್ ಮನ್ (34) ಕೊಲೆ ಮಾಡಿದ ಬಳಿಕ ಅದೇ ಚಾಕುವಿನಿಂದ ತನ್ನ ಗಂಟಲನ್ನು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರಸ್ತುತ ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಫೀಸ್‌ನಲ್ಲೇ ನಡೆದ ಹಾರರ್ ಕಥೆ:

ಡಿಂಪಲ್ ಮತ್ತು ಹರ್ಜಿಂದರ್ ಇಬ್ಬರೂ ಮೊಹಾಲಿಯ ಫೇಸ್ 11 ರಲ್ಲಿರುವ ‘ಎಸ್‌ಆರ್‌ಪಿ ಲಾಜಿಸ್ಟಿಕ್ಸ್’ ಕಂಪನಿಯಲ್ಲಿ ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮೊದಮೊದಲು ಇವರಿಬ್ಬರ ನಡುವೆ ಪ್ರೀತಿ ಇತ್ತಾದರೂ, ಆರು ತಿಂಗಳ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಬ್ರೇಕಪ್ ಆಗಿತ್ತು. ಆದರೆ ಹರ್ಜಿಂದರ್ ಡಿಂಪಲ್‌ನನ್ನು ಕಾಡುವುದನ್ನು ನಿಲ್ಲಿಸಿರಲಿಲ್ಲ. ಇತ್ತೀಚೆಗೆ ಡಿಂಪಲ್ ತನ್ನನ್ನು ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದ್ದರಿಂದ ಆಕ್ರೋಶಗೊಂಡಿದ್ದ ಆತ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಗುರುವಾರ ಸಂಜೆ ಕಚೇರಿಯಲ್ಲಿ ಶಿಫ್ಟ್ ಬದಲಾಗುವ ಸಮಯದಲ್ಲಿ ಹರ್ಜಿಂದರ್ ಎರಡು ಚಾಕುಗಳೊಂದಿಗೆ ಡಿಂಪಲ್ ಕ್ಯಾಬಿನ್‌ಗೆ ನುಗ್ಗಿದ್ದಾನೆ. ಆಕೆಯನ್ನು ಹಿಗ್ಗಾಮುಗ್ಗಾ ಇರಿಯಲು ತೊಡಗಿದಾಗ, ಡಿಂಪಲ್ ಪ್ರಾಣ ಉಳಿಸಿಕೊಳ್ಳಲು ಕಚೇರಿಯ ಎಕ್ಸಿಟ್ ಡೋರ್ ಕಡೆಗೆ ಓಡಿದ್ದಾಳೆ. ಆದರೆ ಬೆನ್ನಟ್ಟಿದ ಹರ್ಜಿಂದರ್ ಆಕೆಯನ್ನು ನೆಲಕ್ಕೆ ತಳ್ಳಿ ಸತತ 30 ಬಾರಿ ಇರಿದಿದ್ದಾನೆ. ಕಚೇರಿಯಲ್ಲಿದ್ದ ಇತರೆ ಸಿಬ್ಬಂದಿ ರಕ್ಷಿಸಲು ಮುಂದಾದರೂ, ಚಾಕು ತೋರಿಸಿ ಎಲ್ಲರಿಗೂ ಬೆದರಿಕೆ ಹಾಕಿದ್ದಾನೆ.

ರಾಜೀನಾಮೆ ನೀಡಬೇಕಿತ್ತಷ್ಟೇ!

ಡಿಂಪಲ್ ಕುಟುಂಬಸ್ಥರು ಪಟಿಯಾಲದಲ್ಲಿ ಆಕೆಗೆ ಸೂಕ್ತ ವರನನ್ನು ಹುಡುಕುತ್ತಿದ್ದರು. ಮದುವೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದರಿಂದ, ಡಿಂಪಲ್ ಶುಕ್ರವಾರ (ಜೂನ್ 5) ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಗ್ರಾಮಕ್ಕೆ ಮರಳಲು ನಿರ್ಧರಿಸಿದ್ದಳು. ಆದರೆ ಕೆಲಸ ಬಿಡುವ ಹಿಂದಿನ ದಿನವೇ ಈ ಘೋರ ದುರಂತ ಸಂಭವಿಸಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103ರ ಅಡಿಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles