ಬೆಂಗಳೂರು: ಡಾ. ಹೆಚ್. ಎಲ್. ನಾಗರಾಜ್ ಅವರು ಸ್ವಯಂ ನಿವೃತ್ತಿಗೆ ಸಲ್ಲಿಸಿದ ಅರ್ಜಿ ಅಂಗೀಕೃತವಾಗದ ಕಾರಣ ಮುಂಬಡ್ತಿ ಪ್ರಮಾದ ಆಗಿದೆ. ಅವರು ಅಧಿಕಾರ ವಹಿಸಿಕೊಂಡರಷ್ಟೇ ಮುಂಬಡ್ತಿ ಸಿಗಲಿದೆ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ,
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಡಾ. ಎಚ್.ಎಲ್ ನಾಗರಾಜ್, ಕೆ.ಎ.ಎಸ್ ಹಿರಿಯ ಶ್ರೇಣಿ ಅಧಿಕಾರಿಯವರಿಗೆ ಸರ್ಕಾರದ ದಿನಾಂಕ 13.2.2026 ರ ಅಧಿಸೂಚನೆ ಸಂಖ್ಯೆ ಸಿಆಸುಇ 103ಆಸೇವ 2025 ರನ್ವಯ ಕೆ.ಎ.ಎಸ್ (ಆಯ್ಕೆ ಶ್ರೇಣಿ)ಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿರುವ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ . ಈ ಹಿನ್ನೆಲೆಯಲ್ಲಿ ಈಸ್ಪಷ್ಟೀಕರಣ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಸ್ಪಷ್ಟನೆ ಏನು?
ಡಾ ಎಚ್.ಎಲ್ ನಾಗರಾಜ್, ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿಯವರು ಸ್ವಯಂ ನಿವೃತ್ತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯು ಪರಿಶೀಲನೆಯ ಹಂತದಲ್ಲಿದೆ.
ಪ್ರಸ್ತುತ, ಅವರ ಸ್ವಯಂ ನಿವೃತ್ತಿಯ ಕೋರಿಕೆಯು ಇದುವರೆಗೆ ಅಂಗೀಕೃತವಾಗದೇ ಇರುವುದರಿಂದ ಅವರು ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿರುವುದಿಲ್ಲ. ಆದ್ದರಿಂದ ಚಾಲ್ತಿಯಲ್ಲಿರುವ ನಿಯಮಗಳ ಅನುಸಾರ ಡಾ. ಎಚ್.ಎಲ್ ನಾಗರಾಜ್, ಕೆ.ಎ.ಎಸ್ (ಹಿರಿಯ ಶ್ರೇಣಿ) ಇವರನ್ನು ಮುಂಬಡ್ತಿಗೆ ಪರಿಗಣಿಸಲಾಗಿದೆ. ಆದರೆ ವಾಸ್ತವವಾಗಿ ಡಾ. ಎಚ್.ಎಲ್ ನಾಗರಾಜ್ ಇವರು ವಹಿಸಲಾಗುವ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಾಗ ಮಾತ್ರ ಅವರಿಗೆ ಮುಂಬಡ್ತಿ ದೊರೆಯುತ್ತದೆ ಎಂದು ಸ್ಪಷ್ಟನೆ ನೀಡಲಾಗಿದೆ.
ವಿವಾದ ಏನು?
ಸರ್ಕಾರವು ಬಿಡುಗಡೆ ಮಾಡಿರುವ ಸ್ಪಷ್ಟೀಕರಣದ ಪ್ರಕಾರ, ತಾಂತ್ರಿಕವಾಗಿ ಈ ಬಡ್ತಿ ಪ್ರಕ್ರಿಯೆಯು ನಿಯಮಾನುಸಾರವೇ ನಡೆದಿದೆ ಎಂದು ವಾದಿಸಲಾಗಿದೆ.
ಅರ್ಜಿ ಪರಿಶೀಲನೆ:
ಡಾ. ಎಚ್.ಎಲ್. ನಾಗರಾಜ್ ಅವರು ಸ್ವಯಂ ನಿವೃತ್ತಿಗಾಗಿ (VRS) ಅರ್ಜಿ ಸಲ್ಲಿಸಿರುವುದು ನಿಜ, ಆದರೆ ಆ ಅರ್ಜಿಯು ಇನ್ನೂ ಪರಿಶೀಲನಾ ಹಂತದಲ್ಲಿದೆ.
ಸೇವೆಯಲ್ಲಿ ಮುಂದುವರಿಕೆ:
ನಿಯಮಗಳ ಪ್ರಕಾರ, ಸ್ವಯಂ ನಿವೃತ್ತಿಯ ಕೋರಿಕೆ ಅಧಿಕೃತವಾಗಿ ಅಂಗೀಕಾರವಾಗುವವರೆಗೆ (Accepted) ಸಂಬಂಧಪಟ್ಟ ಅಧಿಕಾರಿಯನ್ನು ಸರ್ಕಾರಿ ಸೇವೆಯಲ್ಲಿಯೇ ಇದ್ದಾರೆ ಎಂದು ಪರಿಗಣಿಸಲಾಗುತ್ತದೆ.
ಬಡ್ತಿಯ ಷರತ್ತು:
ಬಡ್ತಿ ಪಟ್ಟಿಯಲ್ಲಿ ಹೆಸರಿದ್ದರೂ, ಅವರು ಹೊಸ ಹುದ್ದೆಯ ಪ್ರಭಾರವನ್ನು (Charge) ವಹಿಸಿಕೊಂಡರೆ ಮಾತ್ರ ಆ ಮುಂಬಡ್ತಿ ಜಾರಿಗೆ ಬರುತ್ತದೆ. ಅವರು ಪ್ರಭಾರ ವಹಿಸಿಕೊಳ್ಳದಿದ್ದರೆ ಆ ಬಡ್ತಿ ಕೇವಲ ಕಾಗದದ ಮೇಲಷ್ಟೇ ಉಳಿಯುತ್ತದೆ.
ವಿರೋಧ ಪಕ್ಷದ ಟೀಕೆ ಮತ್ತು ಸಾರ್ವಜನಿಕ ಆಕ್ರೋಶ
ಮತ್ತೊಂದೆಡೆ, ಈ ಘಟನೆಯನ್ನು ಸರ್ಕಾರದ “ಅದಕ್ಷತೆ” ಎಂದು ಕರೆಯಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳು:
ವಾಸ್ತವ ಸ್ಥಿತಿ:
ಡಾ. ಎಚ್.ಎಲ್. ನಾಗರಾಜ್ ಅವರು ಈಗಾಗಲೇ ಸನ್ಯಾಸ ದೀಕ್ಷೆ ಪಡೆದು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಆಧ್ಯಾತ್ಮಿಕ ಜೀವನದಲ್ಲಿ ತೊಡಗಿದ್ದಾರೆ. ಇದು ಸಾರ್ವಜನಿಕವಾಗಿ ತಿಳಿದಿರುವ ವಿಷಯ.
ಸಮನ್ವಯದ ಕೊರತೆ:
ಒಬ್ಬ ಅಧಿಕಾರಿ ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ದೊಡ್ಡ ಬದಲಾವಣೆ ಮಾಡಿಕೊಂಡಿದ್ದರೂ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (DPAR) ಅದರ ಅರಿವಿಲ್ಲದೆ ಬಡ್ತಿ ನೀಡಿರುವುದು ಆಡಳಿತಾತ್ಮಕ ಎಡವಟ್ಟು ಎಂಬುದು ಟೀಕಾಕಾರರ ವಾದ.
ನೈತಿಕ ಪ್ರಶ್ನೆ:
ಆಧ್ಯಾತ್ಮಿಕ ಪಥದಲ್ಲಿರುವವರಿಗೆ ಸರ್ಕಾರಿ ಹುದ್ದೆಯ ಬಡ್ತಿ ನೀಡುವ ಮೂಲಕ ಸರ್ಕಾರವು ತನ್ನ ದಾಖಲೆಗಳನ್ನು ನವೀಕರಿಸುವಲ್ಲಿ (Update) ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆರ್. ಅಶೋಕ್ ಕಿಡಿಕಾರಿದ್ದೇನು?
ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದರು.
ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಪಟ್ಟಿಯಲ್ಲಿ ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಶ್ರೀ ಹೆಚ್.ಎಲ್. ನಾಗರಾಜ (ಪ್ರಸ್ತುತ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ) ಅವರ ಹೆಸರೂ ಸೇರಿದೆ.
ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಕಾಂಗ್ರೆಸ್ ಸರ್ಕಾರದ ಅದಕ್ಷತೆ, ಅಸಮರ್ಥತೆ ಈಗ ಯಾವ ಮಟ್ಟಕ್ಕೆ ತಲುಪಿದೆ ಗೊತ್ತಾ? ಸೇವೆಯಿಂದ ಸ್ವಯಂನಿವೃತ್ತರಾಗಿ ಕಾವಿ ಧರಿಸಿ ಪೀಠಾಧಿಪತಿಯಾಗಿರುವವರಿಗೂ “ಬಡ್ತಿ ಭಾಗ್ಯ” ನೀಡುವ ಮಟ್ಟಕ್ಕೆ!
