SUDDIKSHANA KANNADA NEWS/ DAVANAGERE/ DATE:28-07-2023
ದಾವಣಗೆರೆ (DAVANAGERE): ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರ ಕುಂದುಕೊರತೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಕಲಾಪ ನಡೆಯುತಿತ್ತು. ಈ ವೇಳೆ ವೃದ್ದೆಯೊಬ್ಬರು ಕುಸಿದು ಬಿದ್ದರು. ತಕ್ಷಣವೇ ಧಾವಿಸಿ ದಾವಣಗೆರೆ (DAVANAGERE) ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ವೃದ್ಧೆಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ನಾಗರೀಕರ ಕುಂದುಕೊರತೆಗಳಿಗೆ ಸಂಬಂಧಿಸಿದ ನ್ಯಾಯಾಲಯದ ಕಲಾಪದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ಭಾಗವಹಿಸಿದ್ದರು. ಈ ವೇಳೆ ಹಿರಿಯ ನಾಗರಿಕರಾದ ಹಾವೇರಿಯ ವಯೋವೃದ್ದೆ 73 ವರ್ಷದ ಮುರಿಗೆಮ್ಮ ತಮ್ಮ ಕುಂದು ಕೊರತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗವಹಿಸಲು ನ್ಯಾಯಾಲಯದಲ್ಲಿ ಕಕ್ಷಿದಾರರಾಗಿ ಆಗಮಿಸಿದ್ದರು.
ಈ ವೇಳೆ ಅಸ್ವಸ್ಥರಾಗಿ ಕೆಳಗೆ ಉರುಳಿ ಬಿದ್ದು ಪ್ರಜ್ಞೆಹೀನರಾದರು. ನ್ಯಾಯಾಧೀಶರ ಸ್ಥಾನದಲ್ಲಿ ವೆಂಕಟೇಶ್ ಅವರಿದ್ದರು. ಎಂ.ಡಿ. ಜನರಲ್ ಮೆಡಿಷನ್ ವೈದ್ಯರಾಗಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಅವರು ತಕ್ಷಣವೇ ಮಹಿಳೆಯ ನಾಡಿ ಪರೀಕ್ಷೆ ಮಾಡುವ ಮೂಲಕ ಸ್ವತಃ ಚಿಕಿತ್ಸಾ ಸಲಹೆ, ಪಿಜಿಯೋತೆರಫಿ ಮಾಡುವ ಮೂಲಕ ಮಹಿಳೆಯನ್ನು ಎಚ್ಚರಗೊಳಿಸಿ ಮಾನವೀಯತೆ ಮೆರೆದ ಘಟನೆ ನಡೆಯಿತು.
ವಯೋವೃದ್ದೆ ಲೋ ಬಿ.ಪಿ, ಮಧುಮೇಹದಿಂದ ಬಳಲುತ್ತಿದ್ದು ಇದನ್ನು ಸಿಪಿಆರ್ ಎಂದೇ ಕರೆಯಲಾಗುತ್ತದೆ. ಇದರಿಂದ ಆ ವೃದ್ದೆಗೆ ಜೀವ ಬಂದಂತಾಯಿತು.
ಎಲ್ಲರ ವಿಶ್ವಾಸ ಪಡೆದು ಜನಪರ ಕೆಲಸ:
ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಮತ್ತು ಶಾಸಕರ ಸಲಹೆಗಳನ್ನು ಪಡೆದು ವಿಶ್ವಾಸದೊಂದಿಗೆ ಜಿಲ್ಲೆಯ ಅಭಿವೃದ್ದಿ ಮತ್ತು ಜನಪರ ಆಡಳಿತ ನೀಡಲು ಕೆಲಸ ಮಾಡುವೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವ ಜೊತೆಗೆ ಅವರ ಕೆಲಸವನ್ನು ವಿಳಂಬವಿಲ್ಲದೆ ಕೆಲಸ ಮಾಡಬೇಕು. ತಾಲ್ಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಕ್ಷೇತ್ರಕ್ಕೆ ಇಳಿದು ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಅವರ ಕೆಲಸವನ್ನು ಪರಿಗಣಿಸಿ ತಾಲ್ಲೂಕುವಾರು ಶ್ರೇಣಿಯನ್ನು ನೀಡುವ ಕೆಲಸವನ್ನು ಮಾಡಲಾಗುತ್ತದೆಯಲ್ಲದೆ ಗ್ರಾಮ ವಾಸ್ತವ್ಯದಂತಹ ಕೆಲಸಗಳನ್ನು ಮಾಡುವ ಮೂಲಕ ಜನಸ್ನೇಹಿ ಆಡಳಿತವನ್ನು ಕೊಂಡೊಯ್ಯಲಾಗುತ್ತದೆ ಎಂದರು.
ಈ ಸುದ್ದಿಯನ್ನೂ ಓದಿ:
Rain: ಮಳೆ ಮಳೆ… ಮಳೆನಾಡಾದ ಬೆಣ್ಣೆನಗರಿ, ಈ ಕ್ರಮಗಳ ಅನುಸರಿಸಿದರೆ ರೋಗಗಳಿಂದ ದೂರ ದೂರ ಗ್ಯಾರಂಟಿ… ಹಾಗಾದ್ರೆ ಓದಿ ಅನುಸರಿಸಿ ತಡಮಾಡ್ಬೇಡಿ…
ಜಿಲ್ಲೆಯಲ್ಲಿ ಬೀಜ, ಗೊಬ್ಬರ ದಾಸ್ತಾನು:
ಜಿಲ್ಲೆಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಮಳೆ ಕೊರತೆಯಾಗಿದ್ದು ಈ ಕೊರತೆ ಜುಲೈನಲ್ಲಿ ನಿವಾರಣೆಯಾಗಿ ವಾಡಿಕೆಗಿಂತ ಶೇ 22 ರಷ್ಟು ಅಧಿಕ ಮಳೆಯಾಗಿದೆ. ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ಗೊಬ್ಬರ ದಾಸ್ತಾನಿರುತ್ತದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಶೇ 55 ರಷ್ಟು ಬಿತ್ತನೆಯಾಗಿದೆ. ನೀರಾವರಿ ಆಶ್ರಿತ ಭತ್ತವನ್ನು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಭದ್ರಾ ಜಲಾಶಯದಲ್ಲಿ ಪ್ರಸ್ತುತ 159.1 ಅಡಿ ನೀರಿದ್ದು ಇದು 163 ಅಡಿಗೆ ಏರಿಕೆಯಾದ ತಕ್ಷಣ ಬೆಳೆಗಳಿಗೆ ನೀರು ಬಿಡಲಾಗುತ್ತದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ನಿರ್ಣಯಿಸಲಾಗುತ್ತದೆ ಎಂದು ತಿಳಿಸಿದರು.
ಮುಂಗಾರು ಹಂಗಾಮಿಗೆ 1.54 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇರುತ್ತದೆ. ಅದರಲ್ಲಿ ಜುಲೈನಲ್ಲಿ 29480 ಮೆ.ಟನ್ ಬೇಡಿಕೆ ಇದ್ದು 44563 ಮೆ.ಟನ್ ಗೊಬ್ಬರ ದಾಸ್ತಾನು ಇರುತ್ತದೆ. ಮತ್ತು 13000 ಮೆ.ಟನ್ ಕಾಪು ದಾಸ್ತಾನಿರುತ್ತದೆ. ಬಿತ್ತನೆ ಬೀಜದಲ್ಲಿ 53662 ಕ್ವಿಂಟಾಲ್ ಬೇಡಿಕೆ ಇದ್ದು 43218 ಕ್ವಿಂಟಾಲ್ ವಿತರಣೆ ಮಾಡಿದೆ. ಇನ್ನೂ 10444 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿರುತ್ತದೆ ಎಂದರು.
24 ಗಂಟೆಯಲ್ಲಿ ಪರಿಹಾರ:
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಿಡಿಲು ಬಡಿದು ಇಬ್ಬರು ಮೃತರಾಗಿದ್ದು ಒಂದು ಮಗು ಮನೆ ಕುಸಿತದಿಂದ ಮೃತರಾಗಿದ್ದು ಸರ್ಕಾರದ ಮಾರ್ಗಸೂಚಿಯನ್ವಯ ತಲಾ 5 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ 11 ತೀವ್ರ, 58 ಭಾಗಶಃ ಮನೆಗಳು ಕುಸಿದಿವೆ. ಇವುಗಳಿಗೆ ಮಾರ್ಗಸೂಚಿಯನ್ವಯ ತೀವ್ರ ಹಾನಿ ಮನೆಗಳಿಗೆ ರೂ.1.20 ಲಕ್ಷ ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ ರೂ.6500 ಗಳ ಪರಿಹಾರ ವಿತರಣೆ ಮಾಡಲಾಗಿದೆ. ಪ್ರಕೃತಿ ವಿಕೋಪದಿಂದ ಘಟಿಸುವ ಪ್ರಕರಣಗಳಿಗೆ ಮರಣ ಹೊಂದಿದಲ್ಲಿ 24 ಗಂಟೆಯಲ್ಲಿ ಮತ್ತು ಮನೆ ತೀವ್ರ ಹಾನಿಯಾದಲ್ಲಿ 48 ಗಂಟೆಯಲ್ಲಿ ಪರಿಹಾರ ತಲುಪಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಮಳೆಯಿಂದ 51 ಅಂಗನವಾಡಿ, 91 ಶಾಲಾ ಕೊಠಡಿಗಳಿಗೆ, 2 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿವೆ. ಈ ಕೊಠಡಿಗಳನ್ನು ಪ್ರಕೃತಿ ವಿಕೋಪ ನಿಧಿಯಡಿ ದುರಸ್ಥಿ ಮಾಡಿಸಲಾಗುತ್ತದೆ ಎಂದು ಹೇಳಿದರು.
ಸೆಲ್ಪಿ ಪಾಯಿಂಟ್ಗಳಲ್ಲಿ ಎಚ್ಚರಿಕೆ ಫಲಕ:
ತುಂಗಭದ್ರಾ ನದಿಯು ತುಂಬಿ ಹರಿಯುತ್ತಿದ್ದು ಜನರು ಈ ದೃಶ್ಯ ಸೆರೆಯಿಡಿಯಲು ಸೆಲ್ಪಿ ಪಾಯಿಂಟ್ಗಳಲ್ಲಿ ಹೋಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದರು.
ಗ್ಯಾರಂಟಿಗಳ ಅನುಷ್ಟಾನ:
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಜಿಲ್ಲಾ ಆಡಳಿತ ಎಲ್ಲಾ ಕ್ರಮ ಕೈಗೊಳ್ಳಲಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 4.5 ಲಕ್ಷ ಮಹಿಳೆಯರಿದ್ದಾರೆ ಎಂದು ಗುರುತಿಸಲಾಗಿದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಶೇ 80 ರಷ್ಟು ನೊಂದಣಿಯಾಗಿದ್ದು ನಗರ ಪ್ರದೇಶದಲ್ಲಿ ಸೇವಾ ಕೇಂದ್ರಗಳಲ್ಲಿ ಜನಸಂದಣಿ ಇದ್ದು ಹೆಚ್ಚುವರಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗುತ್ತದೆ ಮತ್ತು ಸಕಾಲ, ಭೂಮಿ ಸೇರಿದಂತೆ ಜಿಲ್ಲೆಯನ್ನು ಎಲ್ಲಾ ಸೇವೆಗಳಲ್ಲಿ ಮುಂಚೂಣಿಗೆ ಬರಲು ಶ್ರಮಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು.
DAVANAGERE, DAVANAGERE NEWS, DAVANAGERE SUDDI, DAVANAGERE DC, DAVANAGERE DC TREATMENT, DAVANAGERE NEWS UPDATES