SUDDIKSHANA KANNADA NEWS/ DAVANAGERE/ DATE:21-11-2024
ದಾವಣಗೆರೆ: ಸ್ವಾಭಿಮಾನಿ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕೆಂಬ ಸೈದ್ಧಾಂತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ಏಕವಚನ ಪದ ಪ್ರಯೋಗ ಮಾಡಿದ್ದು ಸರಿಯಲ್ಲ. ಇದರಿಂದ ಲಕ್ಷಾಂತರ ಭಕ್ತರಿಗೆ ಘಾಸಿಯುಂಟು ಮಾಡಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ವಾಮೀಜಿಗಳ ಬಗ್ಗೆ ಏಕವಚನದಲ್ಲಿ ನಿಂದಿಸಿದ್ದು ಮಠಗಳು ಮತ್ತು ಮಠಾಧೀಶರಿಗೆ ಅವಮಾನ ಮಾಡಿದಂತೆ ಎಂಬುದು ನನ್ನ ಭಾವನೆ. ಸಮಾಜದಲ್ಲಿ ಮಠಮಾನ್ಯಗಳು, ಶ್ರೀಗಳಿಗೆ ಉತ್ಕೃಷ್ಟವಾದ ಸ್ಥಾನಮಾನ ಇದೆ. ಆಧ್ಯಾತ್ಮಿಕ ಮತ್ತು ಆತ್ಮಸಾಕ್ಷಿ ಕಾಪಾಡುವ ಕೇಂದ್ರಗಳು. ಯಾರೋ ಒಂದಿಬ್ಬರು ಸ್ವಾಮೀಜಿಯವರು ತಪ್ಪು ಮಾಡಿರಬಹುದು. ಅಂದ ಮಾತ್ರಕ್ಕೆ ಸಾವಿರಾರು ಮಠಗಳು ಹಾಗೂ ಸ್ವಾಮೀಜಿಗಳನ್ನು ದೂಷಿಸುವುದು ಸರಿಯಲ್ಲ. ಮಾತನಾಡಲು ಜನರು ಭಯಪಡುತ್ತಾರೆ, ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣವೂ ಇರುತ್ತದೆ ಎಂದು ತಿಳಿಸಿದ್ದಾರೆ.
ನಾನು ಆಯೋಜಿಸಿದ್ದ ಸ್ವಾಭಿಮಾನಿ ಬಳಗದ ಉದ್ಘಾಟನಾ ಸಮಾರಂಭಕ್ಕೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಸಂತೋಷ, ಪ್ರೀತಿಯಿಂದಲೇ ಬಂದಿದ್ದರು. ನನ್ನ ಭಾಷಣದ ಬಳಿಕ ಅವರೂ ಅನಿಸಿಕೆ ವ್ಯಕ್ತಪಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಅಸಮಾನತೆ ಹೋಗಲು, ಎಲ್ಲರಿಗೂ ಅಧಿಕಾರ ಸಿಗುವಂತಾಗಲು ಕುಟುಂಬ ರಾಜಕಾರಣ ಅಂತ್ಯವಾಗಬೇಕೆಂಬ ಸೈದ್ಧಾಂತಿಕ ನಿಲುವು ವ್ಯಕ್ತಪಡಿಸಿದ್ದರು. ಅವರನ್ನು ಟಾರ್ಗೆಟ್ ಮಾಡಿ ಏಕವಚನದಲ್ಲಿ ಉದ್ದೇಶಿಸಿ ಕಾರ್ಯಕ್ರಮವೊಂದರಲ್ಲಿ ಶಾಮನೂರು ಶಿವಶಂಕರಪ್ಪರು ಮಾತನಾಡಿದ್ದಾರೆ. ರಾಜಕಾರಣಕ್ಕೆ ಬಂದರೆ ಒಳ್ಳೆಯದು, ಖಾವಿ ಧರಿಸಿ ಇರುವುದಲ್ಲ ಎಂದೆಲ್ಲಾ ಏನೇನೋ ಮಾತನಾಡಿದ್ದಾರೆ. ಈ ರೀತಿ ಶ್ರೀಗಳ ಬಗ್ಗೆ ಮಾತನಾಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಯಾರೋ ಒಬ್ಬ ಐಎಎಸ್ ಸ್ಕೂಲ್ ನಡೆಸುವವನು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾನೆಂದು ಏಕವಚನದಲ್ಲಿ ಹೇಳಿದ್ದಾರೆ. ನಾನು ಚಿಕ್ಕವನು. ಅವರ ಮರಿಮೊಮ್ಮಗನ ವಯಸ್ಸಿನವನು. ಹಾಗಾಗಿ ಏಕವಚನದಲ್ಲಿ ಮಾತನಾಡುವ ಹಕ್ಕು ಅವರಿಗಿದೆ ಎಂಬುದು ನನ್ನ ಭಾವನೆ. ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುವ ಬದಲು ಚುನಾವಣೆಗೆ ನಿಂತು ಗೆಲ್ಲಲಿ ಎಂದು ಹೇಳಿದ್ದಾರೆ. ನನ್ನ ಹೆಸರು ಮರೆತಿರಬೇಕು. ನನ್ನ ವಿಚಾರವೇ ಪ್ರಸ್ತಾಪಿಸಿದ್ದಾರೆ. ದಾವಣಗೆರೆಯಲ್ಲಿ ಭಯದ ವಾತಾವರಣ ಇದೆ. ನಾವೇ ಎಲ್ಲರಿಗಿಂತ ದೊಡ್ಡವರು, ಶ್ರೀಮಂತರು, ಅಧಿಕಾರ ನಮ್ಮ ಕೈಯಲ್ಲಿದೆ ಎಂದುಕೊಂಡಿದ್ದಾರೆ. ನಾವು ಹೇಳಿದ ಹಾಗೆ ನಡೆಯುತ್ತದೆ ಎಂಬ ಧೋರಣೆ ಒಳ್ಳೆಯದಲ್ಲ. ನಾವೂ ಕೂಡ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ, ಮಾಡುತ್ತೇವೆ. ಗೆಲುವು – ಸೋಲು ಸಹಜ. ಗೆದ್ದಾಕ್ಷಣ ದುರಹಂಕಾರ ಇರಬಾರದು. ಅಧಿಕಾರ, ಸಂಪತ್ತು, ಎಷ್ಟೇ ವಯಸ್ಸಾದರೂ ವಿನಯವಂತಿಕೆ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.
ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲುವುದು ಸುಲಭ. ದಾವಣಗೆರೆ ಸೇರಿದಂತೆ ಹಲವೆಡೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಗೆಲ್ಲುತ್ತಿದ್ದಾರೆ. ಕೂಲಂಕುಷವಾಗಿ ನೋಡಿದರೆ ದುಡ್ಡು ಖರ್ಚು ಮಾಡದಿದ್ದರೆ ಗೆಲ್ಲುವುದು ತುಂಬಾನೇ ಕಷ್ಟ. ಸೋತಾಗ ಮತ್ತು ಗೆದ್ದಾಗ ಬೇರೆ ಬೇರೆ ಧೋರಣೆ ಹೊಂದುವುದು ಎಷ್ಟರ ಮಟ್ಟಿಗೆ ಸರಿ? ಜನರ ಪ್ರೀತಿಯಿಂದ ಗೆಲುವು ಕಂಡರೋ ಅಥವಾ ದುಡ್ಡು ಸುರಿದು ಗೆಲುವು ಕಂಡರಾ ಎಂಬುದು ಮುಖ್ಯವಾಗುತ್ತದೆ. ಮುಂದೆಯೂ ಚುನಾವಣೆಗಳು ಬರುತ್ತವೆ. ನನ್ನಂತೆ ಅನೇಕ ಯುವಕರು, ಯುವತಿಯರು ರಾಜಕಾರಣಕ್ಕೆ ಬರಬೇಕು ಎಂದುಕೊಂಡಿದ್ದಾರೆ. ರಾಜಕೀಯ ಹಿನ್ನೆಲೆ ಇಲ್ಲದವರಿಗೂ ಅವಕಾಶ ಸಿಗಲಿ. ತುಂಬಾ ಪ್ರತಿಭಾವಂತರು ಸಾವಿರಾರು ಜನರಿದ್ದಾರೆ. ಅವಕಾಶ ಸಿಕ್ಕರೆ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಾರೆ. ಸಮಾಜಸೇವೆ ಮಾಡಬೇಕೆಂಬ ಉದ್ದೇಶ ಇದೆ. ನಮ್ಮ ಹೋರಾಟ ವ್ಯಕ್ತಿ, ಕುಟುಂಬದ ವಿರುದ್ಧ ಅಲ್ಲ ಎಂದು ಹೇಳಿದ್ದಾರೆ.