ದಾವಣಗೆರೆ: ಜಿಲ್ಲೆಯಾದ್ಯಂತ ಮಾರ್ಚ್ 3ರಂದು ಕಾಮದಹನ ಹಾಗೂ ಮಾರ್ಚ್ 4ರಂದು ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಮಹತ್ವದ ಸೂಚನೆಗಳನ್ನು ನೀಡಿದೆ.
ಪಿಯುಸಿ ಮತ್ತು ಇತರ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಬಣ್ಣ ಎರಚಬಾರದು ಹಾಗೂ ತೊಂದರೆ ನೀಡಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಬಣ್ಣ ಎರಚುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವವರು, ಬಲವಂತವಾಗಿ ಹಣ ವಸೂಲಿ ಮಾಡುವವರು ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಬಳಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ಮೂವರು ಸವಾರಿ ಮಾಡುವುದು (Triples), ವೀಲಿಂಗ್ ಮಾಡುವುದು, ಸೈಲೆನ್ಸರ್ ಶಬ್ದ ಮಾಡುವುದು ಮತ್ತು ನಂಬರ್ ಪ್ಲೇಟ್ ಮರೆಮಾಚುವ ವಾಹನಗಳನ್ನು ಪೊಲೀಸರು ವಶಪಡಿಸಿಕೊಳ್ಳಲಿದ್ದಾರೆ. ಧಾರ್ಮಿಕ ಕೇಂದ್ರಗಳಾದ ಚರ್ಚ್, ಮಸೀದಿ ಮತ್ತು ದೇವಸ್ಥಾನಗಳಿಗೆ ಬಣ್ಣ ಎರಚುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಹರಡುವವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.
ಸುರಕ್ಷತೆ ಮತ್ತು ಸುವ್ಯವಸ್ಥೆಗಾಗಿ ಪ್ರಮುಖ ನಿಯಮಗಳು
1. ಬಣ್ಣ ಎರಚುವಿಕೆ ಮತ್ತು ನಡವಳಿಕೆ:
ಒತ್ತಾಯದ ಬಣ್ಣ ನಿಷೇಧ: ಯಾರ ಮೇಲೂ ಅವರ ಅನುಮತಿಯಿಲ್ಲದೆ ಬಣ್ಣ ಎರಚುವಂತಿಲ್ಲ.
ವಿದ್ಯಾರ್ಥಿಗಳ ರಕ್ಷಣೆ: ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ನೀಡಬಾರದು. ವಿಶೇಷವಾಗಿ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಮಹಿಳಾ ಹಾಸ್ಟೆಲ್‌ಗಳ ಬಳಿ ಕಿಡಿಗೇಡಿತನ ನಡೆಸುವಂತಿಲ್ಲ.
ಅಪಾಯಕಾರಿ ವಸ್ತುಗಳ ಬಳಕೆ ಬೇಡ: ಪೇಂಟ್, ಆಸಿಡ್, ವಾರ್ನಿಷ್ ಅಥವಾ ರಾಸಾಯನಿಕಗಳನ್ನು ಬಳಸುವಂತಿಲ್ಲ.
2. ಸಾರ್ವಜನಿಕ ಸ್ಥಳ ಮತ್ತು ಧಾರ್ಮಿಕ ಕೇಂದ್ರಗಳು:
ಧಾರ್ಮಿಕ ಗೌರವ: ಚರ್ಚ್, ಮಸೀದಿ, ದರ್ಗಾ ಮತ್ತು ದೇವಾಲಯಗಳಿಗೆ ಬಣ್ಣ ಎರಚುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ನೀರು ಮಲೀನ ಮಾಡಬೇಡಿ: ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆಯುವಂತಿಲ್ಲ.
3. ವಾಹನ ಸವಾರರಿಗೆ ಎಚ್ಚರಿಕೆ:
ಸಂಚಾರ ನಿಯಮ: ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುವುದು (Triples), ವೀಲಿಂಗ್ ಮಾಡುವುದು ಮತ್ತು ಕರ್ಕಶ ಸೈಲೆನ್ಸರ್‌ಗಳ ಬಳಕೆ ಮಾಡುವಂತಿಲ್ಲ.
ನಂಬರ್ ಪ್ಲೇಟ್: ವಾಹನದ ನಂಬರ್ ಪ್ಲೇಟ್‌ಗಳಿಗೆ ಬಣ್ಣ ಹಚ್ಚುವುದು ಅಥವಾ ಬಟ್ಟೆ ಕಟ್ಟಿ ಮರೆಮಾಚುವುದು ಶಿಕ್ಷಾರ್ಹ ಅಪರಾಧ.
ಮದ್ಯಪಾನ: ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
4. ಸಾಮಾಜಿಕ ಜಾಲತಾಣ ಮತ್ತು ನೈತಿಕತೆ:
ಗೌರವಯುತ ನಡವಳಿಕೆ: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದು ಅಥವಾ ಸಾರ್ವಜನಿಕವಾಗಿ ಬಟ್ಟೆ ಹರಿದು ಅಸಹ್ಯವಾಗಿ ನರ್ತಿಸುವುದನ್ನು ನಿಷೇಧಿಸಲಾಗಿದೆ.
ಸುಳ್ಳು ಸುದ್ದಿ ಹರಡಬೇಡಿ: ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳು ಅಥವಾ ಧರ್ಮ/ವ್ಯಕ್ತಿಯ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ಹಂಚಿಕೊಂಡರೆ ಕಾನೂನು ಕ್ರಮ ಕಾಯಂ.
ಗಮನಿಸಿ: ಕಾಮದಹನ ಮತ್ತು ಹೋಳಿ ಆಚರಣೆಯನ್ನು ನಿಗಧಿತ ಸಮಯಕ್ಕೆ ಮುಕ್ತಾಯಗೊಳಿಸುವುದು ಹಾಗೂ ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.





Leave a comment