ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಿವಿಧ ಹಗರಣಗಳ ತನಿಖೆಯನ್ನು ಬೇರೆ ಬೇರೆ ಸಂಸ್ಥೆಗಳು ನಡೆಸುತ್ತಿದ್ದು, ಈ ಪ್ರಕರಣಗಳ ತನಿಖೆಯ ಪ್ರಗತಿ ಪರಿಶೀಲನೆಗೆ ವಾರದೊಳಗೆ ಸಮಿತಿ ಸಭೆ ನಡೆಸುತ್ತೇನೆ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಎಲ್ಲ ಹಗರಣ ಪ್ರಕರಣಗಳನ್ನು ಗುರುತಿಸಿದ್ದೇವೆ. ಅವುಗಳ ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲಿಸಿ, ಸಚಿವ ಸಂಪುಟಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
ತ್ವರಿತಗತಿಯಲ್ಲಿ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿಯವರು ಸಮಿತಿ ರಚಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲನೆ ವೇಳೆ ಗಮನಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವಿಚಾರ ಸಚಿವ ಸಂಪುಟ ಸಭೆಯ ಗಮನಕ್ಕೆ ಬಂದ ಬಳಿಕ ತ್ವರಿತಗತಿಯಲ್ಲಿ ಮಾಡಲು ಮುಖ್ಯಮಂತ್ರಿ ಸಮಿತಿ ರಚಿಸಿದ್ದಾರೆ ಎಂದು ಹೇಳಿದರು.