Home ದಾವಣಗೆರೆ ನಂಬಿಕೆ ದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ; ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ: ಬಿ.ಎಸ್. ಯಡಿಯೂರಪ್ಪ ಆಕ್ರೋಶ
ದಾವಣಗೆರೆಬೆಂಗಳೂರು

ನಂಬಿಕೆ ದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ; ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ: ಬಿ.ಎಸ್. ಯಡಿಯೂರಪ್ಪ ಆಕ್ರೋಶ

Share
ಸಿದ್ದರಾಮಯ್ಯ
Share

ದಾವಣಗೆರೆ: ನಂಬಿಕೆ ದ್ರೋಹ ಮತ್ತು ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯರು. ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಹಗಲುದರೋಡೆಯಲ್ಲಿ ನಿರತವಾಗಿದೆ. ವರ್ಗಾವಣೆ, ಕಮೀಷನ್ ದಂಧೆ ಮಿತಿಮೀರಿದೆ. ಮೂಡಾ ಹಗರಣ, ಎಸ್ಟಿ ನಿಗಮದ 187 ಕೋಟಿ ರೂಪಾಯಿ ಅವ್ಯವಹಾರ ಸೇರಿದಂತೆ ಭ್ರಷ್ಟಾಚಾರ, ಮಿತಿಮೀರಿದ ಲಂಚಗುಳಿತನವೇ ಕಾಂಗ್ರೆಸ್ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಪಿಸಿದರು.

ನಗರದ ಅಪೂರ್ವ ರೆಸಾರ್ಟ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದು ಹಳೆಯ ವಿಚಾರ. ಈ ಹಣವನ್ನು ಬಳಸಿಕೊಳ್ಳುವ ಮೂಲಕ
ಎಸ್ಟಿ ಸಮುದಾಯಕ್ಕೆ ಈ ಸರ್ಕಾರ ದ್ರೋಹ ಬಗೆದಿದೆ. ಯಾವುದೇ ಕಾರಣಕ್ಕೂ ಜನರು ಕ್ಷಮಿಸಬಾರದು ಎಂದು ಮನವಿ ಮಾಡಿದರು.

ರಾಜ್ಯದ ಜನರ ಹಿತ ಮರೆತು ಅಭಿವೃದ್ಧಿ ಕಡೆಗೆ ಗಮನ ಕೊಡದೇ ಕಾಂಗ್ರೆಸ್ ಸರ್ಕಾರ ತುಘಲಕ್ ದರ್ಬಾರ್ ಮಾಡುತ್ತಿದೆ. ರಾಜ್ಯ ಕಂಡಂತ ಅತಿ ಭ್ರಷ್ಟ ಸರ್ಕಾರಕ್ಕೆ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ಇದೆ. ಕುರ್ಚಿ ಕಿತ್ತಾಟ ಜೋರಾಗಿದೆ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಭ್ರಷ್ಟಾಚಾರ ಮುಗಿಲುಮುಟ್ಟಿದ್ದೇ ಕಾಂಗ್ರೆಸ್ ಹೇಳಿಕೊಳ್ಳುವ ಸಾಧನೆಯಾಗಿಬಿಟ್ಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದೆ. ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಒಂದು ಕಿಲೋಮೀಟರ್ ರಸ್ತೆ ಕೂಡ ಆಗುತ್ತಿಲ್ಲ. ರೈತರಿಗೆ ವಿದ್ಯುತ್ ನೀಡುತ್ತಿಲ್ಲ. ಸಿಕ್ಕ ಸಿಕ್ಕ ವಸ್ತುಗಳ ಬೆಲೆ ಗಗನಕ್ಕೇರಿಸಿ ರಾಜ್ಯದ ಜನರ ಮೇಲೆ ಬರೆ ಎಳೆದಿದೆ. ನಾವು ಅಧಿಕಾರದಲ್ಲಿದ್ದಾಗ ರೈತ ಕಿಸಾನ್ ಸಮ್ಮಾನ್ ಯೋಜನೆಯಡಿ ನಾಲ್ಕು ಸಾವಿರ ಕೋಟಿ ರೂಪಾಯಿ ನೀಡಿದ್ದೆವು. ಆದರೆ ಈ ಸರ್ಕಾರ ಕಿತ್ತುಕೊಂಡಿದ್ದೇ ದೊಡ್ಡ ಸಾಧನೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಳಕೆಯಾಗಬೇಕಿದ್ದ 38 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿಕೊಂಡು ದ್ರೋಹ ಬಗೆದಿದೆ. ಕಾಂಗ್ರೆಸ್ ದುರಾಡಳಿತಕ್ಕೆ ದಾವಣಗೆರೆ ಜನರು ಮಾತ್ರವಲ್ಲ, ರಾಜ್ಯದ ಜನರು ಬೇಸತ್ತಿದ್ದಾರೆ. ಉಪಚುನಾವಣೆ ಕೇವಲ ಶಾಸಕರನ್ನೊಬ್ಬರನ್ನು ಆರಿಸುವುದಲ್ಲ. ರಾಜ್ಯದ ಜನರ ಪರವಾಗಿ, ಭ್ರಷ್ಟ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವ ಅವಕಾಶ ಮತದಾರರಿಗೆ ಸಿಕ್ಕಿದೆ ಎಂದು ಹೇಳಿದರು.

ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆಯುತ್ತಿರುವ ಉಪಚುನಾವಣೆಗಳು 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ. ಆದ್ದರಿಂದ ಎರಡೂ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಪರಿವರ್ತನೆಗೆ ಮತದಾರರು ಮುನ್ನುಡಿ ಬರೆಯಬೇಕಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಭಾರತಿ ಶೆಟ್ಟಿ, ಬಸವರಾಜ್ ನಾಯ್ಕ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *