Home ದಾವಣಗೆರೆ ಶಾಮನೂರು ಕುಟುಂಬದ ಬಗ್ಗೆ ಬಿಜೆಪಿಯವರು ವಿನಾಕಾರಣ ಅವಹೇಳನ ಮಾಡಿದ್ರೆ ಸಹಿಸಲ್ಲ: ಗಜೇಂದ್ರ ಜಗನ್ನಾಥ್ ಎಚ್ಚರಿಕೆ
ದಾವಣಗೆರೆಬೆಂಗಳೂರು

ಶಾಮನೂರು ಕುಟುಂಬದ ಬಗ್ಗೆ ಬಿಜೆಪಿಯವರು ವಿನಾಕಾರಣ ಅವಹೇಳನ ಮಾಡಿದ್ರೆ ಸಹಿಸಲ್ಲ: ಗಜೇಂದ್ರ ಜಗನ್ನಾಥ್ ಎಚ್ಚರಿಕೆ

Share
Share

SUDDIKSHANA KANNADA NEWS/DAVANAGERE/DATE:11_12_2025

ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಬಗ್ಗೆ ಬಿಜೆಪಿಯವರು ವಿನಾಕಾರಣ ಅವಹೇಳನ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ದಾವಣಗೆರೆ ಉತ್ತರ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಜಗನ್ನಾಥ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ನಾಯಕರು ಜನರಲ್ಲಿ ತಪ್ಪು ಸಂದೇಶ ನೀಡಲು ಮುಂದಾಗುತ್ತಿರುವುದು ಬಿಜೆಪಿಯವರು ನೈತಿಕತೆ ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದಿದ್ದಾರೆ.

ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಬಾಪೂಜಿ ವಿದ್ಯಾಸಂಸ್ಥೆ ಮೂಲಕ ಲಕ್ಷಾಂತರ ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಈ ಸಂಸ್ಥೆಯು ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ. ಇಷ್ಟು ವರ್ಷಗಳ ಕಾಲ ಸಂಸ್ಥೆ ಉಳಿಸಿಕೊಂಡು ಬಂದು ಜನಸಾಮಾನ್ಯರಿಗೆ ಸಹಾಯ ಮಾಡಿದೆ. ಆದರೆ ರಾಜಕೀಯವಾಗಿ ಅಧಃಪತನಕ್ಕೊಳಗಾಗಿರುವ ಯಶವಂತರಾವ್ ಜಾಧವ್ ಹಿಂದಿನಿಂದಲೂ ವಿನಾಕಾರಣ ಆರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ಬಾರಿ ಬಿಜೆಪಿ ಟಿಕೆಟ್ ನೀಡಿದರೂ ಯಶವಂತರಾವ್ ಜಾಧವ್ ಸೋಲಲು ಸುಳ್ಳು ಆರೋಪ ಮಾಡಿಕೊಂಡಿರುವುದೇ ಕಾರಣ. ಇನ್ನು ಧನಂಜಯ್ ಕಡ್ಲೇಬಾಳು ದೊಡ್ಡವರ ಬಗ್ಗೆ ಮಾತನಾಡಿಬಿಟ್ಟರೆ ನಾಯಕನಾಗಿಬಿಡುತ್ತೇನೆಂಬ ಭ್ರಮೆಯಲ್ಲಿದ್ದಾರೆ. ದಾವಣಗೆರೆ ಬಿಜೆಪಿಯಲ್ಲೇ ನಾಲ್ಕೈದು ಬಣಗಳವೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ. ಒಂದು ಕಡೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣ, ಮತ್ತೊಂದೆಡೆ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಬಣ ಕಚ್ಚಾಡುತ್ತಲೇ ಇವೆ. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆ ತಟ್ಟೆಯಲ್ಲಿ ನೊಣ ಇರುವುದನ್ನು ನೋಡಲು ಹೋಗಿರುವ ಈ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles