Home ದಾವಣಗೆರೆ ಇನ್ನೂ ಬಗೆಹರಿಯದ ಬಗೆಹರಿಯದ ಮೆಕ್ಕೆಜೋಳ ಖರೀದಿ ಗೊಂದಲ: ಟ್ರ್ಯಾಕ್ಟರ್ ಲೋಡ್ ಸಮೇತ ಡಿಸಿ ಕಚೇರಿ ಎದುರು ರೈತರ ಆಕ್ರೋಶ!
ದಾವಣಗೆರೆಬೆಂಗಳೂರುವಾಣಿಜ್ಯ

ಇನ್ನೂ ಬಗೆಹರಿಯದ ಬಗೆಹರಿಯದ ಮೆಕ್ಕೆಜೋಳ ಖರೀದಿ ಗೊಂದಲ: ಟ್ರ್ಯಾಕ್ಟರ್ ಲೋಡ್ ಸಮೇತ ಡಿಸಿ ಕಚೇರಿ ಎದುರು ರೈತರ ಆಕ್ರೋಶ!

Share
ಮೆಕ್ಕೆಜೋಳ
Share

ದಾವಣಗೆರೆ: ಮೆಕ್ಕೆಜೋಳದ ಗೋಳು ಹೇಳತೀರದು. ಖರೀದಿಗೆ ನೊಂದಾಯಿಸಿದ ರೈತರು ಮಾರುಕಟ್ಟೆಗೆ ತಂದ್ರೆ ಖರೀದಿ ಮಾಡಬೇಕಾದ ಪಶು/ಕೋಳಿ ಆಹಾರ ಉತ್ಪಾದಕರು ಗುಣಮಟ್ಟ ಸರಿಯಿಲ್ಲ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಇದರಿಂದ ರೋಸಿ ಹೋದ ರೈತರು ಜಿಲ್ಲಾಧಿಕಾರಿ ಕಚೇರಿಗೆ ಟ್ರ್ಯಾಕ್ಟರ್ ಲೋಡ್ ಸಮೇತ ಬಂದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ, ಕೃಷಿ ಇಲಾಖೆಯವರು ಮೆಕ್ಕೆಜೋಳ ಗುಣಮಟ್ಟ ಪರೀಕ್ಷೆ ನಡೆಸಬೇಕು. ಆದರೆ ಖರೀದಿಸುವ ಪಶು/ಕೋಳಿ ಆಹಾರ ಉತ್ಪಾದಕರು ಗುಣಮಟ್ಟ ಪರೀಕ್ಷೆ ನಡೆಸಿ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿತು ಎಂಬಂತೆ ಗುಣಮಟ್ಟ ಸರಿಯಿಲ್ಲ ಎಂದು ತಿರಸ್ಕರಿಸುತ್ತಾರೆ. ಇದರಿಂದ ಟ್ರ್ಯಾಕ್ಟರ್ ನಲ್ಲಿ ಲೋಡ್ ಮಾಡಿಕೊಂಡು ಬಂದ ರೈತರು ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಜಿಲ್ಲಾಡಳಿತ ಜಾಣ ಕುರುಡು ಅನುಸರಿಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ಪ್ರಮುಖ ಅಂಶಗಳು:

  • ಗುಣಮಟ್ಟದ ನೆಪ: ಪಶು ಮತ್ತು ಕೋಳಿ ಆಹಾರ ಉತ್ಪಾದಕರು ಗುಣಮಟ್ಟದ ನೆಪವೊಡ್ಡಿ ಮೆಕ್ಕೆಜೋಳ ಖರೀದಿಸಲು ನಿರಾಕರಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

  • ಜಿಲ್ಲಾಡಳಿತದ ಮೌನ: ಸರ್ಕಾರದ ಆದೇಶವಿದ್ದರೂ ಸಕ್ಕರೆ ಕಾರ್ಖಾನೆ ಡಿಸ್ಟಿಲರಿಗಳು ಖರೀದಿ ಮಾಡುತ್ತಿಲ್ಲ ಮತ್ತು ಅವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಆರೋಪ.

  • ತಾಂತ್ರಿಕ ಗೊಂದಲ: ಗುಣಮಟ್ಟ ಪರೀಕ್ಷೆಯನ್ನು ಕೃಷಿ ಇಲಾಖೆ ಮಾಡಬೇಕೇ ಹೊರತು ಖರೀದಿ ಮಾಡುವ ಕಂಪನಿಗಳಲ್ಲ ಎಂಬುದು ಬಿಜೆಪಿ ರೈತ ಮೋರ್ಚಾದ ಆಗ್ರಹ.

ಶಾಮನೂರು ಎಸ್ ಎಸ್ ಗಣೇಶ್ ಒಡೆತನದ ಕುಕ್ಕುವಾಡ ಸಕ್ಕರೆ ಕಂಪನಿ ಡಿಸ್ಟಿಲರಿಯವರು 729.5 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಈ ಆದೇಶಕ್ಕೆ ಕ್ಯಾರೆ ಎನ್ನದ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿಲ್ಲ ಎಂದು ಸತೀಶ್ ಖಂಡಿಸಿದರು.

ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ ಮತ್ತು ಪಶುಸಂಗೋಪನೆ ಉಪನಿರ್ದೇಶಕ ಡಾ.ಮಹೇಶ್ ರವರು ಪಶು/ಕೋಳಿ ಆಹಾರ ಉತ್ಪಾದಕರಿಗೆ ಖರೀದಿಸುವಂತೆ ಸೂಕ್ತ ಆದೇಶ ನೀಡಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ರೈತರಾದ ತುಂಬಿಗೆರೆ ದಿನೇಶಗೌಡ್ರು, ಐಗೂರು ಸಿ.ನಾಗರಾಜಪ್ಪ, ಆಲೂರು ದೇವರಾಜು, ಸಿದ್ದೇಶ್, ಮರಿಕುಂಟೆ ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles