ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್ ತಮ್ಮ ಉಮೇದುವಾರಿಕೆ ವಾಪಸ್ ಪಡೆಯಲು ನಿರಾಕರಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ಸಲೀಂ ಅಹ್ಮದ್, ರಿಜ್ವಾಲ್ ಅರ್ಷದ್ ಸಂಧಾನ ಯತ್ನ ವಿಫಲವಾಯಿತು.
ಇಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆ ಅವಕಾಶ ಆಗಿತ್ತು. ಬೆಳಿಗ್ಗೆಯಿಂದಲೂ ಸಾದಿಕ್ ಪೈಲ್ವಾನ್ ಮನೆಗೆ ತಮ್ಮ ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಮಾಜಿ ಮೇಯರ್, ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸಲು ಯತ್ನಿಸಿದರಾದರೂ ಸಫಲವಾಗಲಿಲ್ಲ.
ನಾಮಪತ್ರ ವಾಪಸ್ ಪಡೆಯದ ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರ ಪರ ಮುಸ್ಲಿಂ ಯುವಕರು ಘೋಷಣೆಗಳನ್ನು ಹಾಕಿದರು. ಈ ಬಾರಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಾದಿಕ್ ಪೈಲ್ವಾನ್ ರಣರಂಗದಿಂದ ಓಡಿ ಹೋಗಲ್ಲ, ಸ್ಪರ್ಧೆ ಮಾಡಿಯೇ ತೀರುತ್ತೇನೆ. ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ ಎಂದು ಘೋಷಿಸಿದರು.
ನನ್ನ ಮನವೊಲಿಕೆಗೆ ಬಂದಿದ್ದರೂ ಒಪ್ಪಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಲು ಯತ್ನಿಸಿದರೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದೇನೆ. ಈ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಜನರು ಪ್ರೀತಿ ತೋರಿದ್ದಾರೆ, ಜನರ ಪ್ರೀತಿಗೆ ನಾನು ಋಣಿಯಾಗಿರುತ್ತೇನೆ. ಈ ಬಾರಿಯ ಉಪಚುನಾವಣೆಯಲ್ಲಿ ಗೆಲುವು ನನ್ನದೇ. ಸಹೋದರ ಅಯೂಬ್ ಪೈಲ್ವಾನ್ ಸೇರಿ ಕಾಂಗ್ರೆಸ್ ನವರು ಬಂದಿದ್ದರು. ಅವರಿಗೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಎಂದು ತಿಳಿಸಿದ್ದೇನೆ ಎಂದರು.





Leave a comment