Home ದಾವಣಗೆರೆ ಇದೊಂದು ಪುಣ್ಯ ಕೆಲಸ: ಮದುವೆ ಉಡುಗೊರೆಯಾಗಿ ಇಡೀ ಹಳ್ಳಿಗರಿಗೇ ₹34 ಕೋಟಿ ಮೌಲ್ಯದ ವಿಮೆ ಮಾಡಿಸಿದ ವರನ ಕುಟುಂಬ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಇದೊಂದು ಪುಣ್ಯ ಕೆಲಸ: ಮದುವೆ ಉಡುಗೊರೆಯಾಗಿ ಇಡೀ ಹಳ್ಳಿಗರಿಗೇ ₹34 ಕೋಟಿ ಮೌಲ್ಯದ ವಿಮೆ ಮಾಡಿಸಿದ ವರನ ಕುಟುಂಬ!

Share
ಮದುವೆ
Share

ನಾಂದೇಡ್ (ಮಹಾರಾಷ್ಟ್ರ): ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಲಕ್ಷ ಲಕ್ಷ ಖರ್ಚು ಮಾಡಿ ಡಿಸೈನರ್ ಉಡುಪುಗಳು, ಐಷಾರಾಮಿ ಕಲ್ಯಾಣ ಮಂಟಪಗಳು ಹಾಗೂ ದುಬಾರಿ ರಿಟರ್ನ್ ಗಿಫ್ಟ್ ಕೊಡುವುದೇ ದೊಡ್ಡ ಟ್ರೆಂಡ್ ಆಗಿದೆ. ಆದರೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕುಟುಂಬವೊಂದು ತನ್ನ ಮಗನ ಮದುವೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ವಿಭಿನ್ನವಾಗಿ ಆಚರಿಸಿ, ಎಲ್ಲರ ಹೃದಯ ಗೆದ್ದಿದೆ.

ಮದುವೆಗೆ ಬಂದವರಿಗೆ ಸಿಹಿ ತಿಂಡಿ ಅಥವಾ ಉಡುಗೊರೆ ನೀಡುವ ಬದಲಿ, ಇಡೀ ಹಳ್ಳಿಯ ಜನರಿಗೇ ಅಪಘಾತ ವಿಮಾ ಸೌಲಭ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ!

ಇಡೀ ಹಳ್ಳಿಗೆ ಸಿಕ್ಕಿತು ₹34.6 ಕೋಟಿಯ ಸುರಕ್ಷತಾ ಕವಚ!

ನಾಂದೇಡ್ ಜಿಲ್ಲೆಯ ಕಂಧಾರ್ ತಾಲೂಕಿನ ಬಹದ್ದೂರ್‌ಪುರ ಗ್ರಾಮದ ಸಿದ್ದೇಶ್ವರ್ ಪೆತ್ಕರ್ ಎಂಬುವವರ ವಿವಾಹವು ಮೇ 20 ರಂದು ಜರುಗಿತು. ಈ ಸಂದರ್ಭದಲ್ಲಿ ವರನ ಪೆತ್ಕರ್ ಕುಟುಂಬವು ಗ್ರಾಮದ ಒಟ್ಟು 3,465 ನಿವಾಸಿಗಳಿಗೆ ತಲಾ 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು (Accident Insurance Cover) ಉಡುಗೊರೆಯಾಗಿ ಘೋಷಿಸಿದೆ. ಈ ಮೂಲಕ ಇಡೀ ಗ್ರಾಮಕ್ಕೆ ಒಟ್ಟಾರೆಯಾಗಿ ಬರೋಬ್ಬರಿ 34.6 ಕೋಟಿ ರೂಪಾಯಿ ಮೌಲ್ಯದ ಸಾಮಾಜಿಕ ಭದ್ರತಾ ಕವಚವನ್ನು ಈ ಕುಟುಂಬ ಸೃಷ್ಟಿಸಿಕೊಟ್ಟಿದೆ.

ಐಡಿಯಾ ಬಂದಿದ್ದು ಹೇಗೆ?

ಗ್ರಾಮೀಣ ಭಾಗದಲ್ಲಿ ಹಾವಿನ ಕಡಿತ, ಸಿಡಿಲು ಬಡಿಯುವುದು ಹಾಗೂ ಕೃಷಿ ಚಟುವಟಿಕೆಗಳ ವೇಳೆ ನಡೆಯುವ ಆಕಸ್ಮಿಕ ಅಪಘಾತಗಳಿಂದಾಗಿ ಹಲವರು ಜೀವ ಕಳೆದುಕೊಳ್ಳುವುದನ್ನು ಪೆತ್ಕರ್ ಕುಟುಂಬ ಹತ್ತಿರದಿಂದ ಕಂಡಿತ್ತು. ಇಂತಹ ದುರಂತಗಳು ಸಂಭವಿಸಿದಾಗ ಬಡ ಕುಟುಂಬಗಳು ಆರ್ಥಿಕವಾಗಿ ಸಂಪೂರ್ಣವಾಗಿ ಬೀದಿಗೆ ಬೀಳುತ್ತವೆ. ಇದನ್ನು ತಡೆಯಲು ಮದುವೆಯ ನೆಪದಲ್ಲಿ ಏನಾದರೂ ಅರ್ಥಪೂರ್ಣ ಕೊಡುಗೆ ನೀಡಲು ಕುಟುಂಬ ನಿರ್ಧರಿಸಿತು.

ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ವಿಮೆ:

ಗ್ರಾಮ ಪಂಚಾಯತ್ ಮೂಲಕ ಈ ಸಮೂಹ ಅಪಘಾತ ವಿಮಾ ಪಾಲಿಸಿಯನ್ನು ಖರೀದಿಸಲಾಗಿದೆ. ಯಾವುದೇ ಸಂಕೀರ್ಣ ಪ್ರಕ್ರಿಯೆ ಅಥವಾ ತಾರತಮ್ಯಕ್ಕೆ ಆಸ್ಪದ ನೀಡದೆ, ಗ್ರಾಮದ ಮತದಾರರ ಪಟ್ಟಿಯನ್ನು ಆಧರಿಸಿ ಅರ್ಹರಾಗಿರುವ ಪ್ರತಿಯೊಬ್ಬ ನಿವಾಸಿಯನ್ನೂ ಈ ಯೋಜನೆಯಲ್ಲಿ ಸೇರಿಸಲಾಗಿದೆ. ಈ ಪಾಲಿಸಿಯು ಒಂದು ವರ್ಷದ ಅವಧಿಗೆ ಚಾಲ್ತಿಯಲ್ಲಿರಲಿದೆ.

ತಮ್ಮ ಈ ಸಾಮಾಜಿಕ ಕಾರ್ಯಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬುದನ್ನು ಬಹಿರಂಗಪಡಿಸಲು ಪೆತ್ಕರ್ ಕುಟುಂಬ ನಿರಾಕರಿಸಿದ್ದು, “ದಾನ ಧರ್ಮಗಳನ್ನು ಸಂಖ್ಯೆಗಳಿಗೆ ಸೀಮಿತಗೊಳಿಸಬಾರದು” ಎಂದು ವಿನಮ್ರವಾಗಿ ಹೇಳಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಮದುವೆಯ ರಿಟರ್ನ್ ಗಿಫ್ಟ್ ಐಡಿಯಾಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *