ದಾವಣಗೆರೆ: ದಾವಣಗೆರೆಯನ್ನು ಔದ್ಯೋಗಿಕವಾಗಿ ಮತ್ತು ವಿದ್ಯಾನಗರಿಯಾಗಿ ಪರಿವರ್ತಿಸಿ, ರಾಜ್, ರಾಷ್ಟ್ರಮಟ್ಟದಲ್ಲಿ ಗುರಿತಿಸುವಂತೆ ಮಾಡಿದ ಕೀರ್ತಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ದಾವಣಗೆರೆ ಡಿಸಿಎಂ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಪರ ಪ್ರಚಾರ ನಡೆಸಿದ ಅವರು, ನೆರೆದಿದ್ದ ಜನ ಸಮೂಹ ಉದ್ದೇಶಿಸಿ ಮಾತನಾಡಿ, ದಾವಣಗೆರೆ ಔದ್ಯೋಗಿಕವಾಗಿ ಮತ್ತು ಶೈಕ್ಷಣಿಕವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲು ಶಾಮನೂರು ಶಿವಶಂಕರಪ್ಪ ಅವರು ಕಟ್ಟಿದ ಬಾಪೂಜಿ ಶಿಕ್ಷಣ ಸಂಸ್ಥೆ, ಎ.ವಿ,ಕೆ. ಮಹಿಳಾ ಕಾಲೇಜು, ಅಕ್ಕಿ ಗಿರಣಿ, ಸಕ್ಕರೆ ಕಾರ್ಖಾನೆ, ಡಿಸ್ಟಲರಿಗಳ ಪಾತ್ರ ಹಿರಿದಾಗಿದೆ ಎಂದರು.
ಶಾಮನೂರು ತಾವು ಗಳಿಸಿದ ಹಣವನ್ನು ಸಮಾಜಕ್ಕೆ ವಿನಿಯೋಗಿಸಿದರು. ಡಾ. ಶಾಮನೂರು ಶಿವಶಂಕರಪ್ಪ ಜನ ಕಲ್ಯಾಣ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗಾಗಿ 5 ಕೋಟಿ ಠೇವಣಿ ಇಟ್ಟಿದ್ದಾರೆ. ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1 ಕೋಟಿ ರೂಪಾಯಿ ಮೀಸಲಿಟ್ಟಾರೆ. ಜಾತಿ, ಮತ, ಧರ್ಮ ನೋಡದೆ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದು ತಿಳಿಸಿದರು.
ಕೊರೊನಾ ಕಾಲದಲ್ಲಿ ಜನ ಭಯಭೀತರಾಗಿದ್ದಾಗ, ಲಸಿಕೆ ಸಿಗದೆ ಪರದಾಡುತ್ತಿದ್ದಾಗ, ತಮ್ಮ ಸ್ವಂತ ಹಣ ನೀಡಿ ಲಸಿಕೆ ತರಿಸಿ ಇಡೀ ದಾವಣಗೆರೆ ಜಿಲ್ಲೆಯ ಜನರಿಗೆ ಲಸಿಕೆ ಯಾರಾದರೂ ಕೊಡಿಸಿದ್ದರೆ ಅದು ಶಾಮನೂರು ಶಿವಶಂಕರಪ್ಪ. ಇಂತಹ ದಾನಿಯ ನಿಧನದಿಂದ ತೆರವಾಗಿರುವ ಕ್ಷೇತ್ರದಲ್ಲಿ ಅವರ ಮೊಮ್ಮಗ ಸಮರ್ಥ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.





Leave a comment