SUDDIKSHANA KANNADA NEWS/ DAVANAGERE/ DATE:16-08-2023
ದಾವಣಗೆರೆ: ವಿಶ್ವವನ್ನೇ ನಡುಗಿಸಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ ಭಯೋತ್ಪಾದನಾ ಚಟುವಟಿಕೆ ಮೂಲಕ ಕುಖ್ಯಾತಿ ಗಳಿಸಿದ್ದ. ಅಮೆರಿಕಾ ದೇಶವು ಈತನ ಸಂಹಾರಕ್ಕೆ ಮಾಡಿದ ಪ್ರಯತ್ನಗಳು ಕಡಿಮೆ ಏನಿಲ್ಲ. ಆಲ್ ಖೈದಾ ಎಂಬ ಉಗ್ರ ಸಂಘಟನೆಯ ಪ್ರಮುಖ ರೂವಾರಿಯಾದ ಲಾಡೆನ್ ಬಿಲ ಹುಡುಕಲು ಅಮೆರಿಕಾ ಸತತ ಪರಿಶ್ರಮ ಹಾಕಿತ್ತು. ಬಳಿಕ ಆತನನ್ನು ಹತ್ಯೆ ಮಾಡಲಾಗಿತ್ತು. ಈ ವಿಚಾರ ಈಗ ಯಾಕೆ ಅಂತೀರಾ. ವಿಶ್ವದ ಅಪಾಯಕಾರಿ ಉಗ್ರನ ಪತ್ತೆಗೆ ಚಾಣಾಕ್ಷ ಶ್ವಾನ (Dog) ಬಳಕೆಯಾಗಿತ್ತು. ಆ ಶ್ವಾನ ಈಗ ದಾವಣಗೆರೆಯಲ್ಲಿ ಅಪರಾಧ ಚಟುವಟಿಕೆ ನಡೆಸುವವರ ಎದೆ ನಡುಗುವಂತೆ ಮಾಡಿದೆ.
ಒಸಾಮಾ ಬಿನ್ ಲಾಡೆನ್ ಹತ್ಯೆ ಮಾಡಲು ಅಮೆರಿಕಾ ನಡೆಸಿದ ತಂತ್ರಗಳು ಒಂದೆರಡಲ್ಲ. ಆ ಬಳಿಕ ಆತ ಅಡಗಿಕೊಂಡಿದ್ದ ಬಿಲ ಹುಡುಕಲು ಅಮೆರಿಕಾ ಈ ಶ್ವಾನ ಬಳಕೆ ಮಾಡಿತ್ತು. ಕೇವಲ ಅಮೆರಿಕಾ ಮಾತ್ರವಲ್ಲ, ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಜಗದ್ವಿಖ್ಯಾತಿ ಹೊಂದಿದೆ ಈ ಡಿಟೆಕ್ಟಿವ್ ಶ್ವಾನ (Dog). ದಾವಣಗೆರೆಗೆ ಬಂದಿರುವ ಈ ತಳಿಯ ಶ್ವಾನ ಶುರುವಿನಿಂದಲೇ ಕ್ರಿಮಿನಲ್ ಗಳ ಹೆಡೆಮುರಿ ಕಟ್ಟಲು ಪೊಲೀಸರಿಗೆ ಸೇತುವೆಯಾಗಿ ನಿಂತಿದೆ.
2001ರ ಸೆಪ್ಟಂಬರ್ 11 ರಂದು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಾಗ ವಿಶ್ವವೇ ಬೆಚ್ಚಿ ಬಿದ್ದಿತ್ತು. ಆ ಬಳಿಕ ಅಮೆರಿಕಾ ಉಗ್ರನ ಸಂಹಾರಕ್ಕೆ ಅಮೆರಿಕಾ ಮಾಸ್ಟರ್ ಪ್ಲಾನ್ ಮಾಡಿತ್ತು. ಈ ಪ್ಲಾನ್ ನಲ್ಲಿ ಶ್ವಾನ(Dog)ವೊಂದು ಬಳಕೆಯಾಗಿತ್ತು. ಪಾಕಿಸ್ತಾನದ ಅಬೋಟಾಬಾದ್ನಲ್ಲಿನ ಕಾಂಪೌಂಡ್ನಲ್ಲಿ ಬಿನ್ ಲಾಡೆನ್ ಹತ್ಯೆಗೀಡಾಗಿದ್ದ. ಆದ್ರೆ, ಈತನ ಪತ್ತೆ ಕಾರ್ಯದಲ್ಲಿ ಈ ಶ್ವಾನ(Dog)ದ ಪರಿಶ್ರಮ ತಳ್ಳಿ ಹಾಕುವಂತಿಲ್ಲ.
ತುಂಗಾ ಸ್ಥಾನ ತುಂಬ್ತಿರೋ ತಾರಾ:
ಅಂದ ಹಾಗೆ, ದಾವಣಗೆರೆಯಲ್ಲಿ ಅಪರಾಧಿಗಳನ್ನು ಹಿಡಿಯಲು ಬಳಸಿಕೊಳ್ಳಲಾಗುತ್ತಿದೆ. ಈ ಶ್ವಾನ(Dog)ಕ್ಕೆ ತಾರಾ ಎಂದು ಹೆಸರು ಇಡಲಾಗಿದೆ. ತುಂಗಾ ನಿಧನದ ಬಳಿಕ ಆ ಸ್ಥಾನ ತುಂಬುವ ಎಲ್ಲಾ ಲಕ್ಷಣ ಗೋಚರಿಸಿದೆ. ಹಲವಾರು ಪ್ರಕರಣಗಳನ್ನು ಭೇದಿಸಿದ್ದ ತುಂಗಾ ಸಾವಿನ ಬಳಿಕ ಪೊಲೀಸ್ ಶ್ವಾನ ಪಡೆಗೆ ಚಾಣಾಕ್ಷ ಶ್ವಾನ ಬೇಕಿತ್ತು. ಬಂದ ಕಡಿಮೆ ಅವಧಿಯಲ್ಲಿ 14 ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ನೀಡಿ ಶಹಬ್ಬಾಸ್ ಎನಿಸಿಕೊಂಡಿದೆ.
8 ಕಿ.ಮೀ. ಕ್ರಮಿಸಿ ಕೊಲೆಗಾರ ಪತ್ತೆ ಹಚ್ಚಿದ್ದ ತಾರಾ:
ಕಳೆದ ಆಗಸ್ಟ್ 7ರಂದು ರಾಮನಗರದಲ್ಲಿ ತನ್ನ ಸ್ನೇಹಿತ ನರಸಿಂಹ ಎಂಬಾತನನ್ನು ಶಿವಯೋಗೀಶ್ ಅಲಿಯಾಸ್ ಯೋಗಿ ಎಂಬಾತ ಕೊಂದಿದ್ದ. ಆತನ ಸುಳಿವು ನೀಡಿದ್ದೇ ತಾರಾ. ಸುಮಾರು 8 ಕಿಲೋಮೀಟರ್ ವರೆಗೆ ಸಂಚರಿಸಿ ಆರೋಪಿ ಬಂಧಿಸಲು ಪೊಲೀಸ್ ಇಲಾಖೆಗೆ ತಾರಾ ಸಹಾಯ ಮಾಡಿತ್ತು. ಕೊಲೆಗೈದಿದ್ದಾತನ ಮನೆ ಬಳಿ ಹೋಗಿ ನಿಂತಿತ್ತು. ಶಿವಯೋಗೀಶ್ ನನ್ನು ವಿಚಾರಣೆಗೊಳಪಡಿಸಿದಾಗ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಬೆಲ್ಜಿಯನ್ ಮಾಲಿನೋಯಿಸ್ (Belgium malinois):
ಬೆಲ್ಜಿಯನ್ ಮಾಲಿನೋಯಿಸ್ (Belgium malinois) ಈ ಶ್ವಾನದ ಹೆಸರು. ಬೆಲ್ಜಿಯಂ ಮೂಲದ ನಾಲ್ಕು ದನ ಕುರಿ, ನಾಯಿ, ನರಿ ಕಾವಲುಗಳಲ್ಲಿ ಒಂದು. ಬೆಲ್ಜಿಯಂನ ಮಲಿನ್ ನಗರದಲ್ಲಿ ಈ ತಳಿ ಅಭಿವೃದ್ಧಿಪಡಿಸಲಾಯಿತು. ಎಕೆಶಿ ಅರ್ಡಿನ್ ಗ್ರೂಪ್ ಗೂ ಸೇರಿಸಲಾಗಿದೆ. ಬೆಲ್ಜಿಯಂ ಫೀಡಿಂಗ್ ವರ್ಕಿಂಗ್ ಡಾಗ್ ಆಗಿದ್ದು, ಅಧಿಕ ಶಕ್ತಿಯ ಅಗತ್ಯತೆ ಹಾಗೂ ಉತ್ತಮ ದರ್ಜೆ ಆಹಾರ ಪೂರೈಕೆ ಬೇಕೇ ಬೇಕು.
ಈ ಶ್ವಾನಕ್ಕೆ ಬೇಕು ಅಧಿಕ ಪ್ರೊಟೀನ್..!
ಅಸೋಸಿಯೇಷನ್ ಆಫ್ ಅಮೆರಿಕನ್ ಫೀಡ್ ಕಂಟ್ರೋಲ್ ಅಫಿಶಿಯಲ್ ಪ್ರಕಾರ ಈ ಶ್ವಾನಕ್ಕೆ ಅಧಿಕ ಪ್ರೋಟಿನ್ ಅಗತ್ಯ. ಸ್ನಾಯು ಮತ್ತು ಮೂಳೆ ಬಲವರ್ಧನೆ, ಕೊಬ್ಬು, ಕಾರ್ಬೋಹೈಡ್ರೆಟ್ಸ್ ಸೇರಿದಂತೆ ವಿಟಮಿನ್ ಅಗತ್ಯ.
ಕ್ರಿಯಾಶೀಲ ಶ್ವಾನ:
ಬೆಲ್ಜಿಯನ್ ಮಾಲಿನೋಯಿಸ್ (Belgium malinois) ಆ್ಯಕ್ಟಿವ್ ಡಾಗ್. ಯಾವಾಗಲೂ ಕ್ರಿಯಾಶೀಲವಾಗಿರುತ್ತವೆ. ಅಪಾರ್ಟ್ ಮೆಂಟ್ ವಾಸಕ್ಕೆ ಯೋಗ್ಯವಾಗಿಲ್ಲ. ಪ್ರತಿದಿನ ವ್ಯಾಯಾಮ ಅಗತ್ಯ. ನಿಗದಿತ ವ್ಯಾಯಾಮ, ಆಹಾರದಲ್ಲಿ ನಿಯಂತ್ರಣ ಇಲ್ಲದಿದ್ದರೆ ದಢೂತಿ ಆಗಿಬಿಡುತ್ತವೆ.
