ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಈ ಚುನಾವಣೆ ದೇಶಕ್ಕೆ ದಿಕ್ಸೂಚಿಯಾಗಲಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹೇಳಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಮೂರನೇ ತಲೆಮಾರಿಗೆ ಟಿಕೆಟ್ ನೀಡಿದ್ದಾರೆ. ಇನ್ನೂ ಎಷ್ಟು ತಲೆಮಾರು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಬೇಕು ಎಂದು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಈ ಚುನಾವಣೆ ಅಲ್ಪಸಂಖ್ಯಾತರ ಸ್ವಾಭಿಮಾನಕ್ಕೆ, ಭವಿಷ್ಯಕ್ಕೆ ಮುಖ್ಯವಾಗಲಿದೆ. ಬಿಜೆಪಿ ಗೆಲುವು ದೇಶಕ್ಕೆ ಮುನ್ನೋಟವಾಗಲಿ. ಎಂಜಿನಿಯರಿಂಗ್ ಪದವೀಧರರಾದ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಗೆಲವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಒಂದೇ ಕುಟುಂಬದವರೇ ಗೆಲ್ಲುತ್ತಿದ್ದರು ಎಂಬ ನೋವು ಹಲವು ಜನರಲ್ಲಿ ಇತ್ತು. ಆದರೆ ಈ ಬಾರಿ ಬಿಜೆಪಿ ಗೆಲುವು ಸಾಧಿಸಿ ಆ ನೋವು ವಾಸಿಯಾಗಲಿದೆ ಎಂದು ನುಡಿದರು.
ದಾವಣಗೆರೆಯಲ್ಲಿ ಅಲ್ಪಸಂಖ್ಯಾತರ ಮತಗಳೇ ಪ್ರಮುಖ. ಈಗ ಅವರು ಕಾಂಗ್ರೆಸ್‌ಗೆ ಬುದ್ಧಿ ಕಲಿಸುತ್ತೇವೆ ಅಂತ ಸಂದೇಶ ಕೊಟ್ಟಿದ್ದಾರೆ. ನಾನು ಸಹ ಹಲವಾರು ಚುನಾವಣೆಗಳನ್ನು ನೋಡಿದ್ದೇನೆ, ಎದುರಿಸಿದ್ದೇನೆ. ಆದರೆ ದಾವಣಗೆರೆಯಲ್ಲಿ ಈಗ ಸೃಷ್ಟಿಯಾದ ಸನ್ನಿವೇಶ ಈ ಹಿಂದೆ ಎಂದೂ ಆಗಿರಲಿಲ್ಲ. ಇದೇ 9 ರಂದು ಎಲ್ಲವೂ ತೀರ್ಮಾನವಾಗಲಿದೆ. ಒಂದೇ ಕುಟುಂಬವೇ ಪಕ್ಷಕ್ಕೆ ಅನಿವಾರ್ಯ ಅಲ್ಲ ಎಂಬುದು ತಿಳಿಯಲಿದೆ ಎಂದರು.
ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಆಗಿ ಉಳಿದಿಲ್ಲ. ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಇದು ಸ್ವಾಭಿಮಾನದ ಚುನಾವಣೆ. ಮಧ್ಯ ಕರ್ನಾಟಕದ ದಾವಣಗೆರೆ ಅಭಿವೃದ್ಧಿಯಾಗಬೇಕು. ಒಂದೇ ಕುಟುಂಬದವರು ಆನೆ ನಡೆದಿದ್ದೇ ದಾರಿ ಎಂದು ತಿಳಿದುಕೊಂಡಿದ್ದಾರೆ. ಅದು ದಾರಿ ಅಲ್ಲ. ಕವಲು ದಾರಿ ಎಂಬುದು ತಿಳಿಯಲಿದೆ ಎಂದರು.
ದಾವಣಗೆರೆಗೆ ಈ ಹಿಂದಿನ ಸಂಸದರಾದ ಜಿ ಎಂ ಸಿದ್ದೇಶ್ವರ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಅಭಿವೃದ್ಧಿ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ ಬಿಜೆಪಿ ಗೆಲುವು ಸಾಧಿಸಬೇಕು ಎಂದು ನುಡಿದರು.
ನಾನು ರೈಲ್ವೆ ಖಾತೆ ಸಚಿವನಾದ ನಂತರ ರಾಜ್ಯದಲ್ಲಿ ಸಾಕಷ್ಟು ರೈಲ್ವೆ ಕಾಮಗಾರಿಗಳನ್ನು ಮಾಡಿಸಿದ್ದೇನೆ. ಹೊಸ ಮಾರ್ಗ, ಆರ್‌ಒಬಿ, ಆರ್‌ಯುಬಿ, ಲೆವೆಲ್ ಕ್ರಾಸಿಂಗ್ ಹೀಗೆ ಎಲ್ಲಾ ಕಾಮಗಾರಿಗಳು ನಡೆದಿವೆ. ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವುದು, ಹೊಸ ರೈಲುಗಳ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಆದರೆ ನನ್ನ ಕೆಲಸದ ಬಗ್ಗೆ ಸಿದ್ದರಾಮಯ್ಯ ಅವರು ಟೀಕೆ ಮಾಡುತ್ತಾರೆ. ಅವರು ದೆಹಲಿಯ ನನ್ನ ಕಚೇರಿಗೆ ಬಂದು ನೋಡಲಿ ನಾನು ಹೇಗೆ ಕೆಲಸ ಮಾಡುತ್ತೇನೆ ಎಂಬುದು ತಿಳಿಯಲಿದೆ ಎಂದರು.
ನಾವು ಎಂದೂ ಓಲೈಕೆ ರಾಜಕಾರಣ ಮಾಡಿದವರಲ್ಲ. ಕೂಪ ಮಂಡೂಕದ ಭಾವನೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡುವುದನು ನಿಲ್ಲಿಸಬೇಕು. ಮುಖ್ಯಮಂತ್ರಿಯಾಗಿ ಗೌರವದಿಂದ ನಡೆದುಕೊಳ್ಳಬೇಕು. ಪ್ರಧಾನಿ, ಕೇಂದ್ರ ಸಚಿವರ ಬಗ್ಗೆ ವಿನಾಕಾರಣ ಟೀಕೆ ಮಾಡಬಾರದು ಎಂದರು.
- BJP Candidate
- Davanagere Election 2026
- Davanagere News today.
- Davanagere South Constituency.
- Karnataka Politics News
- Minorities support BJP
- Railway development Karnataka
- Srinivas Das Kariyappa
- V Somanna
- V Somanna vs Siddaramaiah
- ಅಲ್ಪಸಂಖ್ಯಾತರ ಮತಗಳು
- ಕರ್ನಾಟಕ ರೈಲ್ವೆ ಅಭಿವೃದ್ಧಿ
- ದಾವಣಗೆರೆ ಚುನಾವಣೆ 2026
- ದಾವಣಗೆರೆ ದಕ್ಷಿಣ ಕ್ಷೇತ್ರ ಅನುದಾನ
- ದಾವಣಗೆರೆ ನ್ಯೂಸ್
- ಬಿಜೆಪಿ ಗೆಲುವು
- ರಾಜಕೀಯ ಸುದ್ದಿ.
- ವಿ ಸೋಮಣ್ಣ
- ಶ್ರೀನಿವಾಸ್ ದಾಸ್ ಕರಿಯಪ್ಪ
- ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ವಾಗ್ದಾಳಿ





Leave a comment