ಬೆಂಗಳೂರು: ಹಲವು ವರ್ಷಗಳ ಕಾಲ ಶ್ರಮಪಟ್ಟು ಕೆಎಎಸ್ ಪರೀಕ್ಷೆ ಬರೆದಿರುವ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದಿದೆ. 384 ಕೆಎಎಸ್ ಹುದ್ದೆಗಳ ಭರ್ತಿಗೆ ಮುಖ್ಯ ಪರೀಕ್ಷೆ ನಡೆಸಿ 9 ತಿಂಗಳಾದರೂ ಫಲಿತಾಂಶ ಪ್ರಕಟಿಸಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ಕೆಪಿಎಸ್ಸಿಯ ನಿರಂತರ ಎಡವಟ್ಟುಗಳಿಂದ ಲಕ್ಷಾಂತರ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದಲ್ಲಿ ಕೆಪಿಎಸ್ಸಿ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದೆ.
ಪರೀಕ್ಷೆಯ ದಿನಾಂಕದ ಗೊಂದಲದಿಂದ ಹಿಡಿದು ಪ್ರಶ್ನೆಪತ್ರಿಕೆಯಲ್ಲಿ ಲೋಪ, ಮರು ಪರೀಕ್ಷೆಗಳು ಮುಂತಾದ ಸರಣಿ ಎಡವಟ್ಟಿನ ಬಳಿಕ ಈಗ ಒಂಭತ್ತು ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸದೇ ಪರೀಕ್ಷೆ ಬರೆದ ಅಭ್ಯರ್ಥಿಗಳನ್ನು ಸತಾಯಿಸುತ್ತಿದೆ
ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಹಸ್ರಾರು ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುವ ಬದಲು ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಬೇಕು. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ.





Leave a comment