ದಾವಣಗೆರೆ: ಚಿಗಟೇರಿ ಆಸ್ಪತ್ರೆ ಬಳಿ ಬೀದಿ ನಾಯಿಗಳು ಮತ್ತು ಹಂದಿಗಳು ಹೆಚ್ಚಾಗಿವೆ . ಚನ್ನಗಿರಿ ರಸ್ತೆಯಲ್ಲಿ, ನಗರದಲ್ಲಿನ ಮಾಂಸದ ಅಂಗಡಿಗಳ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.
ಅವರು ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರು, ನಾಯಿಗಳನ್ನು ವಾರದಲ್ಲಿ ಸೆರೆಹಿಡಿದು ಪ್ರತ್ಯೇಕವಾಗಿ ಸಾಕಾಣಿಕೆ ಮಾಡಲು ರೂ.80 ಲಕ್ಷ ನೀಡಿದ್ದು ಸೆರೆಹಿಡಿಯಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಭಾ ಮಲ್ಲಿಕಾರ್ಜುನ್ ಅವರು ಜಗಳೂರಿನಲ್ಲಿ ಏಕಲವ್ಯ ಶಾಲೆ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು, ಅದರ ಸ್ಥಿತಿಗತಿ ಬಗ್ಗೆ ಪರಿಶಿಷ್ಟ ಪಂಗಡ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸರ್ಕಾರದ ಹಂತದಲ್ಲಿ ಮಂಜೂರಾತಿಗೆ ಕ್ರಮ ವಹಿಸಬೇಕೆಂದಾಗ ಜಿಲ್ಲಾ ಉಸ್ತುವಾರಿ ಸಚಿವರು ಇದರಿಂದ ಉತ್ತಮ ಶಾಲಾ ಸೌಕರ್ಯ ಸಿಗಲಿದೆ ಎಂದರು.
ಶಿಶು ಮತ್ತು ತಾಯಿ ಮರಣ ಶೂನ್ಯಕ್ಕೆ;
ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಶೂನ್ಯಕ್ಕೆ ತಗ್ಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯವರು ಕ್ರಮ ವಹಿಸಬೇಕು. ಯಾವಾಗ ನಿರ್ಲಕ್ಷ್ಯತೆ ಇರುತ್ತದೆ, ಆವಾಗ ತಾಯಿ ಮತ್ತು ಶಿಶು ಮರಣ ಪ್ರಕರಣಗಳು ನಡೆಯುತ್ತವೆ. ಆರೋಗ್ಯಾಧಿಕಾರಿಗಳು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಶಿಶು ಮತ್ತು ತಾಯಿ ಮರಣ ಪ್ರಕರಣಗಳು ಸಂಭವಿಸಬಾರದೆಂದು ಸೂಚನೆ ನೀಡಿದರು.
ಪವರ್‍ಗ್ರಿಡ್‍ನಿಂದ ಸಿಎಸ್‍ಆರ್ ನಿಧಿಯಡಿ ಪೂರೈಕೆಯಾದ ಆರೋಗ್ಯ ಪರಿಕರಗಳು ಕೆಲವು ಕಳಪೆಯಾಗಿದ್ದರೆ, ಕೆಲವು ಕಡೆ ಇದರ ಉಪಯೋಗ ಮಾಡಿಕೊಳ್ಳುತ್ತಿಲ್ಲ. ಆರೋಗ್ಯ ಇಲಾಖೆಯವರು ಕಳಪೆ ಪರಿಕರಗಳನ್ನು ಸ್ವೀಕರಿಸದಿರಲು ಸೂಚನೆ ನೀಡಿ ಹಿಂದೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ರೆಡ್ ಕಾರ್ಪೆಟ್ ಹಾಕಿ ಆಹ್ವಾನಿಸಲಾಗುತ್ತಿತ್ತು, ಆದರೆ ಈಗ ಎಲ್ಲಾ ಕಡೆ ವೈದ್ಯರಿದ್ದಾರೆ. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆಯಾ ಶಾಸಕರನ್ನು ಭೇಟಿ ಮಾಡಿ ಅಲ್ಲಿಗೆ ಬೇಕಾದ ಸೌಕರ್ಯ ಕಲ್ಪಿಸಲು ಸೂಚನೆ ನೀಡಿದರು.
ಈ ವೇಳೆ ಹರಿಹರ ಶಾಸಕರಾದ ಬಿ.ಪಿ.ಹರೀಶ್ ಅವರು ಮಾತನಾಡಿ ಇತ್ತೀಚೆಗೆ ಮುಖ್ಯ ವೈದ್ಯಾಧಿಕಾರಿ ನಿವೃತ್ತಿಯಾಗಿದ್ದು ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿ ಹೋಗಿದ್ದಾರೆ ಎಂದಾಗ ಈ ಬಗ್ಗೆ ಪರಿಶೀಲನೆ ನಡೆಸಲು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜ್ ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





Leave a comment