SUDDIKSHANA KANNADA NEWS/ DAVANAGERE/ DATE:12-08-2023
ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿಗಳ ಹುಚ್ಚಾಟ ನಿಲ್ಲುವಂತೆ ಕಾಣುತ್ತಿಲ್ಲ. ಉಡುಪಿ ಕಾಲೇಜೊಂದರಲ್ಲಿ ಕಾಲೇಜು ವಿದ್ಯಾರ್ಥಿನಿಯರ ಖಾಸಗಿ ಅಂಗಗಳ ಸೆರೆಹಿಡಿದ ಪ್ರಕರಣ ಇನ್ನು ಮಾಸಿಲ್ಲ. ಶೌಚಾಲಯದಲ್ಲಿ ಮೊಬೈಲ್ ಇಟ್ಟು
ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಆದ್ರೆ, ಈಗ ಹುಬ್ಬಳ್ಳಿಯಲ್ಲಿಯೂ ವಿದ್ಯಾರ್ಥಿಗಳ ಹುಚ್ಚಾಟ ಮುಂದುವರಿದಿದೆ. ವಿದ್ಯಾರ್ಥಿನಿಯರು ಹಾಗೂ ಪೊಲೀಸರಿಗೆ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯ ಹೆಸರಿನಲ್ಲಿ ಬೆದರಿಕೆ ಹಾಕಿದ್ದವರು ಈಗ ಅಂದರ್ ಆಗಿದ್ದಾರೆ. ಘಟನೆ ನಡೆದ ಏಳು ದಿನಗಳಲ್ಲಿ ಖಾಸಗಿ ಕಾಲೇಜುವೊಂದರ ವಿದ್ಯಾರ್ಥಿನಿಯ ಹೆಸರಲ್ಲಿ ಇನ್ಸ್ಟಾಗ್ರಾಂ (Instagram) ನಕಲಿ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಹಾಗೂ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಶಂಕಿತ ಆರೋಪಿ ಹಾಗೂ ಖಾಸಗಿ ಕಾಲೇಜಿನ ಹಳೇ ವಿದ್ಯಾರ್ಥಿ ರಜನಿಕಾಂತ್ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ಏಳು ದಿನ ವಿಚಾರಣೆಗೆ ಒಳಪಡಿಸಿದಾಗ ಬಾಯ್ಬಿಟ್ಟಿದ್ದಾನೆ.
ಈ ಸುದ್ದಿಯನ್ನೂ ಓದಿ:
Bitcoin: ಬಿಟ್ ಕಾಯಿನ್ ಹಗರಣದ ಎಸ್ಐಟಿ ತನಿಖಾ ವರದಿ ಶೀಘ್ರದಲ್ಲೇ ಸಲ್ಲಿಕೆ: ಪ್ರಕರಣ ರದ್ದು ಮಾಡಿ ಎಂಬ ಬೇಡಿಕೆಗೆ ಹೈಕೋರ್ಟ್ ಹೇಳಿದ್ದೇನು…?
ಈ ಪ್ರಕರಣದ ಹಿಂದೆ ಈತನೊಬ್ಬನ ಪಾತ್ರ ಮಾತ್ರವಲ್ಲ, ಬೇರೆಯವರು ಇರಬಹುದು ಎಂಬ ಅನುಮಾನ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜಾಲತಾಣದ ಅಧಿಕೃತ ಮಾಹಿತಿಯ ಹಿಂದೆ ಬಿದ್ದಾಗ ರಜನಿಕಾಂತ್ ಆರೋಪಿ ಅಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಶಂಕಿತ ಆರೋಪಿಯಾಗಿದ್ದ ರಜನಿಕಾಂತ್ನ ಇನ್ಸ್ಟಾಗ್ರಾಂ (Instagram) ಖಾತೆ, ಇ-ಮೇಲ್ ಐಡಿ ಹಾಗೂ ಸಾಮಾಜಿಕ ಜಾಲತಾಣದ ವಿವವರಗಳನ್ನು ಪೊಲೀಸರು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಈ ವರದಿ ಬರುವವರೆಗೂ ಉಳಿದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಪ್ರಕರಣ ಗಂಭೀರವಾಗಿದ್ದರಿಂದ ಸೈಬರ್ ಠಾಣಾ ಪೊಲೀಸರು ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್ಸ್ಟಾಗ್ರಾಂ (Instagram)ಖಾತೆ ವಿವರ ಸಂಗ್ರಹಿಸಿ ಫೇಸ್ಬುಕ್ ಸಂಸ್ಥೆಗೆ ಮಾಹಿತಿ ನೀಡಲು ಪತ್ರ ಬರೆದಿದ್ದರು.
ಅಲ್ಲಿಂದ ದೊರೆತ ಅಧಿಕೃತ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ. ಬಂಧನಕ್ಕೆ ಒಳಗಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುತ್ತಿರುವ ಕಾಲೇಜಿನಲ್ಲಿಯೇ ಅಧ್ಯಯನ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿನಿ ಇನ್ನೊಬ್ಬ ವಿದ್ಯಾರ್ಥಿಯ ಜೊತೆ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ಆರೋಪಿ ತಮ್ಮ ಊರಿನ ಮತ್ತೊಂದು ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತನ ಸಹಾಯ ಪಡೆದು, ಆ ವಿದ್ಯಾರ್ಥಿನಿಯ ಇನ್ಸ್ಟಾಗ್ರಾಂ (Instagram) ಖಾತೆ ಹ್ಯಾಕ್ ಮಾಡಿಸಿದ್ದಾನೆ. ತನ್ನ ಹೆಸರು ಎಲ್ಲಿಯೂ ಬರಬಾರದು ಎಂದು ದಿಕ್ಕು ತಪ್ಪಿಸಲು ಪೊಲೀಸ್ ಬಗ್ಗೆ ಅವಹೇಳನ ಪದ ಬಳಸಿ ಪೋಸ್ಟ್ ಮಾಡಿದ್ದ. ಮಾಹಿತಿ ಸಂಗ್ರಹಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರಿದಿದೆ.