ದಾವಣಗೆರೆ: ಆಯುರ್ವೇದ ಚಿಕಿತ್ಸಾಲಯದಲ್ಲಿ ರೋಗಿಗಳಿಗೆ ನೀಡುವ ಆಯುರ್ವೇದ ಔಷಧಗಳ ಬಾಟಲಿಗಳು ಧೂಳು ಹಿಡಿದು ಅಸ್ವಚ್ಛತೆಯಿಂದ ಕೂಡಿರುವುದನ್ನು ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಅಣಬೇರು ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕಿತ್ಸಾಲಯದ ಔಷಧ ಮಳಿಗೆಯಲ್ಲಿರುವ ವಿವಿಧ ಆಯುರ್ವೇದ ಸಿರಪ್‌ಗಳು, ಮಾತ್ರೆಗಳು ಹಾಗೂ ಲೇಹಗಳ ದಾಸ್ತಾನು ಮತ್ತು ಅವುಗಳ ಎಕ್ಸ್ಪೈರಿ ದಿನಾಂಕವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಔಷಧ ಮಳಿಗೆಯಲ್ಲಿ ಸಾಲು ಸಾಲಾಗಿ ಇಡಲಾಗಿರುವ ಅರಿಷ್ಟ ಮತ್ತು ಸಿರಪ್ ಬಾಟಲಿಗಳ ಮೇಲೆ ದಪ್ಪನಾದ ಧೂಳಿನ ಪದರ ಕಂಡು ಬಂದಿದೆ. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತ್ಪಪ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಜನರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಯಲ್ಲಿ ಹೀಗೆ ಔಷಧ ಮೇಲೆ ಧೂಳು ಇರುವುದು ಎಷ್ಟು ಸರಿ? ಇಲ್ಲಿ ಸ್ವಚ್ಛತೆ ಕಾಪಾಡುವವರು ಯಾರು ಇಲ್ಲವೇ? ಎಂದು ಪ್ರಶ್ನಿಸಿದ ಅವರು, ಧೂಳು ಹಿಡಿದ ಬಾಟಲಿಗಳನ್ನು ಸಿಬ್ಬಂದಿಗೆ ತೋರಿಸಿ ತರಾಟೆಗೆ ತೆಗೆದುಕೊಂಡರು.
ಸರ್ಕಾರದಿಂದ ಪೂರೈಕೆಯಾಗುವ ಸ್ಟೀಮ್ ಬಾತ್‌ನಂತಹ ಅತ್ಯಾಧುನಿಕ ಉಪಕರಣಗಳು ಮತ್ತು ಗಿಡಮೂಲಿಕೆ ಔಷಧಗಳು ಮೂಲೆಯಲ್ಲಿ ಧೂಳು ಹಿಡಿಯದಂತೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸಬೇಕು.
-ಕೆ.ಎಸ್.ಬಸವಂತಪ್ಪ, ಶಾಸಕ
ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ರೋಗಿಗಳಿಗೆ ಸುರಕ್ಷಿತ ಔಷಧಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಚಿಕಿತ್ಸಾಲಯಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಮತ್ತು ರೋಗಿಗಳಿಗೆ ಸರಿಯಾದ ಸಮಯಕ್ಕೆ ಗುಣಮಟ್ಟದ ಔಷಧಗಳನ್ನು ವಿತರಿಸಬೇಕು. ಆಯುರ್ವೇದ ಆಸ್ಪತ್ರೆಗಳಲ್ಲಿ ಗುಣಮುಖವಾಗುವ ಔಷಧ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಆಗ ಜನರು ಆಯುರ್ವೇದ ಆಸ್ಪತ್ರೆಯತ್ತ ಮುಖ ಮಾಡುತ್ತಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ವೈದ್ಯರು, ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಸ್ಪತ್ರೆಗೆ ಬರಲು ಸಾಧ್ಯವಾಗದ ಗ್ರಾಮೀಣ ಜನರಿಗೆ, ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಿ ಔಷಧಿಗಳ ವಿತರಣೆ ಮತ್ತು ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಬೇಕು. ಆಗ ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ವ್ಯರ್ಥವಾಗದೆ ಸರಿಯಾಗಿ ತಲುಪಿಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜಣ್ಣ, ಬುಡೆನ್ ಸಾಬ್, ಶಿವಣ್ಣ, ಶೇಖರಪ್ಪ, ರುದ್ರಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.
- Anaberu Ayurveda Hospital
- Ayush Hospital Cleaning
- Ayushman Health Mandir
- DAVANAGERE NEWS
- Government Hospital Negligence
- Karnataka health news
- Medicine Stock Inspection
- MLA KS Basavanthappa
- ಅಣಬೇರು ಆಯುರ್ವೇದ ಆಸ್ಪತ್ರೆ
- ಆಯುಷ್ ಇಲಾಖೆ
- ಔಷಧಗಳ ನಿರ್ಲಕ್ಷ್ಯ
- ಕರ್ನಾಟಕ ಆರೋಗ್ಯ ಇಲಾಖೆ
- ಕೆ ಎಸ್ ಬಸವಂತಪ್ಪ
- ದಾವಣಗೆರೆ ಸುದ್ದಿ
- ಶಾಸಕರ ಭೇಟಿ
- ಸರ್ಕಾರಿ ಆಸ್ಪತ್ರೆ ಅಸ್ವಚ್ಛತೆ





Leave a comment