SUDDIKSHANA KANNADA NEWS/ DAVANAGERE/ DATE:03-11-2024
ದಾವಣಗೆರೆ: ಹಿಂದೂ ಹುಲಿ ಎಂದೇ ತಾನೇ ಕರೆದುಕೊಳ್ಳುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ಮನೆಯಲ್ಲೇ ತಿಂದವರು. ಅವರ ಮನೆಯಲ್ಲೇ ತಿಂದು ಅವರಿಗೆ ಗಳ ಎಣಿಸ್ತೀರಾ. ತಿಂದ ಮೇಲೆ ಗಳ ಎಣಿಸೋದು ಇದೇನಾ?. ಇನ್ನು ಮುಂದಾದರೂ ಮಾಜಿ ಸಿಎಂ ಯಡಿಯೂರಪ್ಪರ ಬಗ್ಗೆ ಮಾತನಾಡುವುದನ್ನು ಕೈಬಿಡಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರನ್ನು ವೇದಿಕೆ ಹತ್ತಿಸಬಾರದು ಎನ್ನುವ ನಿಮಗೆ ನಾಚಿಕೆ ಆಗುವುದಿಲ್ಲವೇ? ಯಡಿಯೂರಪ್ಪ ವಿರುದ್ಧ ಏನೇನು ಕೇಸ್, ಷಡ್ಯಂತ್ರ ನಡೆಸಿದವರು ಕಣ್ಮುಂದೆ ಇದ್ದಾರೆ. ಬೇರೆಯವರು ಯಾರಾದರೂ ಆಗಿದ್ದರೆ ಸತ್ತು ಬಹಳ ದಿನಗಳು ಆಗಿರುತ್ತಿದ್ದವು. ಅಂಥ ನೋವು ಸಹಿಸಿಕೊಂಡು ಎಲ್ಲರಿಗೂ ಮಾರ್ಗದರ್ಶನ ಮಾಡಿದ್ದಾರೆ. ಪಕ್ಷಕ್ಕೋಸ್ಕರ, ರಾಜ್ಯಕ್ಕೋಸ್ಕರ ಜೀವನವನ್ನೇ ಮುಡುಪಾಗಿಟ್ಟವರು. ಪೊರಕೆ, ಒನಕೆ ಸೇವೆಯಲ್ಲ, ಎಲ್ಲಾ ಸೇವೆಗಳನ್ನೂ ಮಾಡುತ್ತೇವೆ. ವಿಜಯೇಂದ್ರ, ಯಡಿಯೂರಪ್ಪ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ನಿಲ್ಲಿಸದಿದ್ದರೆ ನೋಡೇಬಿಡೋಣ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋರಾಟ ಮಾಡಿದವರು ಈಗ ಯಾಕೆ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಎಲ್ಲಾ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಕೊಡಿಸಲು ಹಾಗೂ ಒಬಿಸಿಗೆ ಸೇರಿಸಲು ಮಾಜಿ ಸಿಎಂ ಯಡಿಯೂರಪ್ಪ ಪ್ರಯತ್ನ ಮಾಡಿದರು. ಜಾತಿ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪಂಚಮಸಾಲಿಗಳು ದೇಶಭಕ್ತರು. ಅವರೆಲ್ಲರೂ ಚನ್ನಮ್ಮನ ವಂಶಸ್ಥರು. ಹಿಂದುತ್ವದ ಪರವಾಗಿ ಇರುವವರು. ಅವರನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಯತ್ನಾಳ್ ಮಾತನಾಡುವುದೇ ಸರಿಯಾಗಿ ಕೇಳಲ್ಲ. ಒಪ್ಪುವುದಿಲ್ಲ, ಒಪ್ಪುತ್ತೀಯಾ ಎಂಬ ಮಾತೇ ಅವರದ್ದು ಸರಿಯಾಗಿ ಅರ್ಥವಾಗಿಲ್ಲ. ನೀವೆಲ್ಲರೂ ಪಕ್ಷ ಹಾಳು ಮಾಡಲು ನಿಂತಿರುವುದು. ಯಾವುದೇ ಕಾರಣಕ್ಕೂ ಕಾರ್ಯಕರ್ತರು ನಿಮ್ಮ
ನಡವಳಿಕೆ ಸಹಿಸಲ್ಲ. ನರೇಂದ್ರ ಮೋದಿ, ಜೆ. ಪಿ. ನಡ್ಡಾ, ಅಮಿತ್ ಶಾ, ಸಂತೋಷ್ ಅವರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡಿರುವುದು. ನಿಮ್ಮಂಥ ಸಾವಿರಾರು ನಾಯಕರು ಬಿಜೆಪಿ ಪಕ್ಷದಲ್ಲಿ ಬಂದು ಹೋಗಿದ್ದಾರೆ. ಇಂಥವನ್ನೆಲ್ಲಾ ಬಿಟ್ಟುಬಿಡಿ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರು ನಿಮ್ಮಂಥ ನೂರಾರು ನಾಯಕರನ್ನು ಹುಟ್ಟು ಹಾಕಿದ್ದಾರೆ. ಪಾದಯಾತ್ರೆ, ಹೋರಾಟ ಮಾಡಿದ್ದಾರೆ. ಯಡಿಯೂರಪ್ಪರ ವಿರುದ್ಧದ ಕೇಸ್ ಗಳೆಲ್ಲವೂ ಷಡ್ಯಂತ್ರವೇ. ಬಿಜೆಪಿ ಪಕ್ಷದವರು ಹಾಗೂ ಕಾಂಗ್ರೆಸ್ ನವರ ಷಡ್ಯಂತ್ರ ಮಾಡಲಾಗಿದೆ. ಮುತ್ಸದ್ಧಿ ರಾಜಕಾರಣಿಯಾದ ಯಡಿಯೂರಪ್ಪ ಅವರು ಬೇರೆಯವರ ಬಗ್ಗೆ ಮಾತನಾಡಬೇಡಿ ಎನ್ನುತ್ತಾರೆ. ಅವರೇ ಸರಿಹೋಗುತ್ತಾರೆ ಬಿಡಿ ಎಂದು ಸಲಹೆ ನೀಡುತ್ತಾರೆ. ನಾವು ಎಷ್ಟು ಎಂದು ತಡೆದುಕೊಳ್ಳೋದು. ಇನ್ನು ಮುಂದಾದರೂ ಮಾತನಾಡುವುದನ್ನು ಬಿಡಬೇಕು. ಸಮಸ್ಯೆಗಳಿದ್ದರೆ ಪಕ್ಷದ ಹೈಕಮಾಂಡ್ ಗೆ ಹೋಗಿ ಹೇಳಲಿ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಲಿ. ಹೊಂದಾಣಿಕೆ ರಾಜಕಾರಣ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.