ಒಬ್ಬ ಅಧಿಕಾರಿ ಸೇವೆಯಿಂದ ನಿವೃತ್ತರಾಗಿ, ಸಂನ್ಯಾಸ ಸ್ವೀಕರಿಸಿ, ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರೂ, ನಿಮ್ಮ ಸರ್ಕಾರದ ದಾಖಲೆಗಳಲ್ಲಿ ಅವರು ಇನ್ನೂ “ಸೇವೆಯಲ್ಲಿರುವ ಅಧಿಕಾರಿ”! ನಿಮ್ಮ ಘನಂದಾರಿ ಆಡಳಿತದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಸಹಿ ಮಾಡುವ ಮುನ್ನ ಫೈಲುಗಳನ್ನು ಓದುತ್ತಾರೋ ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಾರೋ? ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವ ಅಧಿಕಾರಿಗಳು ಸೇವೆಯಲ್ಲಿ ಇದ್ದಾರೆ, ಯಾರು ನಿವೃತ್ತರಾಗಿದ್ದಾರೆ ಅನ್ನುವ ಕನಿಷ್ಠ ಮಾಹಿತಿಯೂ ಗೊತ್ತಿಲ್ಲದಿದ್ದರೆ, ರಾಜ್ಯದ ಜನತೆ ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಸರ್ಕಾರದ ಮೇಲೆ ಹೇಗೆ ವಿಶ್ವಾಸ ಇಡಬೇಕು ಸ್ವಾಮಿ?
ಇವತ್ತು ನಿವೃತ್ತರಾಗಿರುವ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಿದ್ದೀರಿ, ನಾಳೆ ನಿಧನ ಹೊಂದಿರುವ ಅಧಿಕಾರಿಗೆ ವರ್ಗಾವಣೆ ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ!
ಇದು ಕೇವಲ ಒಂದು ಆಕಸ್ಮಿಕ ಯಡವಟ್ಟು ಅಲ್ಲ. ಇದು ಆಡಳಿತ ವ್ಯವಸ್ಥೆಯ ಸಂಪೂರ್ಣ ಕುಸಿತದ ಸೂಚನೆ. ದಿನಕ್ಕೊಂದು ಎಡವಟ್ಟು, ಕ್ಷಣಕ್ಕೊಂದು ಮುಖಭಂಗ. ಇನ್ನೆಷ್ಟು ದಿನ ಸ್ವಾಮಿ ಈ ಎಡವಟ್ಟು ಸರ್ಕಾರಕ್ಕೆ ಎಡವಟ್ಟು ಮುಖ್ಯಮಂತ್ರಿ ಆಗಿ ತಮ್ಮ ಗೌರವ ಕಳೆದುಕೊಳ್ಳುತ್ತೀರಿ. ಸಾಕು ಮಾಡಿ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕದ ಗೌರವ ಉಳಿಸಿ, ತಮ್ಮ ಇರೋಬರೋ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದರು.
- Administration Lapse
- DPAR Karnataka
- Dr. H.L. Nagaraj KAS
- Karnataka Government Notification
- KAS Officer Promotion
- KAS Selection Grade
- Promotion Controversy Karnataka.
- Siddaramaiah Government
- Sri Nishchalanandnath Swamiji
- Voluntary Retirement Scheme (VRS)
- ಆಡಳಿತಾತ್ಮಕ ಎಡವಟ್ಟು
- ಕರ್ನಾಟಕ ಸರ್ಕಾರ
- ಕೆಎಎಸ್ ಅಧಿಕಾರಿ ಮುಂಬಡ್ತಿ
- ಕೆಎಎಸ್ ಆಯ್ಕೆ ಶ್ರೇಣಿ
- ಡಾ. ಎಚ್.ಎಲ್. ನಾಗರಾಜ್
- ಬಡ್ತಿ ಭಾಗ್ಯ ಟೀಕೆ.
- ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ
- ಸಿಆಸುಇ ಅಧಿಸೂಚನೆ
- ಸಿದ್ದರಾಮಯ್ಯ ಸರ್ಕಾರ
- ಸ್ವಯಂ ನಿವೃತ್ತಿ ಅರ್ಜಿ





Leave a comment