ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಿಎಂ ಕುರ್ಚಿ ಬದಲಾವಣೆ ಮತ್ತು ನಾಯಕತ್ವದ ಬಿಕ್ಕಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಒಂದು ನಿರ್ಣಾಯಕ ಸೂತ್ರವನ್ನು ಸಿದ್ಧಪಡಿಸಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಚುಕ್ಕಾಣಿ ನೀಡಲು ಹೈಕಮಾಂಡ್ ಒಲವು ತೋರಿದ್ದು, ತೆರೆಮರೆಯ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಮೂಲಗಳ ಪ್ರಕಾರ, ಪಕ್ಷದಲ್ಲಿ ಯಾವುದೇ ಅಸಮಾಧಾನ ಸ್ಫೋಟಗೊಳ್ಳದಂತೆ ತಡೆಯಲು ಸಿದ್ದರಾಮಯ್ಯ ಅವರ ಬಣವನ್ನು ತೃಪ್ತಿಪಡಿಸುವ ವಿಶೇಷ “ಬ್ಯಾಲೆನ್ಸಿಂಗ್ ಫಾರ್ಮುಲಾ” ಒಂದನ್ನು ಸಿದ್ಧಪಡಿಸಲಾಗಿದೆ. ಈ ಸೂತ್ರದ ಅನ್ವಯ, ಸಿದ್ದರಾಮಯ್ಯ ಅವರಿಗೆ ದೆಹಲಿ ಮಟ್ಟದಲ್ಲಿ ದೊಡ್ಡ ಸಾಂಸ್ಥಿಕ ಜವಾಬ್ದಾರಿ ನೀಡಿ, ಮುಂಬರುವ 2029ರ ಲೋಕಸಭಾ ಚುನಾವಣೆಯ ಉಸ್ತುವಾರಿ ಹೊರಿಸಲು ಹೈಕಮಾಂಡ್ ಯೋಚಿಸಿದೆ. ಜೊತೆಗೆ ಅವರಿಗೆ ರಾಜ್ಯಸಭಾ ಸ್ಥಾನದ ಆಫರ್ ಕೂಡ ನೀಡಲಾಗಿದೆ.
ಪವರ್-ಶೇರಿಂಗ್ ಸೂತ್ರದ ಪ್ರಮುಖಾಂಶಗಳು:
ಡಿಕೆ ಶಿವಕುಮಾರ್ ಸಿಎಂ: ಸಿದ್ದರಾಮಯ್ಯ ಅವರು ಗುರುವಾರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಲಿದ್ದಾರೆ.
ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ: ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಎಸ್‌ಟಿ (ST) ಸಮುದಾಯದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಯಲ್ಲಿದೆ.
ಡಾ. ಯತೀಂದ್ರ ಸಿದ್ದರಾಮಯ್ಯಗೆ ಸಚಿವ ಸ್ಥಾನ: ಸದ್ಯ ಎಂಎಲ್‌ಸಿ ಆಗಿರುವ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರಿಗೆ ಹೊಸ ಶಿವಕುಮಾರ್ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ನೀಡುವ ಮೂಲಕ ಸಿದ್ದರಾಮಯ್ಯ ಬಣವನ್ನು ಸಮಾಧಾನಪಡಿಸಲು ಹೈಕಮಾಂಡ್ ಮುಂದಾಗಿದೆ.
ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಂದಿಗೆ ಒನ್-ಟು-ಒನ್ ಚರ್ಚೆ ನಡೆಸಿ ಈ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಉಭಯ ನಾಯಕರು ಈ ಬಗ್ಗೆ ಮೌನ ವಹಿಸಿದ್ದು, ಗುರುವಾರ ಬೆಳಗ್ಗೆ ಕಾವೇರಿ ನಿವಾಸದಲ್ಲಿ ನಡೆಯಲಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಉಪಾಹಾರ ಸಭೆಯ ನಂತರ ಅಧಿಕೃತ ಚಿತ್ರಣ ಹೊರಬೀಳಲಿದೆ.





Leave a comment