Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಹನಿಟ್ರ್ಯಾಪ್‌ ಜಾಲ ಪತ್ತೆ: ಯುವಕರ ಬೀಳಿಸಿ ಲಕ್ಷ ಲಕ್ಷ ಸುಲಿಗೆ ಮಾಡ್ತಿದ್ದ ಕಿಲಾಡಿ ಮಹಿಳೆ ಸೇರಿ ಐವರು ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಹನಿಟ್ರ್ಯಾಪ್‌ ಜಾಲ ಪತ್ತೆ: ಯುವಕರ ಬೀಳಿಸಿ ಲಕ್ಷ ಲಕ್ಷ ಸುಲಿಗೆ ಮಾಡ್ತಿದ್ದ ಕಿಲಾಡಿ ಮಹಿಳೆ ಸೇರಿ ಐವರು ಅರೆಸ್ಟ್!

Share
ದಾವಣಗೆರೆ
Share

ದಾವಣಗೆರೆ: ಶ್ರೀಮಂತ ಯುವಕರನ್ನೇ ಟಾರ್ಗೆಟ್ ಮಾಡಿ, ಸ್ನೇಹದ ನಾಟಕವಾಡಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಖತರ್ನಾಕ್ ಹನಿಟ್ರ್ಯಾಪ್ ಗ್ಯಾಂಗ್ ಒಂದನ್ನು ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿ ಹೆಡೆಮುರಿ ಕಟ್ಟಿದ್ದಾರೆ. ಯುವಕನಿಗೆ ವಂಚಿಸಿ ಚಿನ್ನ ಹಾಗೂ ನಗದು ಸುಲಿಗೆ ಮಾಡಿದ್ದ ಒಬ್ಬ ಮಹಿಳೆ ಸೇರಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಯಾರು?

ಯುವಕರೊಂದಿಗೆ ಸ್ನೇಹ ಬೆಳೆಸಿ ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಳ್ಳುತ್ತಿದ್ದ ಕಿಲಾಡಿ ಮಹಿಳೆ ಪಂಚಮಿ (34) ಹಾಗೂ ಆಕೆಗೆ ಸಾಥ್ ನೀಡುತ್ತಿದ್ದ ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25), ವೆಂಕಟೇಶ್ (30) ಮತ್ತು ಸುರೇಶ್ ಬಂಧಿತ ಕಿರಾತಕರು. ಬಂಧಿತರಿಂದ ಸುಮಾರು 10.20 ಲಕ್ಷ ರೂಪಾಯಿ ಮೌಲ್ಯದ 80.16 ಗ್ರಾಂ ಚಿನ್ನದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 8 ಲಕ್ಷ ರೂ. ಮೌಲ್ಯದ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏನಿದು ಘಟನೆ? ಕಿಲಾಡಿಗಳ ಪ್ಲಾನ್ ಹೇಗಿತ್ತು?

ದಾವಣಗೆರೆ ಎಸ್ಪಿ ಶೇಖರ್ ಹೆಚ್. ಟಿ. ಅವರು ನೀಡಿರುವ ಮಾಹಿತಿ ಪ್ರಕಾರ, ಹನಿಟ್ರ್ಯಾಪ್ ಕಥೆ ಶುರುವಾಗಿದ್ದು ಹೀಗೆ:

ಸ್ನೇಹದ ಜಾಲ: ದೂರುದಾರರಾದ ಅಭಿಷೇಕ್ ಎಂಬ ಯುವಕನಿಗೆ ಆರೋಪಿ ಪಂಚಮಿ ಕಳೆದ ಒಂದು ತಿಂಗಳಿನಿಂದ ಪರಿಚಯವಾಗಿದ್ದಳು. ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆದರೆ, ದಿನ ಕಳೆದಂತೆ ಆಕೆಯ ವರ್ತನೆ ಬಗ್ಗೆ ಅನುಮಾನ ಬಂದು ಅಭಿಷೇಕ್ ಮಾತನಾಡುವುದನ್ನು ನಿಲ್ಲಿಸಿದ್ದರು.

