ಹೊಸದಿಲ್ಲಿ: ದಾರುಣ ಭೂಕುಸಿತ (Kerala Landslide) ಸಂಭವಿಸಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಆಗಸ್ಟ್ 10) ಕೇರಳದ ವಯನಾಡ್ (Wayanad Landslide) ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಮೋದಿ ಭೂಕುಸಿತದ ಸಂತ್ರಸ್ತರನ್ನು ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲಿದ್ದಾರೆ. ದುರಂತದಲ್ಲಿ ಸಂತ್ರಸ್ತರಾದವರಿಗೆ ಸರಿಯಾದ ಬೆಂಬಲ, ಪರಿಹಾರ ದೊರೆಯುವಿಕೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ.
ವಯನಾಡ್ನ ಮಾಜಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭೇಟಿಯ ನಂತರ ಪ್ರಧಾನಿ ವಯನಾಡ್ ಭೂಕುಸಿತವನ್ನು ʼರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
“ಮೋದಿ ಜೀ, ಭೀಕರ ದುರಂತದ ಬಗ್ಗೆ ವೈಯಕ್ತಿಕವಾಗಿ ಅವಲೋಕನ ಮಾಡಲು ವಯನಾಡ್ಗೆ ಭೇಟಿ ನೀಡುತ್ತಿರುವುದಕ್ಕಾಗಿ ಧನ್ಯವಾದಗಳು. ಇದೊಂದು ಒಳ್ಳೆಯ ನಿರ್ಧಾರ. ಪ್ರಧಾನಿ ಒಮ್ಮೆ ವಿನಾಶದ ಪ್ರಮಾಣವನ್ನು ನೇರವಾಗಿ ನೋಡಿದ ನಂತರ, ಅವರು ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಗಾಂಧಿ ಶುಕ್ರವಾರ ರಾತ್ರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.