SUDDIKSHANA KANNADA NEWS/ DAVANAGERE/ DATE:07-08-2023
ದಾವಣಗೆರೆ (Davanagere): ಸಂಸದ ಜಿ. ಎಂ. ಸಿದ್ದೇಶ್ವರ ವಿರುದ್ಧ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ವಿನಾಕಾರಣ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ದಾಖಲೆ ಆಧರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಹಿರಿಯ ರಾಜಕಾರಣಿ ಸಿದ್ದೇಶ್ವರ ಅವರ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಮುಂದುವರಿಸಿದರೆ ಬೀದಿಗಿಳಿದು ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಜಯ್ ಕುಮಾರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ವಿಚಾರ ಸಂಬಂಧ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರೋಪ ಮಾಡಿದ್ದು, ಸತ್ಯವನ್ನು ಅವರೇ ಒಪ್ಪಿಕೊಂಡಂತಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಕಳೆದ ಬಾರಿ ಶಾಸಕರಿದ್ದವರು ಯಾರು? ಎಂದು ಪ್ರಶ್ನಿಸಿದರು.
ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬುದು ನಿಜವೇ ಆಗಿದ್ದರೆ ಶಾಸಕರ ಆಪ್ತ ಬಳಗದವರೇ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಜಯ್ ಕುಮಾರ್ ಹೇಳಿದರು.
ಎಲ್ಲವೂ ತನಿಖೆಯಾಗಲಿ:
ಮಹಾನಗರ ಪಾಲಿಕೆಯು ಅಸ್ತಿತ್ವಕ್ಕೆ ಬಂದ ಇಲ್ಲಿಯವರೆಗೆ ಏನೆಲ್ಲಾ ಅಕ್ರಮಗಳು ಆಗಿವೆ, ಭೂಕಬಳಿಕೆ ಎಲ್ಲೆಲ್ಲಿ ಆಗಿದೆ ಎಂಬ ಕುರಿತಂತೆ ಸಮಗ್ರ ತನಿಖೆ ನಡೆಸಲಿ. ನಾವೆಲ್ಲರೂ ಸ್ವಾಗತಿಸುತ್ತೇವೆ. ಪಾಲಿಕೆಯ ಕಾಂಗ್ರೆಸ್ ಸದಸ್ಯರು ದಾಖಲೆರಹಿತ ಆರೋಪ ಮಾಡಿದ್ದಾರೆ. ಅಕ್ರಮ ಯಾರೇ ಎಸಗಿದ್ದರೂ ಕ್ರಮ ಜರುಗಿಸಲಿ ಎಂಬುದೇ ನಮ್ಮ ಒತ್ತಾಯ ಎಂದು ಮಹಾನಗರ ಪಾಲಿಕೆಯ ಬಿಜೆಪಿಯ ಸದಸ್ಯರು ಸವಾಲು ಹಾಕಿದರು.
ಈ ಸುದ್ದಿಯನ್ನೂ ಓದಿ:
Davanagere: ನಕಲಿ ದಾಖಲೆ ಸೃಷ್ಟಿಸಿ ಬಿಜೆಪಿಯವರಿಂದ ಸರ್ಕಾರಿ ಭೂ ಕಬಳಿಕೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಾಲಿಕೆ ಕೈ ಸದಸ್ಯರ ಡಿಮ್ಯಾಂಡ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಗಳಾದ ಎಸ್. ಟಿ. ವೀರೇಶ್, ಅಜಯ್ ಕುಮಾರ್, ಪ್ರಸನ್ನಕುಮಾರ್ ಅವರು, ಪಾಲಿಕೆಯಲ್ಲಿ ಬಿಜೆಪಿಯ ಆಡಳಿತಾವಧಿಯಲ್ಲಿ ಸರ್ಕಾರಿ ಭೂಮಿ ಕಬಳಿಕೆ ಎಂಬ ಕಾಂಗ್ರೆಸ್ ಆರೋಪ
ಹಾಸ್ಯಾಸ್ಪದ ಎಂದು ಹೇಳಿದರು.
ದಾಖಲೆ ತಿರುಚಿದ್ದು ಯಾರು..?
