ದಾವಣಗೆರೆ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯಬಾರದು. ಹೈಕಮಾಂಡ್ ತೆಗೆದುಕೊಂಡಿರುವ ತೀರ್ಮಾನ ಸ್ವಾಗತಿಸುತ್ತೇನೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಕೆ. ಚಮನ್ ಸಾಬ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಧಾರ್ಮಿಕ ಮುಖಂಡರು ನಾಯಕರು ಅಬ್ದುಲ್ ಜಬ್ಬಾರ್ ಸೇರಿದಂತೆ ಕೆಲವೇ ಕೆಲವರಿಗಾಗಿ ಸಮುದಾಯ ಬಲಿಕೊಡಬಾರದು. ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ, ಅಲ್ಪಸಂಖ್ಯಾತರ ಕಡೆಗಣನೆ ಮಾಡಿದೆ
ಎಂದು ಬೇರೆ ಎಲ್ಲೋ ಕುಳಿತು ಮಾತನಾಡುತ್ತಿದ್ದಾರೆ. ಜಾತಿ, ಧರ್ಮ ಎಳೆತಂದು ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ನೂರಾರು ಮುಸ್ಲಿಂ ನಾಯಕರಿಗೆ ತೊಂದರೆ ಮಾಡುವ ಉದ್ದೇಶ ಕೆಲವರದ್ದಾಗಿದೆ. ಜಾತಿ, ಧರ್ಮದ ಬಗ್ಗೆ ಬೇಧ ಭಾವ ಮಾಡಿದರೆ ಚುನಾವಣೆಗೆ ನಿಲ್ಲುವವರ ಪಾಡೇನು. ನೀವು ಕೇವಲ ಆರು ಮಂದಿಗೋಸ್ಕರ ಮುಸ್ಲಿಂ ನಾಯಕತ್ವ ಬಲಿ ಕೊಡುವ ಕೆಲಸ ಮಾಡುವುದು ಬೇಡ. ಯಾರೂ ರಾಜಕೀಯದಲ್ಲಿ ಧರ್ಮ ಬೆರೆಸಬೇಡಿ ಎಂದು ಹೇಳಿದರು.
ವಾಸ್ತವ ಅಂಶ ಅರಿಯದೇ ಯಾರೋ ಅನ್ಯಾಯ ಆಗಿದೆ ಎಂದು ಹೇಳಿದ್ದನ್ನೇ ನಂಬಬೇಡಿ. ಕೋಮುಸೌಹಾರ್ದ ಕದಡುವ ಎಸ್ ಡಿಪಿಐ, ಒವೈಸಿ ನೇತೃತ್ವದ ಪಕ್ಷ ಮಾಡುತ್ತಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಶಾಂತಿ ಕದಡುವಂತೆ ಈ ಸಂಘಟನೆಗಳು ಮಾಡುತ್ತಿವೆ. ಮುಸ್ಲಿಂರು ಕಾಂಗ್ರೆಸ್ ಪಕ್ಷದ ಜೊತೆಗಿದ್ದಾರೆ. ಕಾಂಗ್ರೆಸ್ ಪಕ್ಷವು ಮುಸ್ಲಿಂರ ಜೊತೆಗಿದೆ. ಕೆಲವೊಬ್ಬರು ಮಾತ್ರ ಪ್ರಚೋದನೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವ ಮುಸ್ಲಿಂ ಸಮುದಾಯದ ಆಕಾಂಕ್ಷಿಗಳಿಗೆ ತೊದರೆ ಉಂಟು ಮಾಡುತ್ತಿದ್ದಾರೆ. ಇದು ಮಾಡಬಾರದು. ಇದನ್ನು ಇಲ್ಲಿಗೆ ನಿಲ್ಲಿಸಿ. ಷಡ್ಯಂತ್ರಕ್ಕೆ ಯಾರೂ ಬಲಿಯಾಗಬೇಡಿ ಎಂದು ಮನವಿ ಮಾಡಿದರು.
ದಾವಣಗೆರೆ ವಿಚಾರದಲ್ಲಿ ಮುಸ್ಲಿಂರಿಗೆ ಅನ್ಯಾಯವಾಗಿದೆ ಎಂಬುದು ಸತ್ಯವಲ್ಲ. ವಾಸ್ತವಾಂಶ ಗೊತ್ತಿಲ್ಲದೇ ಇದ್ದರೆ ಇಲ್ಲಿಗೆ ಬನ್ನಿ. ಮೇ. 4ರವರೆಗೆ ಸಮಾಧಾನದಿಂದ ಇರಿ.ಮುಸ್ಲಿಂ ಸಮುದಾಯದವರು ಯಾರಿಗೆ ಮತ ಹಾಕಿದ್ದಾರೆ ಎಂಬುದು ಗೊತ್ತಾಗುತ್ತದೆ. ಎಲ್ಲೋ ಕುಳಿತು ಅಪಪ್ರಚಾರ ಮಾಡಬಾರದು. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಚೋದನೆ ಮಾಡುವ ಜನರಿಗೆ ತಕ್ಕ ಪಾಠ ನಿಶ್ಚಿತ. ಮಾಹಿತಿ ಇಲ್ಲದಿದ್ದರೆ ಇಲ್ಲಿಗೆ ಬಂದು ಎರಡು ದಿನ ವಾಸ್ತವ್ಯ ಹೂಡಿ ನಾಯಕರ ಜೊತೆ ಮಾತನಾಡಿ. ಆಗ ವಾಸ್ತವಾಂಶ ಗೊತ್ತಾಗುತ್ತದೆ ಎಂದರು.
ಅಬ್ದುಲ್ ಜಬ್ಬಾರ್ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೇಳುವಾಗ ಯಾವ ಚುನಾಯಿತ ಜನಪ್ರತಿನಿಧಿ ಇದ್ದರು ಎಂಬುದನ್ನು ಹೇಳಲಿ. ಕುರುಬರು, ಉಪ್ಪಾರರು ಸೇರಿದಂತೆ ಯಾವ ಸಮುದಾಯದವರು ಒತ್ತಾಯ ಮಾಡಿದರು. ಅಬ್ದುಲ್ ಜಬ್ಬಾರ್ ವಿರುದ್ಧ ತೆಗೆದುಕೊಂಡಿರುವ ಕ್ರಮ ಸರಿಯಾಗಿಯೇ ಇದೆ ಎಂದು ಕೆ. ಚಮನ್ ಸಾಬ್ ಹೇಳಿದರು.
- Abdul Jabbar
- Anti-party activities
- Congress Expulsion
- DAVANAGERE NEWS
- Davanagere Politics
- K Chaman Saab
- Karnataka Congress
- KPCC decision
- MLC Abdul Jabbar
- Muslim Leadership
- ಅಬ್ದುಲ್ ಜಬ್ಬಾರ್
- ಅಲ್ಪಸಂಖ್ಯಾತ ನಾಯಕರು
- ಕಾಂಗ್ರೆಸ್ ಉಚ್ಚಾಟನೆ
- ಕೆ. ಚಮನ್ ಸಾಬ್
- ಕೆಪಿಸಿಸಿ
- ದಾವಣಗೆರೆ ದಕ್ಷಿಣ
- ದಾವಣಗೆರೆ ರಾಜಕೀಯ
- ಪಕ್ಷ ವಿರೋಧಿ ಚಟುವಟಿಕೆ
- ಪತ್ರಿಕಾಗೋಷ್ಠಿ
- ಮುಸ್ಲಿಂ ಸಮುದಾಯ





Leave a comment