Home ಕ್ರೈಂ ನ್ಯೂಸ್ ಭ್ರಷ್ಟ ತಿಮಿಂಗಲ ಬಲೆಗೆ: ವಾಟರ್ ಬೋರ್ಡ್ ಮ್ಯಾನೇಜರ್ ನಿವಾಸದ ಮೇಲೆ ಎಸಿಬಿ ದಾಳಿ ವೇಳೆ ಬರೋಬ್ಬರಿ 100 ಕೋಟಿ ರೂ. ಆಸ್ತಿ ಪತ್ತೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುವಾಣಿಜ್ಯ

ಭ್ರಷ್ಟ ತಿಮಿಂಗಲ ಬಲೆಗೆ: ವಾಟರ್ ಬೋರ್ಡ್ ಮ್ಯಾನೇಜರ್ ನಿವಾಸದ ಮೇಲೆ ಎಸಿಬಿ ದಾಳಿ ವೇಳೆ ಬರೋಬ್ಬರಿ 100 ಕೋಟಿ ರೂ. ಆಸ್ತಿ ಪತ್ತೆ!

Share
ಎಸಿಬಿ
Share

ಹೈದರಾಬಾದ್: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (HMWSSB) ಮ್ಯಾನೇಜರ್ ಅನಂತ ಲಕ್ಷ್ಮಿ ಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ದಿಢೀರ್ ದಾಳಿ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲೇ ಬರೋಬ್ಬರಿ 100 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

1.10 ಕೋಟಿ ನಗದು, 1 ಕೆಜಿ ಚಿನ್ನ ವಶ:

ಎಸಿಬಿ ಅಧಿಕಾರಿಗಳ ತಂಡವು ಹೈದರಾಬಾದ್‌ನ ಮಲ್ಲಾಪುರದಲ್ಲಿರುವ ಅನಂತ ಲಕ್ಷ್ಮಿ ಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಬರೋಬ್ಬರಿ 1.10 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಇದರೊಂದಿಗೆ ಸುಮಾರು 1 ಕೆಜಿ ತೂಕದ ಚಿನ್ನದ ಆಭರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿತ ಅಧಿಕಾರಿಯ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಮುಂದುವರಿದಿದೆ.

ಗೇಟೆಡ್ ಕಮ್ಯುನಿಟಿಯಲ್ಲಿ ಫ್ಲಾಟ್‌ಗಳು, ಜಮೀನು ಪತ್ತೆ:

ದಾಳಿ ವೇಳೆ ಅಧಿಕಾರಿಗಳು ಭಾರಿ ಪ್ರಮಾಣದ ಸ್ಥಿರಾಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್‌ನ ಪ್ರತಿಷ್ಠಿತ ಗೇಟೆಡ್ ಕಮ್ಯುನಿಟಿಗಳಲ್ಲಿ 3 ಐಷಾರಾಮಿ ಫ್ಲಾಟ್‌ಗಳು, ನಗರದ ವಿವಿಧೆಡೆ 6 ಓಪನ್ ಸೈಟ್‌ಗಳು (ನಿವೇಶನಗಳು) ಹಾಗೂ ನಿಜಾಮಾಬಾದ್ ಜಿಲ್ಲೆಯಲ್ಲಿ ಸುಮಾರು 3 ಎಕರೆ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ. ಇದರೊಂದಿಗೆ ಸುಜುಕಿ ರಿಟ್ಜ್ ಮತ್ತು ಮಾರುತಿ ಬ್ರೆಜ್ಜಾ ಕಾರುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕ್ ಲಾಕರ್‌ಗಳ ಮೇಲೆ ಎಸಿಬಿ ಕಣ್ಣು:

ಸದ್ಯ ಎಸಿಬಿ ಶೋಧ ಕಾರ್ಯ ಮುಂದುವರಿದಿದ್ದು, ಅನಂತ ಲಕ್ಷ್ಮಿ ಕುಮಾರ್ ಹೆಸರಿನಲ್ಲಿರುವ ಬ್ಯಾಂಕ್ ಲಾಕರ್‌ಗಳನ್ನು ತೆರೆದು ಪರಿಶೀಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಲಾಕರ್‌ಗಳನ್ನು ತಪಾಸಣೆ ನಡೆಸಿದ ಬಳಿಕ ಮತ್ತಷ್ಟು ಕೌತುಕದ ಮಾಹಿತಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles