Home ಕ್ರೈಂ ನ್ಯೂಸ್ ಗೋಹತ್ಯೆ ನಿಯಮಕ್ಕೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂರ ತಳಮಳ: ಸರ್ಕಾರಕ್ಕೆ ಎಂಎಲ್‌ಎ ಹುಮಾಯೂನ್ ಕಬೀರ್ ನೇರ ಸವಾಲು, ಮುಸ್ಲಿಂ ನಾಯಕರಿಂದ ಸಾಮರಸ್ಯದ ಕರೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗೋಹತ್ಯೆ ನಿಯಮಕ್ಕೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂರ ತಳಮಳ: ಸರ್ಕಾರಕ್ಕೆ ಎಂಎಲ್‌ಎ ಹುಮಾಯೂನ್ ಕಬೀರ್ ನೇರ ಸವಾಲು, ಮುಸ್ಲಿಂ ನಾಯಕರಿಂದ ಸಾಮರಸ್ಯದ ಕರೆ!

Share
ಪಶ್ಚಿಮ ಬಂಗಾಳ
Share

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮೊದಲ ದೊಡ್ಡ ರಾಜಕೀಯ ಮತ್ತು ಕಾನೂನು ಸವಾಲು ಎದುರಾಗಿದೆ. ಮುಂಬರುವ ಈದ್ ಉಲ್ ಅಧಾ (ಬಕ್ರೀದ್) ಹಬ್ಬದ ಮುನ್ನವೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಗೋಹತ್ಯೆ ನಿಯಂತ್ರಣ ಮಾರ್ಗಸೂಚಿಗಳು ಈಗ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿವೆ.

ಆಮ್ ಜನತಾ ಉನ್ನಯನ ಪಾರ್ಟಿ (AJUP) ಮುಖ್ಯಸ್ಥ ಹಾಗೂ ಶಾಸಕ ಹುಮಾಯೂನ್ ಕಬೀರ್ ಸರ್ಕಾರದ ಈ ನಿಯಮಾವಳಿಗಳನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. “ಕುರ್ಬಾನಿ ಎನ್ನುವುದು 1,400 ವರ್ಷಗಳ ಹಳೆಯ ಧಾರ್ಮಿಕ ಸಂಪ್ರದಾಯ. ಸರ್ಕಾರ ಗೋಮಾಂಸ ಸೇವನೆಯನ್ನು ನಿಯಂತ್ರಿಸಬಹುದೇ ಹೊರತು, ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಯಾವುದೇ ನಿರ್ಬಂಧಗಳಿದ್ದರೂ ಕುರ್ಬಾನಿ ಆಚರಣೆ ಮುಂದುವರಿಯುತ್ತದೆ,” ಎಂದು ಕಬೀರ್ ಸವಾಲು ಹಾಕಿದ್ದಾರೆ.

ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ (TMC) ಶಾಸಕ ಅಕ್ರುಜ್ಜಮಾನ್ ಮತ್ತು ಸಿಪಿಐ(ಎಂಎಲ್) ಈ ನಿಯಮಗಳನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಕೋರ್ಟ್‌ನಲ್ಲಿ ವಾದ ಮಂಡಿಸಿ, ಈ ನಿಯಮಗಳಿಂದಾಗಿ ಜಾನುವಾರು ಸಾಕಣೆಯನ್ನೇ ನಂಬಿರುವ ಬಡ ರೈತರಿಗೆ ಆರ್ಥಿಕ ನಷ್ಟವಾಗಲಿದೆ ಎಂದಿದ್ದಾರೆ. ಸದ್ಯ ಹೈಕೋರ್ಟ್ ಈ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದೆ. ಆದರೆ, ಸರ್ಕಾರದ ಸಚಿವ ದಿಲೀಪ್ ಘೋಷ್ ಮಾತನಾಡಿ, ಜಾನುವಾರು ಕಾಯ್ದೆಯನ್ನು ಧರ್ಮಕ್ಕೆ ಲಿಂಕ್ ಮಾಡಬಾರದು, ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಿಸಬೇಕು ಎಂದಿದ್ದಾರೆ.

ಮುಸ್ಲಿಂ ಧರ್ಮಗುರುಗಳಿಂದ ಶಾಂತಿ ಮತ್ತು ಸಾಮರಸ್ಯದ ಕರೆ:

ರಾಜಕೀಯ ಸಂಘರ್ಷ ಒಂದೆಡೆಯಾದರೆ, ಕೋಲ್ಕತ್ತಾದ ಐತಿಹಾಸಿಕ ನಾಖೋಡಾ ಮಸೀದಿಯ ಇಮಾಮ್ ಮೌಲಾನಾ ಮೊಹಮ್ಮದ್ ಶಫಿಕ್ ಖಾಸ್ಮಿ ಮತ್ತು ಫುರ್ಫುರಾ ಷರೀಫ್‌ನ ಪೀರ್ಜಾದಾ ತೋಹಾ ಸಿದ್ದಿಕಿ ಸೇರಿದಂತೆ ಪ್ರಮುಖ ಮುಸ್ಲಿಂ ಧರ್ಮಗುರುಗಳು ಸಮುದಾಯಕ್ಕೆ ಮಹತ್ವದ ಮನವಿ ಮಾಡಿದ್ದಾರೆ. ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಮತ್ತು ಸರ್ಕಾರದ ನಿಯಮಗಳಿಂದಾಗುವ ಅನಗತ್ಯ ಗೊಂದಲಗಳನ್ನು ತಪ್ಪಿಸಲು ಈ ಬಾರಿ ಹಸುವಿನ ಬದಲು ಮೇಕೆಗಳನ್ನು ಕುರ್ಬಾನಿ (ತ್ಯಾಗ) ನೀಡುವಂತೆ ಅವರು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಏನಿದೆ ಸರ್ಕಾರದ ಹೊಸ ನೋಟಿಸ್‌ನಲ್ಲಿ?

ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ 1950ರ ಅನ್ವಯ, ಯಾವುದೇ ಜಾನುವಾರುಗಳಿಗೆ 14 ವರ್ಷ ಮೇಲಾಗದ ಹೊರತು ಅಥವಾ ಅದು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗದ ಹೊರತು ಹತ್ಯೆ ಮಾಡುವಂತಿಲ್ಲ. ಇದಕ್ಕೆ ಪಶುವೈದ್ಯಾಧಿಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಜಂಟಿ ಪ್ರಮಾಣಪತ್ರ ಕಡ್ಡಾಯ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಕಡಿಯುವುದನ್ನು ನಿಷೇಧಿಸಿ, ಕೇವಲ ಸರ್ಕಾರಿ ಕಸಾಯಿಖಾನೆಗಳಲ್ಲಷ್ಟೇ ಹತ್ಯೆ ಮಾಡಲು ಅವಕಾಶ ನೀಡಲಾಗಿದೆ.

Share

Leave a comment

Leave a Reply

Your email address will not be published. Required fields are marked *