SUDDIKSHANA KANNADA NEWS/ DAVANAGERE/ DATE:01-08-2023
ದಾವಣಗೆರೆ (Davanagere): ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರರ ಸಿಡಿಗುಂಡಿನ ಮಾತುಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಾತಿನ ಮಲ್ಲಗುದ್ದುಗಳನ್ನು ಕೊಟ್ಟಿದ್ದಾರೆ. ಸಿದ್ದೇಶ್ವರ ಹಾಗೂ ಮಲ್ಲಿಕಾರ್ಜುನ್ ರ ನಡುವಿನ ವಾಕ್ಸಮರ, ವಾಗ್ಬಾಣಗಳು ಮುಂದುವರಿದಿದೆ. ಸಿದ್ದೇಶ್ವರ ಅವರು ಸಿಡಿಗುಂಡಿಗಳಂತೆ ಮಲ್ಲಿಕಾರ್ಜುನ್ ಗೆ ತಿರುಗೇಟು ಕೊಟ್ಟಿದ್ದರು. ಈಗ ಮಲ್ಲಿಕಾರ್ಜುನ್ ಅವರೂ ಸಹ ಅವರದ್ದೇ ಧಾಟಿಯಲ್ಲಿ ಮಲ್ಲಗುದ್ದುಗಳನ್ನು ಕೊಟ್ಟಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಸಿದ್ದೇಶ್ವರ ಅವರು ಸಾರ್ವಜನಿಕವಾಗಿ ಲೂಟಿ ಹೊಡೆದು ಆಸ್ತಿ ಮಾಡಿರುವುದು. ಗುಟ್ಕಾ ಮಾರಿದೆ, ಮೈನ್ಸ್ ಮಾರಿದೆ ಅನ್ನೋದಲ್ಲ. ಇದರಲ್ಲಿಯೇ
ದುಡ್ಡು ಹೊಡೆದಿರುವುದು. ಬರಲಿ ಬೇಕಾದರೆ ಹೈಸ್ಕೂಲ್ ಫೀಲ್ಡ್ ಗೆ. ನೀವೇ ಕರೆಯಿರಿ ಎಲ್ಲರೂ ಸೇರಿ. ದೊಡ್ಡದಾಗಿ ಆಗಲಿ. ಅವರ ಆಡಳಿತಾವಧಿಯಲ್ಲಿ ಏನೇನು ಆಗಿವೆ, ನಮ್ಮ ಕಾಲಾವಧಿಯಲ್ಲಿ ಏನೇನಾಗಿವೆ ಎಂದು ಹೇಳ್ತೀನಿ. ದಾಖಲೆ ಸಮೇತ
ಹೇಳುತ್ತೇನೆ. ತಿಳಿದುಕೊಂಡು ಮಾತನಾಡಲಿ. ಬಂದು ಫೇಸ್ ಮಾಡಲಿ ಎಂದು ಪಂಥಾಹ್ವಾನ ಕೊಟ್ಟಿದ್ದಾರೆ.
ನಾವೇನೂ ಹೆದರುವುದಿಲ್ಲ:
ಜಿ. ಎಂ. ಸಿದ್ದೇಶ್ವರ ಅವರು ಮೈನ್ಸ್ ವಹಿವಾಟು ಸಂಬಂಧ 220 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು, ದಾಖಲಾತಿಗಳು ತೆಗೆಸಲಾ. ದಾಖಲಾತಿ ನಾನು ಕೊಡುತ್ತೇನೆ. ಎಡ ಮತ್ತು ಬಲದಲ್ಲಿ ಪೈಲ್ವಾನ್ ರನ್ನು ಇಟ್ಟುಕೊಂಡರೆ ನಾವು ಹೆದರುತ್ತೇವಾ?
ಇದಕ್ಕೆಲ್ಲಾ ಸೊಪ್ಪು ಹಾಕಲ್ಲ. ಸಾಪ್ ಮಾಡಿಕೊಂಡು ಗರಡಿಮನೆಯಲ್ಲಿಯೇ ಕುಂದರಬೇಕು. ನಮ್ಮ ಬಳಿ ಅವೆಲ್ಲಾ ನಡೆಯಲ್ಲ. ಶೇಕಡಾ 40 ರಷ್ಟಲ್ಲ, ಶೇಕಡಾ 80 ಹಾಗೂ ನೂರರಷ್ಟು ಕಮೀಷನ್ ಪಡೆಯಲಾಗಿದೆ. ಕೆಲವೊಂದೆಲ್ಲಾ ಕೆಲಸವೇ ಆಗಿಲ್ಲ. ಬಿಲ್ ಆಗಿವೆ. ಒಂದೊಂದಾಗಿಯೇ ಎಲ್ಲವನ್ನೂ ಬಯಲಿಗೆಳೆಯುತ್ತೇವೆ. ಈಗ ತನಿಖೆ ವಹಿಸಿರುವುದು ಕೇವಲ ಸ್ಯಾಂಪಲ್ ಅಷ್ಟೇ. ಮುಂಬರುವ ದಿನಗಳಲ್ಲಿ ಎಲ್ಲಾ ಅಕ್ರಮಗಳು ಬಯಲಿಗೆ ಬರಲಿವೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ತಪ್ಪು ಇದ್ದರೆ ತಪ್ಪು ಎನ್ನಬೇಕು. ಸರಿ ಇದ್ದರೆ ಸರಿ ಎನ್ನಲಿ. ಸಂಸ್ಕಾರ ಹೇಳಿಕೊಡುವಷ್ಟು ದೊಡ್ಡವರಲ್ಲ. ನನಗೆ ಸಂಸ್ಕಾರ ಹೇಳಿಕೊಡುವಷ್ಟು ಸಿದ್ದೇಶ್ವರ ದೊಡ್ಡವರಲ್ಲ. ಅವರ ಸಂಸ್ಕಾರ, ಸಂಸ್ಕೃತಿ ಏನು ಎಂಬುದು ನನಗೂ ಗೊತ್ತಿದೆ ಎಂದು
ವಾಗ್ದಾಳಿ ನಡೆಸಿದರು.
ಬಡ್ಡಿ ಲೇವಾದೇವಿ ಮಾಡಿಲ್ಲ:
ನಮ್ಮದು ಯಾವಾಗಲೂ ಬಡ್ಡಿ ಲೇವಾದೇವಿ ಇಲ್ಲ. ನಾವು ಯಾವಾಗಲೂ ಹಣವನ್ನು ಬಡ್ಡಿಗೆ ಕೊಟ್ಟಿಲ್ಲ. ಸಿದ್ದೇಶ್ವರರು ಕೊಟ್ಟಿರಬಹುದು. ರೈತರ ದುಡ್ಡು ಹೊಡೆಯಲು ಒಂದಕ್ಕೆ ನಾಲ್ಕು ಪಟ್ಟು ಬಡ್ಡಿ ಹಣ ತಿಂದಿರಬಹುದು. ಈ ರೀತಿ ಆಸ್ತಿ ಮಾಡಿರಬಹುದು. ನಮ್ಮ ಮನೆತನದಲ್ಲಿ ಯಾರಿಗೂ ಬಡ್ಡಿಗೆ ಹಣ ಕೊಟ್ಟಿಲ್ಲ. ಕೈಗಡವಾಗಿ ಹಣ ನೀಡಿದ್ದೇವೆ. ವ್ಯವಹಾರ ದೃಷ್ಟಿಯಿಂದ ಹದಿನೈದು ದಿನಕ್ಕೆ ತೆಗೆದುಕೊಂಡು ಹೋಗಿ ಮತ್ತೆ ವಾಪಸ್ ಕೊಡುತ್ತಾರೆ. ಬಿಟಿ ರುದ್ರಮ್ಮರ ಮಗ ಸಿದ್ದೇಶ್, ಮಾಜಿ ಶಾಸಕ ಹೆಚ್. ಶಿವಣ್ಣರ ಪುತ್ರ ಮಂಜಣ್ಣ ಹಾಗೂ ಮಲ್ಲಿಕಾರ್ಜುನಪ್ಪರು ಕೊಟ್ಟು ತೆಗೆದುಕೊಂಡಿದ್ದಾರೆ. ಮಾವ- ಅಳಿಯ ವಿಶ್ವಾಸದಲ್ಲಿ ವ್ಯವಹಾರ ಮಾಡಿದ್ದಾರೆಯೇ ವಿನಾಃ ಬಡ್ಡಿ ವ್ಯವಹಾರ ನಡೆಸಿಲ್ಲ. 1994ರಲ್ಲಿ ಸಿದ್ದೇಶ್ವರ ಹೆಗಲಿಗೆ ಚೀಲ ಹಾಕಿಕೊಂಡು ಹೇಗೆ ಬರುತ್ತಿದ್ದ ಎಂಬುದು ನನಗೂ ಗೊತ್ತಿದೆ ಎಂದು ಎಸ್ ಎಸ್ ಎಂ ಕಿಡಿಕಾರಿದರು.
ದೊಡ್ಡನಾಗಿದ್ದೇನೆ ಅಂತಾನಲ್ಲ ಅವ್ನು. ನನ್ನಿಂದ ಸಂಸ್ಕಾರ, ಸಂಸ್ಕೃತಿ ಕಲಿಯಲಿ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ನನಗೆ ಸಂಸ್ಕೃತಿ ಕಲಿಸಿಕೊಟ್ಟಿದ್ದಾರೆ. ಮೂರು ಜನರು ಸೀಸನ್ ಟೈಂನಲ್ಲಿ ದುಡ್ಡು ತೆಗೆದುಕೊಂಡು ಹೋಗಿದ್ದಾರೆ, ಕೊಟ್ಟಿದ್ದಾರೆ.
ಮಾವ – ಅಳಿಯ ಅಂತಾ ಕೊಡೋರು, ತೆಗೆದುಕೊಳ್ಳೋರು. ಮಂಡಿ ಊರಿ ಇಲ್ಲಿಗೆ ಬಂದಿದ್ದಾನೆ. ಇವರು ಕೇಳಿರಬಹುದು, ಅವ್ರೂ ಕೊಟ್ಟಿರಬಹುದು. ಅದನ್ನೇ ಬಡ್ಡಿ ಸಮೇತ ವಸೂಲಿ ಮಾಡಿದ್ದೇನೆ ಎನ್ನುವುದು ದುರಹಂಕಾರ ಎಂದು
ಹೇಳಿದರು.
ದೂರು ಕೊಡಲ್ಲ, ಕ್ರಮ ತೆಗೆದುಕೊಳ್ತೀನಿ:
