ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯವು ತನ್ನ ವ್ಯಾಪ್ತಿಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 12,706 ವಿದ್ಯಾರ್ಥಿಗಳಿಗೆ ಇದೇ 30ರಂದು ನಡೆಯುವ ಹದಿಮೂರನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಿದೆ.
ಇದೇ ಸಂದರ್ಭದಲ್ಲಿ 45 ವಿದ್ಯಾರ್ಥಿಗಳು 87 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರೆ, 70 ಸಂಶೋಧನಾರ್ಥಿಗಳು ಪಿಎಚ್.ಡಿ. ಪದವಿಯನ್ನು ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಸ್ವೀಕರಿಸಲಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.
ವಿದ್ಯಾರ್ಥಿನಿಯರದ್ದೇ ಮೇಲುಗೈ:
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಕುಂಬಾರ, ಈ ಬಾರಿಯೂ ಚಿನ್ನದ ಪದಕಗಳ ಬೇಟೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇದಲ್ಲದೆ 30 ಮಹಿಳೆಯರು ಪಿಎಚ್.ಡಿ. ಪದವಿ ಪಡೆದಿರುವುದು ವಿಶೇಷ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಮಹಿಳೆಯರೇ ಉನ್ನತಿ ಸಾಧಿಸುತ್ತಿರುವುದು ಗಮನಾರ್ಹ ಎಂದರು.
12706 ವಿದ್ಯಾರ್ಥಿಗಳಿಗೆ ಪದವಿ:
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 12706 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ವಿವಿಧದ ಸ್ನಾತಕ ಪದವಿಗಳಲ್ಲಿ 6401 ಮಹಿಳಾ ಹಾಗೂ 4283 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 10684 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲಿದ್ದಾರೆ. ಇನ್ನು 1191 ಮಹಿಳಾ ಹಾಗೂ 831 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 2022 ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ ಪದವಿಯನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ಸ್ನಾತಕೋತ್ತರ ಪದವಿಯಲ್ಲಿ ಶೇ.91.41 ವಿದ್ಯಾರ್ಥಿಗಳು ಉತ್ತೀರ್ಣ:
ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ ಪರೀಕ್ಷೆಗಳಲ್ಲಿ ಸ್ನಾತಕ ಪದವಿಯಲ್ಲಿ ಶೇಕಡ 58.77 ರಷ್ಟು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇಕಡ 91.41 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.
ರಾಜ್ಯಪಾಲರ ಅಧ್ಯಕ್ಷತೆ:
ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದು, ರ‍್ಯಾಂಕ್ ವಿಜೇತರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡುವರು. ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿದ್ದು, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಎರಡು ಮತ್ತು ಮೂರನೇ ರ‍್ಯಾಂಕ್ ವಿಜೇತರಿಗೆ ಪದವಿ ಪ್ರದಾನ ಮಾಡುವರು. ಡಿಆರ್‌ಡಿಒ ಮಾಜಿ ಮಹಾನಿರ್ದೇಶಕರು, ಕೇಂದ್ರ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ಸಲಹೆಗಾರರೂ ಆಗಿದ್ದ ಪದ್ಮವಿಭೂಷಣ ಡಾ.ವಾಸುದೇವ ಕೆ. ಅತ್ರೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಪ್ರೊ.ಕುಂಬಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ವಂದನಾ, ವಿವಿಧ ನಿಕಾಯಗಳ ಡೀನರಾದ ಪ್ರೊ.ಕೆ.ವೆಂಕಟೇಶ, ಪ್ರೊ.ಎಂ.ಯು.ಲೋಕೇಶ, ಪ್ರೊ.ಗೋವಿಂದಪ್ಪ, ಪ್ರೊ.ಶ್ರೀನಿವಾಸ, ಸಿಂಡಿಕೇಟ್ ಮತ್ತು ಅಕಾಡೆಮಿಕ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.





Leave a comment