Home ದಾವಣಗೆರೆ “ನಾವು ಪಕ್ಷ ವಿರೋಧಿಗಳಲ್ಲ, ಕರೆಯದ ಜಾಗಕ್ಕೆ ಹೋಗದಿದ್ದರೂ ಕಾಂಗ್ರೆಸ್‌ಗೆ ನಮ್ಮ ಪರೋಕ್ಷ ಬೆಂಬಲ”: ಅಬ್ದುಲ್ ಜಬ್ಬಾರ್ ಸೇರಿ ಅಹಿಂದ ನಾಯಕರ ಸ್ಪಷ್ಟನೆ!
ದಾವಣಗೆರೆಬೆಂಗಳೂರು

“ನಾವು ಪಕ್ಷ ವಿರೋಧಿಗಳಲ್ಲ, ಕರೆಯದ ಜಾಗಕ್ಕೆ ಹೋಗದಿದ್ದರೂ ಕಾಂಗ್ರೆಸ್‌ಗೆ ನಮ್ಮ ಪರೋಕ್ಷ ಬೆಂಬಲ”: ಅಬ್ದುಲ್ ಜಬ್ಬಾರ್ ಸೇರಿ ಅಹಿಂದ ನಾಯಕರ ಸ್ಪಷ್ಟನೆ!

Share
ಅಬ್ದುಲ್ ಜಬ್ಬಾರ್
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಅನಾವಶ್ಯಕ ಗೊಂದಲದ ಹೇಳಿಕೆಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅಹಿಂದ ಮತ್ತು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ತನಗೆ ಹುಷಾರಿಲ್ಲದ ಕಾರಣ ಸಿಎಂ ಸಿದ್ದರಾಮಯ್ಯರು ಬಂದಾಗ ಬಂದಿರಲಿಲ್ಲ. ಜ್ವರ, ಕೆಮ್ಮು, ನೆಗಡಿ ಇತ್ತು. ಮೈಯಲ್ಲಿ ಹುಷಾರಿಲ್ಲದ ಕಾರಣ ಹೋಗಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನೇನೂ ಪಕ್ಷ ವಿರೋಧಿ ಅಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ದನಿದ್ದೇನೆ ಎಂದು ತಿಳಿಸಿದರು.

ಯಾರ ಹೆಸರನ್ನೂ ನಾವು ಪ್ರಸ್ತಾಪಿಸಿರಲಿಲ್ಲ:

ಕಳೆದ ತಿಂಗಳೇ ನಾವು ಪತ್ರಿಕಾಗೋಷ್ಠಿ ನಡೆಸಿ, ಈ ಬಾರಿ ಅಲ್ಪಸಂಖ್ಯಾತರಿಗೆ ಅಥವಾ ಅಹಿಂದ ವರ್ಗದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದೆವು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಪಂಚಮಸಾಲಿ ಲಿಂಗಾಯತರಿಗೆ ಅವಕಾಶ ನೀಡಲು ಕೋರಿದ್ದೆವು. ಆದರೆ ನಾವು ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ರಾಜ್ಯ ನಾಯಕರಿಗೆ ಸೂಚಿಸಿರಲಿಲ್ಲ. ಪಕ್ಷದ ಹೈಕಮಾಂಡ್ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ, ಅದನ್ನು ನಾವು ಗೌರವಿಸುತ್ತೇವೆ ಎಂದು ಮುಖಂಡರು ತಿಳಿಸಿದರು.

ಪ್ರಚಾರದಿಂದ ದೂರವಿರಲು ಕಾರಣವೇನು?:

“ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಾಗಲಿ ಅಥವಾ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಾಗಲಿ ಇದುವರೆಗೂ ನಮ್ಮನ್ನು ಪ್ರಚಾರಕ್ಕೆ ಸೌಜನ್ಯಕ್ಕಾದರೂ ಕರೆದಿಲ್ಲ. ಕರೆದಿಲ್ಲ ಎಂಬ ಕಾರಣಕ್ಕೆ ನಾವು ಪ್ರಚಾರದಲ್ಲಿ ಭಾಗವಹಿಸಿಲ್ಲ
ಹೊರತು, ನಮ್ಮ ಮೇಲೆ ಹಬ್ಬಿಸುತ್ತಿರುವಂತೆ ನಾವು ಯಾರ ವಿರುದ್ಧವೂ ಇಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಬದಲಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ನಮ್ಮ ಶಕ್ತಿ ಮೀರಿ ಪರೋಕ್ಷವಾಗಿ ಶ್ರಮಿಸುತ್ತಿದ್ದೇವೆ”
ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಪತ್ರಿಕಾಗೋಷ್ಠಿಯ ಮೂಲಕ ತಮ್ಮ ಮೇಲಿನ ಅಪಪ್ರಚಾರಕ್ಕೆ ತೆರೆ ಎಳೆದಿರುವ ನಾಯಕರು, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಬೆಂಬಲ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇದೆ ಎಂದು ಪುನರುಚ್ಚರಿಸಿದರು. ಗೋಷ್ಠಿಯಲ್ಲಿ ಅಬ್ದುಲ್ ಜಬ್ಬಾರ್ ಟೀಂನ ಸದಸ್ಯರಾದ ಸುಭಾಶ್ಚಂದ್ರ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *