ಬೆಂಗಳೂರು: ನಟಿ ಸೌಂದರ್ಯ ಎಂದರೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಇಂದಿಗೂ ಒಂದು ಅದ್ಭುತ ಗೌರವ. ಆದರೆ, ಸಿನೆಮಾ ರಂಗದಲ್ಲಿ ಲಕ್ಷಾಂತರ ಜನರ ಪ್ರೀತಿ ಗಳಿಸಿದ ಈ ಮಹಾನಟಿ, ತನ್ನ ಮೊದಲ ಫೋಟೋಶೂಟ್ ಸಮಯದಲ್ಲಿ “ನನಗೆ ಸಿನೆಮಾವೇ ಬೇಡ” ಎಂದು ಕನ್ನಡಿಯ ಮುಂದೆ ಕಣ್ಣೀರಿಟ್ಟಿದ್ದರು ಎಂಬ ಅಪರೂಪದ ಸತ್ಯವೊಂದು ಹಿರಿಯ ಛಾಯಾಗ್ರಾಹಕರೊಬ್ಬರ ನೆನಪಿನ ಪುಟಗಳಿಂದ ಹೊರಬಂದಿದೆ.
ಅಪ್ಪನ ಕನಸು – ಮಗಳ ಹಿಂಜರಿಕೆ:
ಸೌಂದರ್ಯ ಅವರ ತಂದೆ, ಪತ್ರಕರ್ತ ಹಾಗೂ ಬರಹಗಾರರಾಗಿದ್ದ ಸತ್ಯನಾರಾಯಣ್ ಅವರು ಮಗಳಿಗೆ ತೆಲುಗು ಚಿತ್ರರಂಗದಿಂದ ಬಂದ ಅವಕಾಶಕ್ಕಾಗಿ ಫೋಟೋಶೂಟ್ ಮಾಡಿಸಲು ಸ್ಟುಡಿಯೋಗೆ ಕರೆತಂದಿದ್ದರು.
ಆದರೆ ಮೇಕಪ್ ಆದ ನಂತರ ಸೌಂದರ್ಯ ಸ್ಟುಡಿಯೋದ ಒಳಗೆ ಬರದೆ ಮೇಕಪ್ ರೂಮಿನಲ್ಲಿ ಅಳುತ್ತಾ ಕುಳಿತಿದ್ದರು. “ನನಗೆ ಸಿನೆಮಾ ಬೇಡ” ಎಂದು ಹಠ ಹಿಡಿದಿದ್ದ ಸೌಂದರ್ಯ ಅವರಿಗೆ, ಛಾಯಾಗ್ರಾಹಕರು “ಫೋಟೋ ತೆಗೆಸಿಕೊಂಡ ತಕ್ಷಣ ಸಿನೆಮಾ ಮಾಡಲೇಬೇಕೆಂದಿಲ್ಲ, ಅಪ್ಪನ ಉತ್ಸಾಹಕ್ಕೆ ನೀರೆರೆಯಬೇಡ” ಎಂದು ಸಮಾಧಾನಪಡಿಸಿ ಮೊದಲ ಬಾರಿ ಕ್ಯಾಮೆರಾ ಮುಂದೆ ನಿಲ್ಲಿಸಿದ್ದರು. ಆ ದಿನ ಕ್ಲಿಕ್ಕಿಸಿದ ಫೋಟೋಗಳೇ ಸೌಂದರ್ಯ ಅವರ ಸಿನಿ ಪಯಣಕ್ಕೆ ಮುನ್ನುಡಿ ಬರೆದವು.
ಯಶಸ್ಸಿನ ಉತ್ತುಂಗದಲ್ಲೂ ಮರೆಯದ ವಿನಯ:
ಅದೇ ಸೌಂದರ್ಯ ಮುಂದೆ ತೆಲುಗು, ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಬೆಳೆದು ಹನುಮಂತನಗರದಲ್ಲಿ ದೊಡ್ಡ ಮನೆ ಕಟ್ಟಿಸಿದರು. ಸ್ಟಾರ್ ನಟಿಯಾಗಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೆ, ಮೇಕಪ್ ಮ್ಯಾನ್ ಮತ್ತು ಹೇರ್ ಡ್ರೆಸ್ಸರ್ ಇಲ್ಲದಿದ್ದರೂ ಛಾಯಾಗ್ರಾಹಕರ ಮೇಲಿನ ಗೌರವಕ್ಕೆ ಮರುದಿನವೇ ಸ್ವತಃ ಸ್ಟುಡಿಯೋಗೆ ಬಂದು ಫೋಟೋಶೂಟ್ ಮುಗಿಸಿಕೊಟ್ಟಿದ್ದರು.
“ಚಿತ್ರರಂಗಕ್ಕೆ ಬರದಿದ್ದರೆ ದೊಡ್ಡ ತಪ್ಪು ಮಾಡುತ್ತಿದ್ದೆ”:
ಎರಡನೇ ಬಾರಿ ಫೋಟೋಶೂಟ್ ಸಂದರ್ಭದಲ್ಲಿ ಛಾಯಾಗ್ರಾಹಕರು ಹಳೆಯ ಘಟನೆಯನ್ನು ನೆನಪಿಸಿದಾಗ ಸೌಂದರ್ಯ ನಗುತ್ತಾ, “ನಿಜವಾಗಿ ನಾನು ಪುಣ್ಯ ಮಾಡಿದ್ದೇನೆ. ಲಕ್ಷಾಂತರ ಜನರ ಪ್ರೀತಿ ವಿಶ್ವಾಸವನ್ನು ನೋಡಿದ ಮೇಲೆ, ಚಿತ್ರರಂಗಕ್ಕೆ ಬರದಿದ್ದರೆ ದೊಡ್ಡ ತಪ್ಪು ಮಾಡುತ್ತಿದ್ದೆನೇನೋ ಅನಿಸುತ್ತಿದೆ” ಎಂದು ಕೃತಜ್ಞತೆ ಸಲ್ಲಿಸಿದ್ದರು. ಒಬ್ಬ ಮುಗ್ಧ ಹುಡುಗಿ ತನ್ನ ಶ್ರಮ ಮತ್ತು ಅದೃಷ್ಟದಿಂದ ಮಹಾನಟಿಯಾಗಿ ಬೆಳೆದ ಅಪರೂಪದ ಕ್ಷಣಗಳಿಗೆ ಈ ಎರಡು ವಿಭಿನ್ನ ಕಾಲಘಟ್ಟದ ಫೋಟೋಶೂಟ್‌ಗಳು ಸಾಕ್ಷಿಯಾಗಿವೆ.





Leave a comment