SUDDIKSHANA KANNADA NEWS/ DAVANAGERE/ DATE:08-08-2023
ದಾವಣಗೆರೆ (Davanagere): ಬಿಜೆಪಿ ವಿರುದ್ಧ ಬಂಡೆದ್ದು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶ ಪಡೆದು ಆಯ್ಕೆಯಾಗಿರುವ ನೀವು ರಾಜೀನಾಮೆ ನೀಡುವುದು ಬೇಡ. ಇನ್ನು ಒಂದೂವರೆ ವರ್ಷ ಮಾತ್ರ ಆಡಳಿತ ಇದ್ದು, ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಎಂಬುದೂ ನನ್ನ ಒತ್ತಾಯ. ಅಧಿಕಾರದಲ್ಲಿದ್ದಾಗಿನಿಂದಲೂ ಒತ್ತಾಯ ಮಾಡುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಇನ್ನು ಕ್ರಮ ಯಾಕೆ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಎಂದು ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಮಾಜಿ ಮೇಯರ್ ಉಮಾ ಪ್ರಕಾಶ್ ರಿಗೆ ಟಾಂಗ್ ನೀಡಿದ್ದಾರೆ.
ಉಮಾ ಪ್ರಕಾಶ್ ಅವರು ಮಾಡಿರುವ ಆರೋಪ ಸುಳ್ಳು ಎಂದು ಎಲ್ಲಿಯೂ ಹೇಳಿಲ್ಲ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ನಿಮಗೆ ಬಿಜೆಪಿಯವರು ಯಾಕೆ ಟಿಕೆಟ್ ಕೊಡಲಿಲ್ಲ. ನೀವು ಬಂಡೆದ್ದು ಬಿಜೆಪಿ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿ ಗೆದ್ದು ಬಂದಿದ್ದೀರಾ. ವಾರ್ಡ್ ನ ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ನೀವು ರಾಜೀನಾಮೆ ನೀಡುವ ಮಾತು ಆಡಿರುವುದು ಆಶ್ಚರ್ಯ ತಂದಿದೆ. ನಾವು ರಾಜೀನಾಮೆ ಕೊಡಿ ಎಂಬ ಆಗ್ರಹ ಮಾಡಿಲ್ಲವಲ್ಲ. ನೀವು ರಾಜೀನಾಮೆ ಕೊಡುತ್ತೇವೆ
ಎಂದೇಳಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:
Davanagere: ನನ್ನ ಆರೋಪ ಸುಳ್ಳೆಂದು ಸಾಬೀತುಪಡಿಸಿದರೆ ರಾಜೀನಾಮೆಗೆ ಸಿದ್ಧ: ಕೈ ಸದಸ್ಯರಿಗೆ ಉಮಾ ಪ್ರಕಾಶ್ ಟಾಂಗ್
ನಿಮಗೆ ದ್ರೋಹ ಮಾಡಿದ ಪಕ್ಷಕ್ಕೆ ಮತ್ತೆ ಬೆಂಬಲ ನೀಡಿದ್ದೀರಿ. ಪಕ್ಷೇತರರು ಬೆಂಬಲ ಕೊಟ್ಟಿದ್ದಕ್ಕಾಗಿಯೇ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು. ನಿಮಗೆ ಟಿಕೆಟ್ ಕೊಡದೇ ಹೀನಾಯವಾಗಿ ನಡೆಸಿಕೊಂಡ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದೀರಾ.
ಆದ್ರೂ, ನಿಮ್ಮ ಹೋರಾಟಕ್ಕೆ ಯಾಕೆ ನಿಮ್ಮ ನಾಯಕರು ಕ್ರಮ ತೆಗೆದುಕೊಳ್ಳಲಿಲ್ಲ. ಪ್ರಾಮಾಣಿಕ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಆದ್ರೆ, ಕೇಂದ್ರ, ರಾಜ್ಯ, ಮಹಾನಗರ ಪಾಲಿಕೆ, ಶಾಸಕರು, ಸಂಸದರು ನಿಮ್ಮ ಪಕ್ಷದವರೇ ಇದ್ದರೂ ಯಾಕೆ
ಕ್ರಮ ಜರುಗಿಸಿಲ್ಲ ಎಂಬುದೇ ನಮಗೂ ಕಾಡುತ್ತಿರುವ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಸಭೆಗಳಲ್ಲಿ ವಿಷಯ ಪ್ರಸ್ತಾಪ ಮಾಡಿಲ್ಲ ಎಂದೇನೂ ನಾವು ಹೇಳಿಲ್ಲ. ನಿಮ್ಮ ಒತ್ತಾಯಕ್ಕೆ ನಾವು ದನಿಗೂಡಿಸಿದ್ದೆವು. 2017- 2018 ರಲ್ಲಿ ನಡೆದ ಅಕ್ರಮ ಡೋರ್ ನಂಬರ್ ಗಳ ವಿಷಯವನ್ನು ಪ್ರಸ್ತಾಪಿಸಿದ್ದು ಸ್ವಾಗತಾರ್ಹ. ಇಷ್ಟು ವರ್ಷ ಆದರೂ ಕ್ರಮ ಯಾಕೆ ಆಗಿಲ್ಲ. ಇದರ ಹಿಂದೆ ಇರುವವರು ಯಾರು? ಎಂಬುದನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದ್ದಾರೆ.