ಈ ಸುದ್ದಿಯನ್ನೂ ಓದಿ:
Minister: ಸಚಿವ ಮಲ್ಲಿಕಾರ್ಜುನ್ ತೇಜೋವಧೆ ಆಗುವಂತೆ ವಿಡಿಯೋ ಅಪ್ಲೋಡ್: ವಿಜಯ್ ಕುಮಾರ್ ಹಿರೇಮಠ್ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್
ವ್ಯಾಯಾಮ, ಶಕ್ತಿಶಾಲಿ ಅಥ್ಲೆಟಿಕ್ ಡಾಗ್. ಹೆಚ್ಚಿನ ಚಟುವಟಿಕೆ ಬಯಸುವ ಶ್ವಾನ. 20 ನಿಮಿಷದಂತೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಯೋಗಾಭ್ಯಾಸ ಅಗತ್ಯತೆ ಇದೆ. ವಾಕಿಂಗ್ ಕರೆಯುವುದು, ಫ್ಲೆಚ್ ಗೇಮ್, ಬೈಕ್ ಹಿಂದೆ ಓಡಿಸಬಹುದು. ವಿಶಾಲವಾದ ಕಾಂಪೌಂಡ್ ಗೆ ಬಿಡುವುದು, ಇತರ ನಾಯಿಗಳೊಂದಿಗೆ ಆಡಲುಬಿಡುವುದು ಉತ್ತಮ.
ಚಾಣಾಕ್ಷ ವೇಗ:
ಬೆಲ್ಜಿಯಂ ಮಾಲಿನೋಯಿಸ್ (Belgium malinois) ನಾಯಿಗಳು ಚಾಣಾಕ್ಷ, ವೇಗ, ಅತ್ಯಂತ ಸಾಮರ್ಥ್ಯ ಹೊಂದಿವೆ. ಜಗತ್ತಿನ ಅನೇಕ ರಾಷ್ಟ್ರಗಳು ಮತ್ತು ಸೇನೆಗಳು ಅಧಿಕವಾಗಿ ಬಳಸುವ ಶ್ವಾನ. ಲಾಡೆನ್ ಹತ್ಯೆ ವೇಳೆ ಅಮೆರಿಕಾ ಸೇನೆ ಕೂಡ ಇವುಗಳ ಬಳಸಿಕೊಂಡಿತ್ತು. ಚತುರ ನಾಯಿ ಕೂಡ ಹೌದು. 2018ರಿಂದ ಭಾರತದ ಪೊಲೀಸ್ ಪಡೆ ಶ್ವಾನ ದಳದಲ್ಲಿ ಬಳಸಲು ಪ್ರಾರಂಭಿಸಿದೆ.
ಈ ಶ್ವಾನಕ್ಕೆ ಯಾರನ್ನು ಕಂಡರೆ ಆಗದು..?
ಬೆಲ್ಜಿಯಂ ಮಾಲಿನೋಯಿಸ್ ಅತ್ಯಂತ ಸೂಕ್ಷ್ಮ ಸಂವೇದನೆ ಹೊಂದಿರುವ ಶ್ವಾನ. ಅಪರಿಚಿತರನ್ನು ಕಂಡರೆ ಆಗದು. ಇತರೆ ನಾಯಿಗಳನ್ನು ಕಂಡರೆ ಎಗರಿಬಿಡುತ್ತದೆ. ಹಾಗಾಗಿ, ಈ ಶ್ವಾನವು ಮರಿಯಾಗಿದ್ದಾಗಿನಿಂದಾಗಲೇ ಬೆರೆಯುವಂಥ ಗುಣ ಮೈಗೂಡಿಸುವ ಅವಶ್ಯಕತೆ ಇದೆ. ಎಳೆ ಮರಿಯಿಂದ ಇದ್ದಾಗಲೇ ಫ್ರೆಂಡ್ಲಿಯಾಗಿ ಬೆಳೆಸಿದರೆ ಬೆಳೆದ ಮೇಲೆ ಹೊಂದಿಕೊಂಡು ಹೋಗುವ ಗುಣ ಹೊಂದಿದೆ. 2 ತಿಂಗಳ ನಂತರ ತರಬೇತಿ ಚಿಕ್ಕದಾಗಿ ಬೆಳೆಸಬೇಕು. ರಿವಾರ್ಡ್ ಆಧಾರಿತ ತರಬೇತಿ ಇಷ್ಟಪಡುತ್ತವೆ. ದಂಡಿಸಿ ಕಲಿಸದೇ ಮುದ್ದಿಸಿ ಕಲಿಸುವುದು ಧನಾತ್ಮಕ. ಡಬಲ್ ಕೋಟ್ ಹೊಂದಿದ ನಾಯಿ. ಥಿಕ್ ಆದ ಔಟರ್ ಪೋಟ್. ವರ್ಷದಲ್ಲಿ ಎರಡು ಬಾರಿ ಕೂದಲು ತೆಗೆಯಬೇಕು. ಪ್ರತಿದಿನ ಗ್ರೋಮಿಂಗ್ ಮಾಡಬೇಕು. ನಿಯಮಿತ ಸ್ನಾನ, ಉಗುರು ಕತ್ತರಿಸಬೇಕು. ಸ್ನಾನ ಮಾಡಿಸಬೇಕು.
