SUDDIKSHANA KANNADA NEWS/ DAVANAGERE/ DATE:03-08-2023
ದಾವಣಗೆರೆ (Davanagere): ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆ ಆಡಳಿತಾವಧಿಯಲ್ಲಿ ನಡೆದಿರುವ ಸರ್ಕಾರಿ ಜಾಗಗಳ ಭೂ ಪರಭಾರೆ ಸಂಬಂಧಿಸಿದಂತೆ ಒಂದೊಂದೆೇ ಪ್ರಕರಣಗಳು ಹೊರಗೆ ಬರುತ್ತಿವೆ.
ಪಾರ್ಕ್, ರಾಜಕಾಲುವೆ, ಸರ್ಕಾರಿ ಜಾಗಗಳನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ. ಸೂಕ್ತ ತನಿಖೆ ನಡೆಸಿದರೆ ಒಂದೊಂದೇ ಅಕ್ರಮಗಳು ಹೊರಗೆ ಬರಲಿವೆ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್ ಅವರು, ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತಾವಧಿಯ ಮೂರು ವರ್ಷಗಳಲ್ಲಿ ನಡೆದಿರುವ ಒಂದೊಂದೇ ಅಕ್ರಮಗಳು ಗೊತ್ತಾಗುತ್ತಿವೆ.ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಪಾಲಿಕೆ ವ್ಯಾಪ್ತಿಯ ಜಾಗ, ರಾಜಕಾಲುವೆ, ಉದ್ಯಾನವನಗಳ ಜಾಗ ಕಬಳಿಸಲಾಗಿದೆ. ಅಧಿಕಾರಿಗಳನ್ನು ಬಳಸಿಕೊಂಡು ಈ ಹಗರಣಗಳು ನಡೆದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು.
ದೂಡಾ, ಮಹಾನಗರ ಪಾಲಿಕೆ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಕೆಲ ಅಧಿಕಾರಿಗಳು ಅಕ್ರಮ ಹಾಗೂ ಇಲ್ಲಿಯೇ ಹಲವು ವರ್ಷಗಳಿಂದ ಇದ್ದು, ಇಂಥವರನ್ನು ವರ್ಗಾವಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪಾಲಿಕೆಯ ಎಸ್. ಎಸ್. ಬಡಾವಣೆ 23 ನೇ ವಾರ್ಡ್ ಗೆ ಸೇರಿದಂತ ಬುಸ್ನೂರು ಶಾಲೆ ಹಿಂಭಾಗದಲ್ಲಿ ಸಾರ್ವಜನಿಕ ಬಳಕೆಗೆ ಇರುವಂಥ ಸರ್ಕಾರಿ ಜಾಗವನ್ನು ಕಬಳಿಸಲಾಗಿದೆ. ಮಾತ್ರವಲ್ಲ, ಪಾಲಿಕೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಮಾರಾಟ ಮಾಡಿರುವುದು ಗೊತ್ತಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
Regional Transport Office:26 ಬೈಕ್ ಗಳ ವಶ: ಆರ್ ಟಿಒ ಕಚೇರಿಯ ನಾಲ್ವರು ಸಹಾಯಕ ಸಿಬ್ಬಂದಿ ಸೇರಿ ಐವರ ಬಂಧಿಸಿದ್ಯಾಕೆ…?
ನಗರದ ಲಕ್ಷ್ಮೀ ಫ್ಲೋರ್ ಮಿಲ್ ಬಳಿ ಇರುವ ಪಾಲಿಕೆಯ ವಲಯ -2 ಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ರಿ. ಸರ್ವೆ ನಂ. 78/2 ಜಾಗಕ್ಕೆ ಡೋರ್ ನಂಬರ್ ಕೊಟ್ಟು 3937/11, 3937/12, 3937/13, 3937/14 ರಲ್ಲಿ ತಲಾ 30*40 ಅಳತೆಯ ಸೈಟ್ ಗಳನ್ನಾಗಿ ವಿಂಗಡಿಸಿ ನಾಲ್ಕು ಮಂದಿಗೆ ನೋಂದಣಿ ಮಾಡಿಕೊಳ್ಳಲು ಪಾಲಿಕೆಯಿಂದಲೇ ಖಾತೆ ಮಾಡಿಕೊಡಲಾಗಿದೆ. ಇದಕ್ಕಿಂತ ಬಿಜೆಪಿಯವರ ಅಕ್ರಮಕ್ಕೆ ಸಾಕ್ಷಿ ಬೇಕಾ ಎಂದು ಹೇಳಿದರು.
ಸರ್ಕಾರಿ ಖಾಲಿ ನಿವೇಶನ ಮೀಸಲಿಟ್ಟಿದ್ದದ್ದು ಸಾರ್ವಜನಿಕರ ಬಳಕೆಗಾಗಿ. ಆಸ್ಪತ್ರೆ, ಪಾರ್ಕ್ ಅಥವಾ ಶಾಲೆ ಸೇರಿದಂತೆ ಜನರಿಗಾಗಿ ಎಸ್ ಎಸ್ ಬಡಾವಣೆಯ ಈ ಜಾಗ ಕಾಯ್ದಿರಿಸಲಾಗಿತ್ತು. ಮಧ್ಯವರ್ತಿಗಳು ಹಾಗೂ ಪಾಲಿಕೆಯ ಸಿಬ್ಬಂದಿ ಸೇರಿ ಆಸ್ತಿ ವಿವರದ ಎಂಎಆರ್ -19, ಕೆಎಂಎಫ್-24 ಆಸ್ತಿ ವಿವರದ ದಾಖಲೆ ಪುಸ್ತಕಗಳಲ್ಲಿ ತಿದ್ದುಪಡಿ ಮಾಡಿ ಕ್ರಯ ಮಾಡಲು ಹಾಗೂ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದು ಯಾಕೆ. ಈಗಾಗಲೇ ಈ ನಿವೇಶನಗಳಿಗೆ ಡೋರ್ ನಂಬರ್ ಕೊಟ್ಟು ಖಾತೆ ಕೂರಿಸಲಾಗಿದೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿಯೂ ರಿಜಿಸ್ಟರ್ ಈಗಾಗಲೇ ಆಗಿದೆ ಎಂದು ಮಾಹಿತಿ ನೀಡಿದರು.
ಮೇಲಾಧಿಕಾರಿಗಳ ಅನುಮತಿ ಇಲ್ಲದೇ, ಮೂಲ ದಾಖಲಾತಿ ಪರಿಶೀಲಿಸದೇ, ಪಾಲಿಕೆ ಉದ್ಯಾನವನ ಜಾಗವನ್ನು ಅಕ್ರಮವಾಗಿ ನಮೂನೆ -3ರಲ್ಲಿ ಸೇರಿಸಿ ಡೋರ್ ನಂಬರ್ ಕೊಡಲಾಗಿದೆ. ತಪ್ಪು ಎಸಗಿದ ಕಾರಣಕ್ಕೆ ಕಳೆದ ಜುಲೈ 14ರಂದು ಪಾಲಿಕೆಯ ಕಂದಾಯ ಇಲಾಖೆಯ ಕರ ವಸೂಲಿಗಾರರಾದ ಸಿ. ಸುನೀತಾ ಅವರನ್ನು ಅಮಾನತುಗೊಳಿಸಲಾಗಿದೆ. ಡೋರ್ ನಂಬರ್ 1882/81 A ಅಳತೆ 115*115 ಅಡಿಗಳ ಸ್ವತ್ತು ಅಕ್ರಮವಾಗಿ ಬೇರೆಯವರಿಗೆ ಮಾಡಿಕೊಡಲಾಗಿದೆ. ಬಿಜೆಪಿಯವರು ಇದೇ ರೀತಿಯಲ್ಲಿ ಹಲವೆಡೆ ಮಾಡಿದ್ದು ಒಂದೊಂದಾಗಿಯೇ ಹೊರಗೆ ಬರುತ್ತಿವೆ. ಪಕ್ಷೇತರ ಸದಸ್ಯ ಶಿವಪ್ರಕಾಶ್ ರ ಪತ್ನಿ, ಅತ್ತಿಗೆ ಹೆಸರಿನಲ್ಲಿ ನಿವೇಶನ ರಿಜಿಸ್ಟರ್ ಆಗಿದೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು
ಹೇಳಿದರು.
ಮೂರು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿಯವರು ಹಣಕ್ಕಾಗಿ ಅಧಿಕಾರಿಗಳನ್ನು ಅಧಿಕಾರ ಬಳಸಿ ಅಕ್ರಮ ಮಾಡುವಂತೆ ಮಾಡಿದ್ದಾರೆ. ಈ ಕಾಲವಾಧಿಯಲ್ಲಿ ನಡೆದಿರುವ ಅಕ್ರಮಗಳ ಸಮಗ್ರ ತನಿಖೆಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸೂಚನೆ ನೀಡಿದ್ದು, ಕೆಲ ತಿಂಗಳಿನಲ್ಲಿಯೇ ಎಲ್ಲವೂ ಬಯಲಿಗೆ ಬರಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್, ಪಾಮನಹಳ್ಳಿ ನಾಗರಾಜ್, ಉದಯ ಕುಮಾರ್, ಕಾಂಗ್ರೆಸ್ ಮುಖಂಡರಾದ ಜಗದೀಶ್, ಉಮೇಶ್ ಮತ್ತಿತರರು ಹಾಜರಿದ್ದರು.