SUDDIKSHANA KANNADA NEWS/ DAVANAGERE/ DATE:23-11-2024
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಆರೋಪ ನನಗೆ ಬಹಳ ಬೇಸರ ಆಗಿದೆ. ನಾನು ಬಹಳ ವರ್ಷ ಅವರ ಜೊತೆಗೆ ಇದ್ದವನು. ಆದ್ರೂ ಕೂಡ, ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ನನ್ನ ಗುರಿ, ಸಿದ್ದರಾಮಯ್ಯ ಅಹಂಕಾರ, ಸೊಕ್ಕು ಮುರಿತೀನಿ ಅಂತೆಲ್ಲಾ ಮಾತಾಡಿದರು. ನಾನು ಮಂತ್ರಿ ಆಗಿ 40 ವರ್ಷ ಆಯ್ತು. ಎರಡು ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದೇನೆ. ಯಾವತ್ತೂ ಸೊಕ್ಕು, ಅಹಂಕಾರ ಮಾಡಿಲ್ಲ. ಜನ ಅವಕಾಶ ಕೊಟ್ಟಾಗ ಅಧಿಕಾರ ನಡೆಸಿದ್ದೇವೆ. ಸೋತಾಗ ಹೋರಾಟ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲದ್ದಕ್ಕೆ ದೇವೇಗೌಡರು, ಕುಮಾರಸ್ವಾಮಿ ಅವ್ರು, ನಿಖಿಲ್ ಎಲ್ರೂ ಅಳೋದು. ಅಳೋದನ್ನು ರೂಢಿ ಮಾಡಿಕೊಂಡಿದ್ದಾರೆ. ಆದ್ರೂ ಜನ ನಮಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ಮತದಾರರನ್ನು ಪೆದ್ದರು ಎಂದು ಭಾವಿಸುವುದನ್ನು ನಿಲ್ಲಿಸಬೇಕು. ಪ್ರತೀ ಬಾರಿ ಮತದಾರರನ್ನು ಬಕ್ರಾ ಮಾಡಿ ಗೆಲ್ತೀವಿ ಎನ್ನುವ ಬುದ್ದಿಯನ್ನು ಬಿಜೆಪಿಯವರು ಬಿಡಬೇಕು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಮಂತ್ರಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಎಲ್ಲರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ ಎಂದು ಹೇಳಿದರು.
ವಯನಾಡ್ ನಲ್ಲಿ 4 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಜಯಗಳಿಸಿರುವ ಪ್ರಿಯಾಂಕ ಗಾಂಧಿಯವರಿಗೆ ಮತ್ತು ಕೇರಳ ಜನತೆಗೆ ಅಭಿನಂದನೆಗಳು ಎಂದರು.
ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಸುರೇನ್ ಅವರನ್ನು ಇಡಿಯವರು ಜೈಲಿಗೆ ಕಳುಹಿಸಿದ್ದರು. ಬಿಜೆಪಿಯವರು ಸುಳ್ಳು ಕೇಸಲ್ಲಿ ಮುಖ್ಯಮಂತ್ರಿಯವರನ್ನು ಜೈಲಿಗೆ ಕಳುಹಿಸಿದರೂ ಜನತಾ ನ್ಯಾಯಾಲಯದಲ್ಲಿ ಜನ ಅವರ ಪರವಾಗಿ ಜನಾದೇಶ
ಕೊಟ್ಟಿದ್ದಾರೆ. ಜಾರ್ಖಂಡ್ ಜನರನ್ನು ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.