ಎಸ್. ಎಸ್. ಬಡಾವಣೆ 23 ನೇ ವಾರ್ಡ್ ವ್ಯಾಪ್ತಿಯಲ್ಲಿ ಖಾಲಿ ನಿವೇಶನವು ಫುಜುನ್ನೀಸಾ ಎಂಬುವವರಿಗೆ ಸೇರಿದ್ದಾಗಿದೆ ಎಂಬುದಾಗಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ಡೋರ್ ನಂಬರ್ 3937/ 12ಸಂಖ್ಯೆಯ ನಿವೇಶನವನ್ನು ಎ. ಹೆಚ್. ಶ್ರೀನಿವಾಸ್ ಮೂರ್ತಿ ಅವರಿಗೆ ಮಾರಾಟ ಮಾಡಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಜೂನ್ 20ಕ್ಕೆ ಈ ಆಸ್ತಿ ಪತ್ರ ಕೊಡಲಾಗಿದೆ. ಅದೇ ರೀತಿ ಡೋರ್ ನಂಬರ್ 3937/11 ನಿವೇಶನ ಸಹ ಫೈಜುನ್ನೀಸಾರವರು ಈರಣ್ಣ ಕಮ್ಮಾರ್ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಈ ಆಸ್ತಿಯನ್ನು ಜೂನ್ 30ಕ್ಕೆ ಈ ಆಸ್ತಿಯೆಂದು ಪಾಲಿಕೆಯಲ್ಲಿ ಮಾಡಿಕೊಡಲಾಗಿದೆ. ಹಾಗಾದರೆ ಇದನ್ನು ಮಾಡಿಕೊಡುವಾಗ ಅಧಿಕಾರದಲ್ಲಿ ಇದ್ದವರು ಯಾರು? ದಾಖಲೆ ತಿರುಚಿ ಹೇಳಿದರೆ
ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
ತನಿಖೆ ನಡೆಸಿ ಕ್ರಮ ಕೈಗೊಳ್ಳಿ:
ಈ ಪ್ರಕರಣ ಕುರಿತು ಸರ್ಕಾರ ಅವರದ್ದೇ ಇರುವಾಗಿ ಅಕ್ರಮವಾಗಿದ್ದೆಲ್ಲಿ? ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಏಕಾಏಕಿಯಾಗಿ ಬಿಜೆಪಿಯವರ ಮೇಲೆ ಆರೋಪ ಮಾಡಿದ್ದು ಯಾಕೆ? ನಿವೇಶನ ತಮ್ಮದೆಂದು ಹೇಳುವ
ಫುಜೈನ್ನೀಸ ಯಾರು? ಅವರು ಸಲ್ಲಿಸಿರುವ ನಿವೇಶನಕ್ಕೆ ಸಂಬಂಧಿಸಿದ ದಾಖಲೆಯು ಅಸಲಿಯೇ ಅಥವಾ ನಕಲಿಯೇ ಎಂಬ ಕುರಿತಂತೆ ಪರಿಶೀಲನೆಯಾಗಬೇಕು. ಇದರ ಹಿಂದೆ ಯಾವುದಾದರೂ ಕಾಣದ ಕೈಗಳು ಇವೆಯೇ ಎಂಬ ಬಗ್ಗೆಯೂ
ತನಿಖೆಯಾಗಬೇಕು ಎಂದು ಆಗ್ರಹಿಸಿದರು.
2013ರಿಂದಲೂ ಆಗಲಿ ತನಿಖೆ:
2013ರಿಂದಲೂ ಸಹ ಈ ರೀತಿಯಲ್ಲಿ ಭೂ ಅಕ್ರಮಗಳ ವಿರುದ್ಧ ತನಿಖೆಯಾಗಲಿ. ಪಾಲಿಕೆಯ ಬಿಜೆಪಿ ಎಲ್ಲಾ ಸದಸ್ಯರು ಪಾರದರ್ಶಕವಾಗಿಯೇ ಇದ್ದು, ಯಾವುದೇ ಭ್ರಷ್ಟಾಚಾರ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ದ್ವೇಷ ಬಿಡಿ, ಜನರ ಹಿತ ನೋಡಿ:
ಎಸ್. ಟಿ. ವೀರೇಶ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಜನಸಾಮಾನ್ಯರ ಕೆಲಸಗಳೂ ಆಗುತ್ತಿಲ್ಲ. ಸರ್ಕಾರಿ ಕಚೇರಿಗೆ ಅಲೆದು ಅಲೆದು
ಜನರು ಸುಸ್ತಾಗುತ್ತಿದ್ದಾರೆ. ಭೂ ಕಬಳಿಕೆಯ ವಿರುದ್ಧ ನಾವು ಇದ್ದು, ಅಕ್ರಮ ಭೂ ಕಬಳಿಕೆಯ ಸಮಗ್ರ ತನಿಖೆಯಾಗಲಿ. ರಾಜಕೀಯ, ವೈಯಕ್ತಿಕ ದ್ವೇಷ ಬಿಟ್ಟು ಜನರ ಹಿತ ನೋಡಬೇಕು ಎಂದು ಆಗ್ರಹಿಸಿದರು.
ರಾಜಕೀಯ ದ್ವೇಷ, ವೈಷಮ್ಯ ಬಿಟ್ಟು ಕಾಂಗ್ರೆಸ್ ಸರ್ಕಾರ ಜನರ ಕೆಲಸ ಮಾಡಬೇಕು. ದಾವಣಗೆರೆಯಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೂಡಾ,ಮಹಾನಗರ ಪಾಲಿಕೆ ಹಾಗೂ ತಾ.ಪಂ ನಲ್ಲಿ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ.
ಕೆಸರಿನಲ್ಲಿ ಕಲ್ಲು ಹೊಡೆದು ಸಿಡಿಸಿಕೊಳ್ಳುವುದು ಬೇಡ.ಜನರ ಕೆಲಸ ಮಾಡಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್ ಮಾತನಾಡಿರೇಖಾ ಗಂಡಗಾಳೆ, ಕೆ. ಎಂ. ವೀರೇಶ್, ಸೋಗಿ ಶಾಂತಕುಮಾರ್, ಎಲ್.ಡಿ ಗೋಣೆಪ್ಪ, ಶಿವಾನಂದ್, ಬಿಜೆಪಿ ಮುಖಂಡರಾದ ಸುರೇಶ್, ನಾಗಪ್ಪ ,ಶ್ರೀನಿವಾಸ್ ಉಪಸ್ಥಿತರಿದ್ದರು.
AJAY KUMAR WARNING IN DAVANAGERE, DAVANAGERE NEWS, DAVANAGERE NEWS UPDATES, DAVANAGERE SUDDI