ಅಮೆರಿಕಾದ ಪ್ರಕಾರ ಬೆಲ್ಜಿಯಂ ಮಾಲಿನೋಯಿಸ್ 14 ರಿಂದ 16 ವರ್ಷ ಬದುಕುತ್ತದೆ. ಥೈರಾಯ್ಡ್ ಸಂಬಂಧಿತ ರೋಗಕ್ಕೆ ತುತ್ತಾಗುತ್ತದೆ. ನಿಯಮಿತವಾಗಿ ವ್ಯಾಕ್ಸಿನೇಷನ್ ಮಾಡಿಸಬೇಕು.
ಹೇಗೆ ಅಭಿವೃದ್ಧಿಯಾಯ್ತು ಈ ತಳಿ?
ಬೆಲ್ಜಿಯಂ ಮಾಲಿನೋಯಿಸ್ ತಳಿಯು ಮೂಲ ಬೆಲ್ಜಿಯಂ ದೇಶವಾಗಿದ್ದು ಕುರಿ ಮತ್ತು ದನಗಳನ್ನ ಕಾಯಲು ಈ ತಳಿಯನ್ನಾಗಿ ಇಂಪ್ರೂವ್ ಮಾಡಲಾಯಿತು.ತೋಳ ಮತ್ತು ನರಿಯ ಜೀನ್ ಗಳಿಂದ ಉತ್ಪತ್ತಿಯಾದ ಶ್ವಾನ ಅತ್ಯಂತ ಸೂಕ್ಷ್ಮ ಕಾರವಾಗಿದೆ ಎಂದು ನಂಬಲಾಗಿದೆ. ಸಾವಿರಾರು ವರ್ಷಗಳಿಂದ ಹಿಂದಿನಿಂದಲೂ ಮಾನವನ ಸ್ನೇಹ ಜೀವಿಯಾಗಿ ಬಂದಿದೆ. ಇಷ್ಟೇ ವರ್ಷಗಳಿಂದ ಇಂಪ್ರೂವ್ ಮಾಡಲಾಗುತ್ತಿದೆ ಎಂದು ಯಾವುದೇ ಪುರಾವೆಗಳು ಇಲ್ಲ. ಒಂದು ಅಂದಾಜಿನ ಪ್ರಕಾರ ಬೆಲ್ಜಿಯಂ ಮೆಲೋನಿಸ್ ತಳಿಯು 150 ವರ್ಷಗಳ ಹಿಂದೆ ಬೆಲ್ಜಿಯಂನಲ್ಲಿ ಅಭಿವೃದ್ಧಿಪಡಿಸಲಾಯಿತು.
- ಏನೆಲ್ಲಾ ಆಹಾರ ಕೊಡಲಾಗುತ್ತೆ…?
- – 1 ಕೆಜಿ ಮಾಂಸ
- – 200 ಗ್ರಾಂ ರೈಸ್
- -100 ಗ್ರಾಂ ತರಕಾರಿ
- – ಒಂದು ಮೊಟ್ಟೆ
- – ಅರ್ಧ ಲೀಟರ್ ಹಾಲು
- – 50 ಗ್ರಾಂ ಕಾಳು
- – 50 ಗ್ರಾಂ ರಾಯಲ್ ಕೆನೆ
- – 200 ಗ್ರಾಂ ಬಾರ್ಲಿ ಮತ್ತು ವಿಟಮಿನ್ ಸಿರಪ್
- – ವಿಟಮಿನ್ ಜನರಲ್ ಟಾನಿಕ್, ಮಲ್ಟಿ ವಿಟಮಿನ್ ಟ್ಯಾಬ್ಲೆಟ್ ಗಳು
ತರಬೇತಿ ಕೊಡುತ್ತಿರುವ ಪ್ರಕಾಶ್ ಹೇಳೋದೇನು…?
ಬೆಲ್ಜಿಯಂ ಮಾಲಿನೋಯಿಸ್ ಶ್ವಾನವು ಅಧಿಕ ಬುದ್ಧಿ ಶಕ್ತಿ ಹೊಂದಿದೆ. ಇದು ಅತ್ಯಂತ ಚುರುಕುತನ ಮತ್ತು ಕ್ಷಣ ಕಳೆದಂತೆ ಚಾಣಾಕ್ಷತೆ ಬರುತ್ತದೆ. ಹೆಚ್ಚಿನ ಸಿದ್ಧಾಹಾರ, ಶಕ್ತಿಯುತವಾದ ವಿಟಮಿನ್ ಬೇಕಾಗಿರುತ್ತದೆ. ಇದಕ್ಕೆ ಅತ್ಯಧಿಕ ವ್ಯಾಯಾಮ ದಿನನಿತ್ಯ ಬೇಕು. ಆಲ್ ಖೈದಾ ಸಂಘಟನೆಯ ಒಸಾಮಾ ಬಿನ್ ಲಾಡೆನ್ ಹಿಡಿಯಲು ಅಮೆರಿಕ ದೇಶವು ಉಪಯೋಗಿಸಿಕೊಂಡಿತ್ತು.
ಭಾರತ ದೇಶವು ಸೇನೆಗಳಿಗೆ ಪ್ರಯೋಗವನ್ನು ಮಾಡುತ್ತಾ ಬಂದಿದೆ. ಕರ್ನಾಟಕ ಪೊಲೀಸ್ 2018 ರಲ್ಲಿ ಈ ಶ್ವಾನವನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಂಡಿದೆ. ಅತ್ಯಂತ ಸೂಕ್ಷ್ಮ ಹಾಗೂ ಜಾಗೃತೆ ಹೊಂದಿರುವ ತಾರಾಳು ತುಂಗಾ ಸ್ಥಾನ ತುಂಬುತ್ತಿದೆ. ದಾವಣಗೆರೆಯಲ್ಲಿ ಈ ಶ್ವಾನ ಇರುವುದು ಖುಷಿಯ ವಿಚಾರ ಎನ್ನುತ್ತಾರೆ ಈ ಶ್ವಾನಕ್ಕೆ ತರಬೇತಿ ನೀಡುತ್ತಿರುವ ಪ್ರಕಾಶ್.
ಒಟ್ಟಿನಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿನ ಸೇನೆಯಲ್ಲಿ ಬಳಸಿಕೊಳ್ಳುತ್ತಿದ್ದ ಚಾಣಾಕ್ಷತೆ ಹೊಂದಿರುವ ಶ್ವಾನವು ದಾವಣಗೆರೆ ಪೊಲೀಸ್ ಇಲಾಖೆಯು ಬಳಸಿಕೊಳ್ಳುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ, ಅಪರಾಧಿಗಳ ಸುಳಿವು ನೀಡುವಲ್ಲಿ ನಿಪುಣತೆ ಹೊಂದಿರುವ ಈ ಶ್ವಾನ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.