ಸಿದ್ದೇಶ್ವರ ಬಡ್ಡಿ ಸಮೇತ ಹಣ ವಸೂಲಿ ಮಾಡಿ ಊರು ಹಾಳು ಮಾಡಿರುವುದು. ಈಗ ದಾವಣಗೆರೆಯಲ್ಲಿ ಸಬ್ ರಿಜಿಸ್ಟ್ರಾರ್ ಸರ್ಕಾರಿ ಜಾಗವಾದ ಪಾರ್ಕ್ ನ ಜಾಗವನ್ನು ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ. ಹಳೇ ದಾವಣಗೆರೆಯಲ್ಲಿ ಕಾರ್ಪೊರೇಟರ್
ಅಕ್ಕ, ಅವ್ವನಿಗೆ ಯಾರು ಮಾಡಿಕೊಟ್ಟಿದ್ದಾರೆ ಎಂಬುದು ಗೊತ್ತು. ನಾನು ದೂರು ಕೊಡಲ್ಲ, ಕ್ರಮ ತೆಗೆದುಕೊಳ್ಳುತ್ತೇನೆ. 2021 ರಲ್ಲಿ ಖಾತೆ, 2022ರಲ್ಲಿ ರಿಜಿಸ್ಟ್ರರ್ ಮಾಡಿದ್ದಾರೆ. ಪಾರ್ಕ್ ಜಾಗ ರಿಜಿಸ್ಟ್ರರ್ ಆಗಿದೆ. ಯಾರ್ಯಾರೋ ಹೆಸರಿನಲ್ಲಿ ಲೂಟಿ
ಹೊಡೆಯಲಾಗಿದೆ. ಇದೇನಾ ಆಡಳಿತ ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ:
Diamond:ದಿನಗೂಲಿ ನೌಕರರ ಮಕ್ಕಳೀಗ ಸಿನಿಮಾ ಸ್ಟಾರ್ಸ್: ಡೈಮಂಡ್ ಕ್ರಾಸ್ ನ ದಾವಣಗೆರೆ ಯುವಕರ “ಡೈಮಂಡ್” ಯಶೋಗಾಥೆ
ಖಾತೆ ಮಾಡಿಕೊಟ್ಟಿದ್ದ ಬಿಲ್ ಕಲೆಕ್ಟರ್ ಅನ್ನು ಕಾರ್ಪೊರೇಷನ್ ನಲ್ಲಿ ಸಸ್ಪೆಂಡ್ ಮಾಡಲಾಗಿದೆ. ಒಳ್ಳೆಯ ಆಡಳಿತ ಕೊಡಬೇಕು, ಆಡಳಿತ ಸರಿಯಾಗಿಬೇಕು. ದಾವಣಗೆರೆ ಜಿಲ್ಲೆಯಲ್ಲಿ ವರ್ಗಾವಣೆ ಸೇರಿದಂತೆ ಎಲ್ಲವೂ ನಡೆದಿದ್ದು ಸಿದ್ದೇಶ್ವರರ
ಅಡಿಯಲ್ಲಿಯೇ ಎಂದರು.
ಬ್ಲ್ಯೂಫಿಲಂ ನೋಡ್ತಿದ್ದಾರಾ ಏನೋ..?
ಮೊನ್ನೆ ಏನೋ ಸಿದ್ದೇಶ್ವರ ಅವರು ಬ್ಲ್ಯೂಫಿಲಂ ನೋಡ್ತಿದ್ದಾರಾ ಏನೋ. ಕಾಲ್ ಹೆಂಗ್ ಮಾಡ್ತಾರೆ. ಆನ್ ಮಾಡದೇ ಗೊತ್ತಾಗುತ್ತಾ? ಅದೂ ಚಟ ಇರಬೇಕು. ಇದೇನಾ ಸಂಸ್ಕಾರ. ಬ್ಲೂಫಿಲಂ ನೋಡೋದಾ. ಊರಗೆ ಪರ್ಫೆಟ್ ಆಗಿ ಕೆಲಸ ಮಾಡಲಿ. ರೈಲ್ವೆ ಅಂಡರ್ ಪಾಸ್ ಗೆ ಅದರ ಮೇಲೆ ಕನ್ ಸ್ಟ್ರಕ್ಟಡ್ ಬೈ ಸಿದ್ದೇಶ್ವರ್ ಅಂತಾ ಹೆಸರು ಹಾಕಿಕೊಳ್ಳಲಿ. ದೇಶ ಉಳಿಯಬೇಕು. ಪಾರ್ಕ್ ಇದೆ. ಕಾರ್ಪೊರೇಷನ್ ವ್ಯಾಪ್ತಿಯಲ್ಲಿದೆ. ಇವ್ರು ಒತ್ತುವರಿ ಮಾಡಿಕೊಂಡಿರುವ ಜಮೀನು ಬಿಡಬೇಕಾ? ದೂಡಾದಲ್ಲಿ ಹಲವು ಆರೋಪಗಳು ಕೇಳಿ ಬರುತ್ತಿವೆ. ಸಿಡಿಪಿ ಬಗ್ಗೆ ಆರೋಪ ಇದೆ. ಯಾರದ್ದೋ ಸೈಟ್ ನಲ್ಲಿ ಸಾರ್ವಜನಿಕ ರಸ್ತೆ ಮಾಡಲಾಗಿದೆ. ಅಜ್ಜನ ಕಾಲದಲ್ಲಿ ಆಸ್ತಿ ಮಾಡಿಕೊಂಡು ಭಾಗ ಮಾಡಿಕೊಂಡು ಇರುತ್ತಾರೆ. ಮುಕ್ಕಾಲು ಅಥವಾ ಎರಡು ಎಕರೆ ಜಾಗ ಬಂದಿರುತ್ತದೆ. ಅಣ್ಣ ಒಂದು ಪಾರ್ಟಿ, ತಮ್ಮ ಒಂದು ಪಾರ್ಟಿಯಲ್ಲಿದ್ದರೆ ಅಣ್ಣನಿಗೊಂದು ಕಾನೂನು, ತಮ್ಮನಿಗೊಂದು ಕಾನೂನಾ? ನಿಯಮದ ಪ್ರಕಾರ ಕೆಲಸ ಮಾಡಬೇಕಲ್ವಾ ಎಂದು ಹೇಳಿದರು.
ಪಕ್ಷ ಬಿಟ್ಟು ಬರಲಿ, ಚುನಾವಣೆಗೆ ರೆಡಿ:
ಮೋದಿ ಫೋಟೋ ಇಟ್ಟುಕೊಂಡು ಸಿದ್ದೇಶ್ವರ ಮತ ಕೇಳುತ್ತಾರೆ. ಕಾಂಗ್ರೆಸ್ ನಲ್ಲೇ ಇದ್ದು, ಕಾಂಗ್ರೆಸ್ ನ ನಾನು ಕಟ್ಟಾ ಅಭಿಮಾನಿ. ನಮ್ಮ ಕುಟುಂಬವೇ ಕಾಂಗ್ರೆಸ್. ಅವರು ಎಲ್ಲಾದರೂ, ಯಾವ ಪಕ್ಷದಲ್ಲಾದರೂ ಇರಲಿ. ನನಗೂ ಪಕ್ಷ ಬೇಡ, ಅವರಿಗೂ ಪಕ್ಷ ಬೇಡ. ವೈಯಕ್ತಿಕವಾಗಿ ನಿಲ್ಲೋಣ. ಯಾವ ಚುನಾವಣೆಗೆ ಆದರೂ ಆಗಲಿ. ಪಾರ್ಟಿ ಬೇಡ್ವೇ ಬೇಡ. ಯಾರ ಆಶೀರ್ವಾದನೂ ಬೇಡ. ಜನರ ಆಶೀರ್ವಾದ ಅಷ್ಟೇ ಬೇಕು ಎಂದು ಸವಾಲು ಹಾಕಿದರು.
ಸಿಎಂ ಪತ್ರ ಹರಿದು ಹಾಕಿಲ್ಲ:
ಯಾವ ಆಪರೇಷನ್ ಅಲ್ಲ. ಬಿಜೆಪಿಯವರ ರೀತಿ ಭ್ರಷ್ಟ ಸರ್ಕಾರ ಅಲ್ಲ. ಯಾವುದೇ ತೊಂದರೆ ಇಲ್ಲ. ಚರ್ಚೆ ಮಾಡಲು ಕರೆದಿದ್ದಾರೆ. ಎಂಎಲ್ ಎ ಹಾಗೂ ಸಚಿವರ ನಡುವೆ ಕೆಲವೊಂದು ಕ್ಲಿಷ್ಟಕರ ವಿಚಾರಗಳು ಇರುತ್ತವೆ. ಅವುಗಳನ್ನು ಕುಳಿತು ಚರ್ಚಿಸಿ ಪರಿಹರಿಸಿಕೊಳ್ಳುತ್ತೇವೆ. ವೈಯಕ್ತಿಕವಾಗಿ ದ್ವೇಷ ಇಲ್ಲ. ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಅವರು ಸಿಎಂ ಸಿದ್ದರಾಮಯ್ಯರಿಗೆ ಚೀಟಿ ಕೊಟ್ಟರು, ಅದನ್ನು ಸಿಎಂ ಹರಿದು ಹಾಕಿದ್ದಾರೆ ಎಂಬುದು ಸುಳ್ಳು. ಸಿಎಲ್ ಪಿ ಸಭೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಶಿವಗಂಗಾ ಬಸವರಾಜ್ ಪತ್ರ ಬರೆದಿರುವ ಕುರಿತಂತೆ ಕೇಳಿಲ್ಲ, ಕೊಟ್ಟಿರುವ ಬಗ್ಗೆಯೂ ಗೊತ್ತಿಲ್ಲ. ನಾನು ಸಿಎಲ್ ಪಿ ಸಭೆಯಲ್ಲಿದ್ದೆ. ಏನು ಮಾತನಾಡಬೇಕೋ ಅದನ್ನೇ ಮಾತನಾಡಿದ್ದೇವೆ. ಅಸಮಾಧಾನ ಸ್ವಲ್ಪ ಇರುತ್ತದೆ. ಸರಿಪಡಿಸಲು ಕರೆಯಲಾಗಿದೆ. ಒಂದೊಂದೇ ಸರಿಪಡಿಸಲು ಸೂಚಿಸಿದ್ರು ಅಷ್ಟೇ. ಈ ರೀತಿ ಯಾವ ಘಟನೆಗಳೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಗಟ್ಟಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಟ್ಟಿಯಾಗಿದ್ದಾರೆ. ಒಳ್ಳೆ ರೀತಿಯಲ್ಲಿ ಆಡಳಿತ ನಡೆಸಿಕೊಂಡು ಹೋಗ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ನಡೆಸಲು ಸಿದ್ಧತೆ ನಡೆಸಿರುವ ಕುರಿತಂತೆ ನನಗೇನೂ ಗೊತ್ತಿರುತ್ತದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತನಿಖೆ ನಡೆಯುತ್ತಿದೆ:
ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಕಾನೂನಿನ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುವಂತೆ ಹೇಳಿದ್ದೇನೆ. ಬಡವರಿಗೆ ನಿವೇಶನ ಸಿಗಬೇಕು ಅಷ್ಟೇ. ಕೆಲವೆಡೆಗಳಲ್ಲಿ ದುಡ್ಡು ಪಡೆದು ನಿವೇಶನ ಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು
ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಹಿತಿ ಕೇಳಿದೆ, ಸಸ್ಪೆಂಡ್ ಮಾಡಿದ್ದಾರೆ..!
ನಾನು ಬಿಲ್ ಕಲೆಕ್ಟರ್ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮಾಹಿತಿ ಕೇಳಿದೆ. ಆದ್ರೆ, ಕಮೀಷನರ್ ಸಸ್ಪೆಂಡ್ ಮಾಡಿಬಿಟ್ಟಿದ್ದಾರೆ. ಇಂಥವು ತುಂಬಾನೇ ಆಗಿವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲಿ, ಪಾರದರ್ಶಕ ಆಡಳಿತ ನೀಡಬೇಕು ಎಂಬುದು ನಮ್ಮ ಉದ್ದೇಶ. ಅಧಿಕಾರಿಗಳನ್ನು ಬಳಸಿಕೊಂಡು ಬಿಜೆಪಿಯವರು ಅಕ್ರಮ ಎಸಗಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ತೊಂದರೆ ಆನುಭವಿಸುವಂತಾಗಿದೆ. ಬಿಜೆಪಿಯವರು ಒಳ್ಳೆಯ ಆಡಳಿತದ ಬದಲು ಎಲ್ಲವನ್ನೂ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದರು.
Comments 5