ನಿರ್ಜನ ಪ್ರದೇಶಕ್ಕೆ ಕರೆ: ಇದರಿಂದ ರೊಚ್ಚಿಗೆದ್ದ ಪಂಚಮಿ, “ನಿನ್ನ ಜೊತೆ ಕೊನೆಯದಾಗಿ ಮಾತನಾಡಬೇಕು, ಬಾ” ಎಂದು ಹರಿಹರ ರಸ್ತೆಯ ಬಾತಿ ಗ್ರಾಮದ ಬಳಿಯ ನಿರ್ಜನ ಪ್ರದೇಶಕ್ಕೆ ಮೇ 11 ರಂದು ಅಭಿಷೇಕ್‌ನನ್ನು ಕರೆಸಿಕೊಂಡಿದ್ದಾಳೆ.

ಗ್ಯಾಂಗ್‌ನಿಂದ ಅಟ್ಯಾಕ್: ಅಭಿಷೇಕ್ ಅಲ್ಲಿಗೆ ಹೋಗಿ ಮಾತನಾಡುತ್ತಾ ನಿಂತಿದ್ದಾಗ, ಸಂಚಿನ ಭಾಗವಾಗಿ ಇನೋವಾ ಕಾರು ಮತ್ತು ಸ್ಕೂಟಿಯಲ್ಲಿ ಎಂಟ್ರಿ ಕೊಟ್ಟ ಉಳಿದ ನಾಲ್ವರು ಆರೋಪಿಗಳು, ಅಭಿಷೇಕ್ ಮೇಲೆ ಮುಗಿಬಿದ್ದಿದ್ದಾರೆ. ತೀವ್ರ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿ ಮೈಮೇಲಿದ್ದ 80 ಗ್ರಾಂ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು.

ಪೊಲೀಸರ ಮಿಂಚಿನ ಕಾರ್ಯಾಚರಣೆ

ರಕ್ತಸಿಕ್ತವಾಗಿ ಪಾರಾಗಿದ್ದ ಅಭಿಷೇಕ್ ತಕ್ಷಣ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಇನ್​ಸ್ಪೆಕ್ಟರ್ ಹಾಗೂ ಸಬ್​ ಇನ್​ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಕಾರ್ಯಾಚರಣೆ ನಡೆಸಿ ಕೇವಲ ಕೆಲವೇ ದಿನಗಳಲ್ಲಿ ಐದೂ ಜನ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಆರೋಪಿಗಳಿಂದ ಒಟ್ಟು 18.80 ಲಕ್ಷ ರೂಪಾಯಿ ಮೌಲ್ಯದ ಮುದ್ದೆಮಾಲನ್ನು ರಿಕವರಿ ಮಾಡಲಾಗಿದೆ.

ಸಾರ್ವಜನಿಕರಿಗೆ ಎಸ್ಪಿ ಮನವಿ:

“ಪ್ರಾಥಮಿಕ ತನಿಖೆಯಿಂದ ಇದು ಪಕ್ಕಾ ಹನಿಟ್ರ್ಯಾಪ್ ದಂಧೆಯಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆರೋಪಿಗಳ ವಿರುದ್ಧ ಈ ಮುಂಚೆ ಯಾವುದೇ ಕೇಸ್ ಇರಲಿಲ್ಲ. ಇದೇ ಗ್ಯಾಂಗ್ ಬೇರೆ ಯಾರಿಗಾದರೂ ಈ ರೀತಿ ವಂಚಿಸಿದ್ದರೆ, ಧೈರ್ಯವಾಗಿ ಠಾಣೆಗೆ ಬಂದು ಮಾಹಿತಿ ನೀಡಿ, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು” ಎಂದು ಎಸ್ಪಿ ಶೇಖರ್ ಹೆಚ್. ಟಿ. ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles