ದಾವಣಗೆರೆ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಹೊಸ ಚೈತನ್ಯ ನೀಡಿತ್ತು. ಅಂದು ನೆರೆದಿದ್ದ ಬೃಹತ್ ಜನಸ್ತೋಮ ಕಂಡು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೇ ಬೆಕ್ಕಸ ಬೆರಗಾಗಿದ್ದರು. ಇದೀಗ ಅದೇ ದಾವಣಗೆರೆಯ ಋಣ ತೀರಿಸಲು ಮುಂದಾಗಿರುವ ಸಿಎಂ, 2026-27ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಮಹತ್ವದ ಕೊಡುಗೆಗಳನ್ನು ಘೋಷಿಸಿದ್ದಾರೆ.
ವಿಶೇಷವಾಗಿ, ಶಾಸಕ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ/ಪಂಗಡದವರನ್ನು ಸೆಳೆಯಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ದಾವಣಗೆರೆಗೆ ಬಜೆಟ್ ನಲ್ಲಿ ಸಿಕ್ಕಿದ್ದೇನು?
ಬಜೆಟ್‌ನ ಪ್ರಮುಖ ಹಂಚಿಕೆಗಳು:
ದಾವಣಗೆರೆ ದಕ್ಷಿಣ ಕ್ಷೇತ್ರ: ಎಸ್‌ಸಿ/ಎಸ್‌ಟಿ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಭಾಗಗಳ ಮೂಲಸೌಕರ್ಯ ಅಭಿವೃದ್ಧಿಗೆ ₹100 ಕೋಟಿ ವಿಶೇಷ ಅನುದಾನ.
ಆರೋಗ್ಯ ಕ್ಷೇತ್ರ: ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಣ.
ಕೃಷಿ ಮತ್ತು ತೋಟಗಾರಿಕೆ: ಹೊನ್ನಾಳಿ ತಾಲ್ಲೂಕಿನಲ್ಲಿ ₹32 ಕೋಟಿ ವೆಚ್ಚದಲ್ಲಿ 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಬೃಹತ್ ಶೀತಲಗೃಹ ನಿರ್ಮಾಣ.
ಶಿಕ್ಷಣ: ದಾವಣಗೆರೆ ಉತ್ತರ, ಮಾಯಕೊಂಡ ಹಾಗೂ ಚನ್ನಗಿರಿ ವ್ಯಾಪ್ತಿಯಲ್ಲಿ ಶ್ರಮಿಕ ವಸತಿ ಶಾಲೆಗಳ ಸ್ಥಾಪನೆ.
ಸುರಕ್ಷತೆ: ಆನಗೋಡಿನಲ್ಲಿ ಹೊಸ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ವಿವಿಧೆಡೆ ಚೆಕ್ ಡ್ಯಾಂಗಳ ನಿರ್ಮಾಣ.
ಕಳೆದ ಎರಡು ಬಜೆಟ್‌ಗಳಲ್ಲಿ ಜಿಲ್ಲೆಗೆ ದೊಡ್ಡ ಯೋಜನೆಗಳನ್ನು ನೀಡದಿದ್ದ ಸಿಎಂ, ಈ ಬಾರಿ ಉಪಚುನಾವಣೆಯ ಹೊಸ್ತಿಲಲ್ಲಿ ದಾವಣಗೆರೆಯ ಮೇಲೆ ಅನುದಾನದ ಮಳೆ ಸುರಿಸುವ ಮೂಲಕ ರಾಜಕೀಯ ಲೆಕ್ಕಾಚಾರವನ್ನೂ ಬಲಪಡಿಸಿದ್ದಾರೆ.





Leave a comment