32ನೇ ವಾರ್ಡಿನ ಆವರಗೆರೆ ಸರ್ವೆ ನಂಬರ್ 240 ರಿಂದ 244 ರಲ್ಲಿ ನಡೆದಿರುವ ಡೋರ್ ನಂಬರ್ ಗಳ ರದ್ದತಿ ಇನ್ನೂ ಆಗಿಲ್ಲ. ನಿಮ್ಮ ನಾಯಕರೆಲ್ಲರೂ ಅಧಿಕಾರದಲ್ಲಿದ್ದರೂ ಯಾಕೆ ಆಗಿಲ್ಲ. ಹೆಚ್ಚು ಕಡಿಮೆ ಆರು ವರ್ಷಗಳಾಗಿವೆ. ಬಿಜೆಪಿಯ ಭ್ರಷ್ಟಾಚಾರಕ್ಕೆ ಇದೂ ಸಾಕ್ಷಿಯೇ. ಅಕ್ರಮವಾಗಿ ಡೋರ್ ನಂಬರ್ ಕೊಡಲಾಗಿದೆ ಎಂಬ ಆಗ್ರಹಕ್ಕೆ ನಿಮ್ಮ ಪಕ್ಷದಲ್ಲಿಯೇ ಮನ್ನಣೆ ಸಿಕ್ಕಿಲ್ಲ ಎಂಬಂತಾಯಿತು. ಮೂರು ವರ್ಷ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದರೂ ರದ್ದು ಯಾಕೆ ಮಾಡಿಲ್ಲ? ಬಿಜೆಪಿ ಅಧಿಕಾರಕ್ಕೆ ಬರಲು ಬೆಂಬಲಿಸಿದ ನಿಮ್ಮ ಪ್ರಾಮಾಣಿಕ ಹೋರಾಟಕ್ಕೆ ಬೆಲೆ ಇಲ್ಲವೇ ಹಾಗಿದ್ದರೆ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪತಿ ಎ. ವೈ. ಪ್ರಕಾಶ್ ಅವರು ಬಿಜೆಪಿ ಪಕ್ಷಕ್ಕಾಗಿ 25 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ. ದೂಡಾ ಅಧ್ಯಕ್ಷರನ್ನಾಗಿ ಮಾಡಲು ಯಾಕೆ ವಿಳಂಬ ಧೋರಣೆ ಅನುಸರಿಸಿದರು. ಹೇಗೆ ನಡೆಸಿಕೊಂಡರು ಎಂಬುದು ನಿಮಗೆ ನೆನಪಿಲ್ಲವೇ? ಚುನಾವಣೆ ಘೋಷಣೆಗೆ ಮುನ್ನ ಕಾಟಾಚಾರಕ್ಕೆ ಎಂಬಂತೆ ದೂಡಾ ಅಧ್ಯಕ್ಷರನ್ನಾಗಿ ಮಾಡಿದರು. ಆಗಲೂ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆಗ ಯಾಕೆ ಡೋರ್ ರದ್ದು ಆಗಲಿಲ್ಲ. ನಿಮ್ಮ ನೇರ ನುಡಿ, ಹೋರಾಟ ಸ್ವಾಗತಿಸುತ್ತೇವೆ. ನಿಮಗೆ ಟಿಕೆಟ್ ಕೊಡದೇ ಕಣ್ಣೀರು ಹಾಕಿಸಿದ ಬಿಜೆಪಿಯವರ ಭ್ರಷ್ಟಾಚಾರದ ಬಗ್ಗೆ ಯಾಕೆ ಚಕಾರ ಎತ್ತಲ್ಲ. ನೀವು ರಾಜೀನಾಮೆ ಕೊಡುವುದು ಬೇಡ. ಅಕ್ರಮಕೋರರಿಗೆ ಶಿಕ್ಷೆಯಾಗುವಂತೆ ಪಾಲಿಕೆ ಸದಸ್ಯರಾಗಿ ಹೋರಾಟ ಮಾಡಿ ಎಂದು ಗಡಿಗುಡಾಳ್ ಮಂಜುನಾಥ್ ಹೇಳಿದ್ದಾರೆ.