ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Guru Purnima: “ಹರ ಮುನಿದರೂ ಗುರು ಕಾಯ್ವನು”… ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ…!

On: July 7, 2023 12:33 PM
Follow Us:
guru poornami
---Advertisement---

SUDDIKSHANA KANNADA NEWS/ DAVANAGERE/ DATE:07-07-2023

Davanagere: ಗುರು ಪೂರ್ಣಿಮಾ (Guru Purnima) ಸ್ಪೆಷಲ್ ಸ್ಟೋರಿ

 

ಗುರುವಿನ ಗುಲಾಮನಾಗುವ ತನಕ

ದೊರೆಯದಣ್ಣ ಮುಕುತಿ

ಪರಿ ಪರಿ ಶಾಸ್ತ್ರವನೋದಿದರೇನು

ವ್ಯರ್ಥವಾಯ್ತು ಭಕುತಿ.

ಪುರಂದರದಾಸರ ಈ ಕೀರ್ತನೆಯ ಸಾಲುಗಳು ಕೇವಲ ಶಬ್ದಾಲಂಕಾರಕ್ಕೆ ಕಟ್ಟಿ ಹೇಳಿದ್ದಲ್ಲ. ಅದರಲ್ಲಿ ಅನುಭಾವ ಇದೆ. ಬಹಳ ಅರ್ಥಪೂಜ್ಯತೆಯ ವಿಚಾರ ವಿವೇಕ ಜ್ಞಾನದ ಭಕ್ತನ ಭಕ್ತಿಯ ಮಹಾಪೂರವಿದೆ ಹಾಗೂ ಭಕ್ತನ ಸತ್ವಪರೀಕ್ಷೆಯ ಸಹನಾಶಕ್ತಿಯ ಮಹೋನ್ನತ ಗುಣವಿದೆ. ದೇವನೇ ಬಾಗುವಂತಹ ಪ್ರಚಂಡ ಗುರುಮಹಿಮೆಯಿದೆ. “ಹರಮುನಿದರೂ ಗುರು ಕಾಯ್ವನು” ಎಂಬ ನಾಣ್ನುಡಿಯು ಅನುಭಾವದ ನಂಬಿಕೆ. ಗುರು ನಮ್ಮನ್ನು ಕಾಯಬೇಕಾದರೆ, ನಮ್ಮ ಭಕ್ತಿಯ ಶ್ರೇಷ್ಠತೆ ಎಷ್ಟು ಪವಿತ್ರ , ಪ್ರಾಮಾಣಿಕ, ಮನೋಗತ ದೃಢ ಸಂಕಲ್ಪತೆಯಿಂದ ಕೂಡಿದ್ದು ಆತ್ಮಸಂಸ್ಕಾರಯುತ ಗುಣಧರ್ಮದಿಂದ ನಮ್ಮನ್ನು ಬೆಳಗಿಸಿ ಹೊಳೆಸಬೇಕು ಎಂಬುದರ ಬಗ್ಗೆ.

ನಾವು 1986-87 ನೇ ಸಾಲಿನಲ್ಲಿ ಹೊಸದುರ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಓದುವಾಗ ವಾರ ಮಧ್ಯದ ‘ನೀತಿಶಿಕ್ಷಣ’ ತರಗತಿಯಲ್ಲಿ ನಮ್ಮ ಪೂಜ್ಯ ಗುರುಮಾತೆಯಾಗಿದ್ದ ಛಾಯಲಕ್ಷ್ಮಿ ಮೇಡಂ ರವರು ತಮ್ಮ ಅಧ್ಯಯನದಿಂದ ತಿಳಿದು ನಮಗೆ ಹೇಳಿದ ಕಥೆಯನ್ನು ನಿಮ್ಮೊಂದಿಗೆ ಗುರುಪೂರ್ಣಿಮೆ (Guru Purnima) ಪ್ರಯುಕ್ತ ಹಂಚಲು ಬಯಸುತ್ತೇನೆ.

ಇಂದಿನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಎಂಬ ಸ್ಥಳದಲ್ಲಿ ಉಗಮವಾಗುವ ಗೋದಾವರಿ ನದಿಯ ತೀರದಲ್ಲಿ ಬಹಳ ಪ್ರಾಚೀನ ಕಾಲದಲ್ಲಿ ಒಂದು ಆಶ್ರಮವಿತ್ತು. ಅಲ್ಲಿ ವೇದಧರ್ಮರೆಂಬ ಗುರುಗಳು ವಾಸವಾಗಿದ್ದರು. ಅವರು ವೇದಜ್ಞಾನ ಪರಿಣಿತರಾಗಿದ್ದು, ತಮ್ಮ ಬಳಿಗೆ ಹಲವಾರು ಕಡೆಯಿಂದ ವೇದಾಧ್ಯಯನ ಕಲಿಯುವ ಆಶಯದಿಂದ ಬರುವ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕವಾಗಿ ತಮ್ಮ ವಿದ್ಯೆಯನ್ನು ಧಾರೆಯೆರೆಯುತಿದ್ದರು. ಅವರಲ್ಲಿ ಸಂದೀಪಕನೆಂಬ ಶಿಷ್ಯನು ಕೂಡ ಒಬ್ಬನು. ಬಹಳ ಬುದ್ಧಿವಂತ ಹಾಗೂ ವಿನಯದಿಂದ ವಿದ್ಯೆ ಕಲಿಯುತಿದ್ದನು.

ಒಮ್ಮೆ ಗುರುಗಳಾದ ವೇದಧರ್ಮರು ತಮ್ಮ ಎಲ್ಲ ಶಿಷ್ಯರಿಗೂ ಕರೆದು, ಪ್ರಿಯ ಶಿಷ್ಯರೇ, ” ನಾನು ನಿಮಗೆಲ್ಲ ನನ್ನಲ್ಲಿರುವ ವೇದಜ್ಞಾನವನ್ನೆಲ್ಲಾ ನನ್ನಿಂದಾದಷ್ಟೂ ಧಾರೆಯೆರೆದಿದ್ದೇನೆ. ಇಲ್ಲಿಗೆ ನಿಮ್ಮ ವೇದಾಧ್ಯಯನ ಕಲಿಕೆ ಪೂರ್ಣಗೊಂಡಿದೆ.
ಇನ್ನುಮುಂದೆ ನಾನು ಇಲ್ಲಿ ಇರುವುದಿಲ್ಲ. ನನಗೆ ಪೂರ್ವಜನ್ಮದ ಕರ್ಮಾನುಸಾರ ಮುಂಬರುವ ದಿನಗಳಲ್ಲಿ ಕುಷ್ಠರೋಗ ತಗುಲಲಿದೆ. ನನ್ನ ಶರೀರವು ಹುಳುಗಳು ಮುತ್ತಿದ ಗೂಡಾಗುವುದು; ಶರೀರದಿಂದ ದುರ್ಗಂಧ ಬರುವುದು. ಕಣ್ಣುಗಳು
ಕುರುಡಾಗುವುವು. ನನ್ನ ರೋಗದ ಕಾಲವನ್ನು ಕಾಶಿಯಲ್ಲಿ ಕಳೆಯ ಬಯಸುತ್ತೇನೆ. ನನ್ನ ಪ್ರಾರಬ್ಧ ಕರ್ಮ ಮುಗಿದ ಮೇಲೆ ಮತ್ತೆ ನಾನು ಇಲ್ಲಿಗೆ ವಾಪಾಸ್ಸು ಬರುತ್ತೇನೆ. ನನ್ನ ಜೊತೆಗೆ ಯಾರು ಬರುತ್ತೀರಿ? ಎಂದು ಕೇಳುತ್ತಾನೆ. ಆಗ ಎಲ್ಲ
ಶಿಷ್ಯಂದಿರು ಗುರುಗಳ ಮಾತು ಕೇಳಿ ಸ್ತಬ್ಧರಾಗುತ್ತಾರೆ! ಹಿಂದೆ ಸರಿಯುತ್ತಾರೆ!

ಆದರೆ ಸಂದೀಪಕ ಮಾತ್ರ ” ನಾನು ನಿಮ್ಮ ಜೊತೆಗೆ ಬರುತ್ತೇನೆ ಗುರುಗಳೇ” ಎನ್ನುತ್ತಾನೆ. ಆಗ ಗುರುಗಳು ಬಹಳಷ್ಟು ಸಂಕಷ್ಠಗಳನ್ನು ಎದುರಿಸುತ್ತೀಯಾ! ಯೋಚಿಸು ಎನ್ನುತ್ತಾರೆ. ಆಗ ಸಂದೀಪಕನು “ಇಲ್ಲ ಗುರುಗಳೇ ನಾನು ಏನೇ ಬಂದರೂ ನಿಮ್ಮ ಜೊತೆ ಬಿಡುವುದಿಲ್ಲ! ನಿಮ್ಮ ಸೇವೆ ಸದಾ ಮಾಡುತ್ತೇನೆ! ವಿಶ್ವಾಸವಿರಿಸಿ, ನನಗೆ ಅಪ್ಪಣೆ ನೀಡಿ! “ಎನ್ನುತ್ತಾನೆ.

ಸಂದೀಪಕನೊಂದಿಗೆ ವೇದಧರ್ಮರು ಕಾಶಿಯಲ್ಲಿ ಹೋಗಿ ನೆಲೆಸುತ್ತಾರೆ. ಕಾಲಕ್ರಮೇಣ ವೇದಧರ್ಮರು ಕುಷ್ಠರೋಗಕ್ಕೆ ತುತ್ತಾಗುತ್ತಾರೆ. ಹುಣ್ಣುಗಳಾಗಿ ಬಹಳ ಬಾಧೆ ಅನುಭವಿಸುತ್ತಾರೆ. ಅವರಿಗೆ ಕಣ್ಣುಗಳು ಕಾಣಿಸದಂತಾಗುತ್ತವೆ. ಅವರ ಶಾಂತ ಸ್ವಭಾವ ಹೋಗಿ, ಬಹಳಷ್ಟು ಸಿಡಿಮಿಡಿಗೊಳ್ಳುತ್ತಿರುತ್ತಾರೆ. ಆದರೆ ಸಂದೀಪಕ ಗುರುಗಳ ಸೇವೆಯನ್ನು ಮನಸ್ಸಿಟ್ಟು ಮಾಡುತ್ತಾನೆ.

ಗುರುಗಳ ಸೇವೆ ಮಾಡುತ್ತಾ….ಸಂದೀಪಕನ ಲೌಕಿಕ ಆಸೆಗಳು ಅಳಿದುಹೋಗಿ ಅವನ ಆತ್ಮದಲ್ಲಿ ಅಲೌಕಿಕ ಬೆಳಕು ತುಂಬುತ್ತದೆ. ಮನದ ಇಚ್ಛೆಯಂತೆ ಬದುಕಿದರೆ ಜೀವನ ದುಃಖಮಯವಾಗುತ್ತದೆ! ಯಾವ ಆಸೆಯೂ ಈಡೇರುವುದಿಲ್ಲ. ಗುರುವಿಲ್ಲದೆ ಗುರಿ ಮುಟ್ಟಲಾಗದು!ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ನಾವು ಎಲ್ಲಿಯೂ ಅಲೆದಾಡುವುದು ಇರುವುದಿಲ್ಲ. ಎಲ್ಲವೂ ಸಿಗುತ್ತದೆ! ಎಂಬ ಅರಿವು ಮೂಡುತ್ತದೆ.

Read Also This Story:

Siddaramaiah Budget: ಸಿಎಂ ಸಿದ್ದರಾಮಯ್ಯ ಮಂಡಿಸಿದ ದಾಖಲೆ ಬಜೆಟ್ ನಲ್ಲಿ ಏನುಂಟು ಏನಿಲ್ಲ: ರೈತರಿಗೆ ಸಿಂಹಪಾಲು, ಗ್ಯಾರಂಟಿಗಳಿಗೆ ಹಣ ಮೀಸಲು

 

ಸಂದೀಪಕನ ಗುರುಭಕ್ತಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ “ಸಂದೀಪಕ ನಿನ್ನ ಗುರುಸೇವೆ ಕಂಡು ನಾನು ಸಂಪ್ರೀತನಾಗಿದ್ದೇನೆ. ನಾನು ನಿನ್ನ ಗುರುಗಳ ಹೃದಯದಲ್ಲಿ ‘ಸೋಹಂ’ ಸ್ವರೂಪದಲ್ಲಿ ಇದ್ದೇನೆ. ನಿನ್ನ ಸೇವೆಯೆಲ್ಲಾ ನನ್ನ ಮುಟ್ಟಿದೆ. ಏನಾದರೂ ವರ ಬೇಡಿಕೋ” ಎನ್ನುತ್ತಾನೆ. ಆಗ ಸಂದೀಪಕನು ತಡೆಯಿರಿ. ನಾನು ಗುರುಗಳನ್ನು ಕೇಳಿ ಅಪ್ಪಣೆ ಪಡೆದು ಬರುತ್ತೇನೆ! ಎಂದು ಗುರುಗಳ ಬಳಿಗೆ ಹೋಗಿ, “ಗುರುಗಳೇ, ನಿಮ್ಮ ಕೃಪೆಯಿಂದ ಶಿವದೇವರು ನನ್ನ ಮೇಲೆ ಪ್ರಸನ್ನರಾಗಿ ವರ ಬೇಡಲು ಹೇಳುತ್ತಿದ್ದಾರೆ. ನಿಮ್ಮ ರೋಗ ವಾಸಿಯಾಗಲೆಂದು ವರ ಬೇಡಲೇ ಗುರುಗಳೇ? “ಎಂದಾಗ, ವೇದಧರ್ಮರು, “ಸಂದೀಪಕ ನಿನಗೆ ನನ್ನ ಸೇವೆ ಮಾಡಿ ಸಾಕಾಗಿರಬೇಕು. ಅದಕ್ಕೆ ಹೀಗೆ ಕೇಳುತಿದ್ದೀಯ! ನಿನಗೆ ಮೊದಲೇ ಹೇಳಿದೆ.

ಸಂಕಷ್ಟ ತುಂಬ ಎಂದು. ಆದರೂ ನನ್ನ ಜೊತೆ ಬಂದೆ. ಎಂದು ಕೋಪದಿಂದ ನುಡಿಯುತ್ತಾರೆ. ಆಗ ಸಂದೀಪಕನು ಶಿವನ ಬಳಿಗೆ ಬಂದು “ಗುರು ಕೃಪೆಯಾಗದೆ ನನಗೇನೂ ಬೇಡ! ” ಎನ್ನುತ್ತಾನೆ. ಈ ವಿಚಾರವನ್ನು ಶಿವನು ವಿಷ್ಣು ಹತ್ತಿರ ಹೇಳುತ್ತಾನೆ. ಆಗ ವಿಷ್ಣುವು ಸಂದೀಪಕನಿಗೆ ದರ್ಶನ ನೀಡಿ ನಿನ್ನ ಗುರುಸೇವೆ ಬಹಳ ಶ್ರೇಷ್ಠವಾಗಿದೆ. ಏನಾದರೂ ವರ ಬೇಡಿಕೋ ನೀಡುತ್ತೇನೆ ಎನ್ನುತ್ತಾನೆ. ಆಗ ಸಂದೀಪಕನು-” ದೇವ, ನಾನು ಯಾವಾಗಲೂ ಗುರು ಸೇವೆಯಲ್ಲಿಯೇ ನಿರತನಾಗಿರುವಂತೆ ವರವನ್ನು ನೀಡಿರಿ” ಎನ್ನುತ್ತಾನೆ. ಈ ವಿಷಯವು ವೇದಧರ್ಮರಿಗೆ ತಿಳಿದು ಶಿಷ್ಯನ ಪರಾಕಾಷ್ಠತೆಯ ಗುರುಭಕ್ತಿಗೆ ಮೆಚ್ಚಿ, ಆಲಂಗಿಸಿಕೊಳ್ಳುತ್ತಾರೆ. ನಿನ್ನಲ್ಲಿ ಸದಾ ವೃದ್ಧಿ ಸಿದ್ಧಿಗಳು ನೆಲೆಸಲಿ ಎಂದು ಆಶೀರ್ವದಿಸುತ್ತಾರೆ.ಆಗ ಸಂದೀಪಕನು “ಗುರುದೇವ , ನಿಮ್ಮ ಚರಣಗಳಲ್ಲಿಯೇ ನನ್ನ ವೃದ್ಧಿ ಸಿದ್ಧಿ. ಸದಾ ನಿಮ್ಮ ಸೇವೆಯ ಆನಂದವನ್ನು ನನಗೆ ಕರುಣಿಸಿ” ಎನ್ನುತ್ತಾನೆ. ಆಗ ವೇದಧರ್ಮರ ಕುಷ್ಠವು ಶಿಷ್ಯನ ಶ್ರೇಷ್ಠ ಭಕ್ತಿಯ ಸೇವೆಯಿಂದ ಸಂಪೂರ್ಣ ನಶಿಸಿ ಹೋಗುತ್ತದೆ.

ಇದು ಗುರುಭಕ್ತಿಯ ಮಹಿಮೆ. ಗುರುಭಕ್ತಿ ಎಂದರೆ ಗುರು ಶಿಷ್ಯರನ್ನು ಅಗಲಿಸಲಾಗದಂತಹ ಭಕ್ತಿಯ ಭಾವ ವಿಚಾರ; ಸೇವೆಯ ಆಚಾರ. ಇಂತಹ ಭಕ್ತಿ ಭಾವದಿಂದ ಮಾತ್ರವೇ ಜೀವನ ಸಾಕಾರ…ಎಂದು ಛಾಯಾ ಮೇಡಂರವರು ಹೇಳಿ ಮೌನವಾದರು!
ಆದರೆ, ಆ ಕಥೆಯು ನಮ್ಮೆಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿ, ಇಡೀ ತರಗತಿಯೇ ಎದ್ದು ಛಾಯಲಕ್ಷ್ಮಿ ಮೇಡಂ ರವರಿಗೆ ವಂದಿಸಿ,,,, ಸ್ವತಃ ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ ಎಂದು ಹೃದಯದಿಂದ ಪ್ರಾರ್ಥಿಸಿದ್ದು, ಇಂದಿಗೆ, ಮೂವತ್ತಾರು ವರ್ಷಗಳಾದರೂ ಅಂದು ಆತ್ಮಗತವಾದ ಆ ಸಂಸ್ಕೃತಿ ಇಂದಿಗೂ ನನ್ನ ಬದುಕನ್ನೇ ತುಂಬಿ ಬಾಳಿಸುತ್ತಿದೆ! ಛಾಯಲಕ್ಷ್ಮಿ ಮೇಡಂ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ನನಗಿಂದು ತಿಳಿದಿಲ್ಲ. ಆದರೆ ಅವರು ಅಂದು, ನನ್ನ ಎದೆಗೆ ಸುರಿದ ಗುರುಭಕ್ತಿಯ ಅರಿವಲ್ಲಿ ಅವರೆಂದೂ ಜೀವಂತವಾಗಿದ್ದಾರೆ.. ನನ್ನ ಬದುಕಲ್ಲಿ ಮುಂದೆ ಅರಿವು ಮೂಡಿಸಿದ ನೂರಾರು ಗುರುಗಳ ಬಗ್ಗೆ ನಾನು ತೋರುವ ಗೌರವ ಭಕ್ತಿಯ ಆಚಾರದಲ್ಲಿ ಅವರು ನೆಲೆಸಿದ್ದಾರೆಂದರೆ ಖಂಡಿತ ಅತಿಶಯೋಕ್ತಿಯಲ್ಲ. ಹೀಗೆ ಜೀವನದ ಅರ್ಥಪೂರ್ಣತೆಗೆ ನಡೆನುಡಿ ಒಂದಾಗಿಸಿ, ಅರಿವು ತೋರುವ ಗುರುಗಳೆಲ್ಲರೂ, ಗುರು ಮಾತೆಯರೆಲ್ಲರೂ ಜಗದ ಪ್ರದೀಪ್ತಿಗಳು ; ವಂದಿತರು.

ಅಜ್ಞಾನ ತಿಮಿರಾಂಧಸ್ಯ, ಜ್ಞಾನಾಂಜನ ಶಲಾಕಯಾ, ಚಕ್ಷುರುನ್ಮೀಲಿತಂ ಯೇನ, ತಸ್ಮೈಶ್ರೀ ಗುರುವೇ ನಮಃ

ಅಖಂಡ ಮಂಡಲಾಕಾರಂ
ವ್ಯಾಪ್ತಂ ಯೇನ ಚರಾಚರಮ್
ತತ್ಪದಂ ದರ್ಶಿತಂ ಯೇನ
ತಸ್ಮೈಶ್ರೀ ಗುರುವೇ ನಮಃ

ಜ್ಞಾನಶಕ್ತಿ ಸಮಾರೂಢಃ
ತತ್ವ ಮಾಲಾ ವಿಭೂಷಿತಃ
ಭುಕ್ತಿ ಮುಕ್ತಿ ಪ್ರದಾತಾ ಚ
ತಸ್ಮೈಶ್ರೀ ಗುರುವೇ ನಮಃ

ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ: ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಎಂದು ಪ್ರಾರ್ಥಿಸುವ ನಾವು, ದಿನನಿತ್ಯದ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆರೆತಿರುವ ಆಧ್ಯಾತ್ಮದ ಮೂಲವನ್ನು ಗುರುತಿಸುವುದೇ ಗುರುಗಳ ಧ್ಯಾನದಿಂದ: ಅವರ ರಕ್ಷಾಕವಚದ ಹಾರೈಕೆಯಿಂದ. ಗುರುವನ್ನು ದೇವರ ಪ್ರತಿಬಿಂಬವೆಂದೇ ಪರಿಭಾವಿಸಿದ ನಮ್ಮ ಪರಂಪರೆ ಗುರುವನ್ನು ಭಕ್ತಿಭಾವದಿಂದ ಶ್ರದ್ದೆ ನಿಷ್ಠೆಯ ನಡೆಯಿಂದ ಪೂಜನೀಯವಾಗಿ ಕಂಡು ಸಂಸ್ಕಾರಯುತವಾಗಿ ಗೌರವಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಇದರ ಬೀಜಾಂಕುರದ ಭಕ್ತಿ ಭಾವದ ಸೆಲೆಯನ್ನು ನೆಲೆಯನ್ನು ನಾವು ಗುರುತಿಸುವುದು ಗುರುಪೂರ್ಣಿಮೆಯ ದಿವಸದಂದು. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಗುರುಪೂರ್ಣಿಮೆಯು ನಮ್ಮ ಭಾರತದಲ್ಲೇ ಅಲ್ಲದೆ, ಏಷ್ಯಾಖಂಡದಲ್ಲಿಯೇ ಬಹಳ ಪ್ರಾಮುಖ್ಯತೆ ಪಡೆದಿದೆ.

ಜೈನಧರ್ಮದ 24ನೇ ತೀರ್ಥಂಕರರಾದ ಮಹಾವೀರ ಕೈವಲ್ಯ ಪಡೆದ ನಂತರ ಇಂದ್ರಭೂತಿ ಗೌತಮ ಎಂಬ ಗಣಧಾರನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿದನು.ಜೊತೆಗೆ ತಾವೂ ಗುರುವಾದರು. ಎಂಬ ಪ್ರತೀತಿಯಲ್ಲಿ ಈ ದಿನವನ್ನು ಜೈನರು ‘ಗುರು ಪೂರ್ಣಿಮೆ’ ಯೆಂದು ಕರೆದು ಆಚರಿಸುತ್ತಾ ಬಂದಿದ್ದಾರೆ. ಸಿದ್ದಾರ್ಥ ಬೋಧಿವೃಕ್ಷದ ಕೆಳಗೆ ಕುಳಿತು ಲೋಕದ ದು:ಖಕ್ಕೆ ಕಾರಣ ಅರಿತು ಬುದ್ದನಾಗಿ ಪ್ರಥಮ ಧರ್ಮೋಪದೇಶ ಮಾಡಿದ ದಿನವೆಂದು ಬೌದ್ದರು ಈ ದಿನವನ್ನು ಬಹಳ ಗುರುಭಕ್ತಿಯಿಂದ ಆಚರಿಸುತ್ತಾರೆ.

ಶಿವನು ಸಪ್ತರ್ಷಿಗಳಿಗೆ ಯೋಗವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರುವಾದ ದಿನ ಎಂಬ ನಂಬಿಕೆ ಯೋಗ ಸಂಪ್ರದಾಯದಲ್ಲಿದೆ. ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸರ ಜನ್ಮದಿನವಿದು ಜೊತೆಗೆ ಇದೇ ದಿನವೇ ಅವರು ಬ್ರಹ್ಮಸೂತ್ರಗಳ ರಚನೆ ಮುಕ್ತಾಯಗೊಳಿಸಿದುದು ಕೂಡ. ಅಷ್ಟೇ ಅಲ್ಲದೇ, ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಅಥರ್ವಣ ವೇದಗಳನ್ನು ಯಜ್ಞ ಯಾಗಾದಿ ಧಾರ್ಮಿಕ ವಿಧಿ ವಿಧಾನಗಳಿಗೆ ಅನುಗುಣವಾಗಿ ಬಳಕೆಗೆ ಅನುಕೂಲವಾಗುವಂತೆ ನಾಲ್ಕು ವಿಭಾಗ ಮಾಡಿ ತಮ್ಮ ನಾಲ್ಕು ಮುಖ್ಯ ಶಿಷ್ಯರುಗಳಾದ ಸುಮಂತು, ವೈಶಂಪಾಯನ, ಜೈಮಿನಿ, ಪೈಲರಿಗೆ ಇದೇ ಪೂರ್ಣಿಮೆಯ ದಿವಸ ಬೋಧಿಸಿದುದು : ಹೀಗೆ ಆಷಾಡ ಮಾಸದ ಪೂರ್ಣಿಮೆಯಂದು ಮಾಡಿದ ವಿಭಾಗೀಯ ಬೋಧನೆ ಮುಂದೆ ವೈದಿಕ ಅಧ್ಯಯನದ ಉದ್ದೇಶಕ್ಕೆ ಕಾರಣವಾದ ಪ್ರಯುಕ್ತ ಇದನ್ನು ವ್ಯಾಸ (ವಿಭಾಗಿಸು) ಎಂಬ ಗೌರವ ನಾಮದ ಜೊತೆಗೆ ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತಿದೆ. ಎಂಬೆಲ್ಲಾ ಪೂಜ್ಯತೆಯ ವಿಶ್ವಾಸನೀಯ ವಿಚಾರ ಬೆಳಕು ಗುರುಪೂರ್ಣಿಮೆ ಬಗ್ಗೆ ಭಾರತೀಯರ ಮಾನಸ ಮಂದಿರಗಳಲ್ಲಿ ಹಾಸುಹೊಕ್ಕಾಗಿ ನೆಲೆಸಿ ಆಚಾರವಾಗಿದೆ.

ಗುರುಪೂರ್ಣಿಮೆ, ಯೋಗ ಪೂರ್ಣಿಮೆ, ವ್ಯಾಸ ಪೂರ್ಣಿಮೆ ಎಂಬ ಹೆಸರುಗಳಿಂದ ಕರೆಯಲ್ಪಡುವ ಆಷಾಡಮಾಸದ ಈ ಪೂರ್ಣಿಮೆಗೆ ಜ್ಞಾನ, ಬೆಳಕು, ನೆಮ್ಮದಿ, ಸೌಖ್ಯ ಸಂಪದ ಗುಣಾರ್ಥ ಕಾರ್ಯಸಾಧಕಾರಂಭದಲ್ಲಿ ಬಹಳಷ್ಟು ಗೌರವವಿದೆ.
ಆಷಾಡ ಮಾಸದ ಈ ಮಳೆಗಾಲದಲ್ಲಿ ರೈತನು ಹೊಲದಲ್ಲಿ ಆರಂಭಕ್ಕೆ ಮೊದಲಾಗುವುದರಿಂದ ಈ ದಿನದಂದು ರೈತರು ಗುರುಮಹಿಮೆಯಿಂದಲೇ ತಮಗೆಲ್ಲ ಸೌಖ್ಯ ಒದಗಲೆಂದು ತುಂಬು ಭಕ್ತಿ ಗೌರವಗಳಿಂದ ಗುರುವನ್ನು ದೈವಿಕ ನೆಲೆಯಲ್ಲಿರಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಬಹಳವಾಗಿ ಗುರುನಾಮ ಪಠಿಸುತ್ತಾರೆ.

ಇನ್ನು ಗುರುಪೌರ್ಣಿಮೆ ದಿನದ ಆಚರಣೆ ಜನರ ಜೀವನದಲ್ಲಿ ಕೇವಲ ಧಾರ್ಮಿಕವಾಗಿ ಮಾತ್ರವೇ ಉಳಿಯದೆ ಶೈಕ್ಷಣಿಕ ಅರ್ಥವನ್ನೂ ಪಡೆದಿದೆ. ಕತ್ತಲನ್ನು ಕಳೆಯುವ ಬೆಳಕು -ಗುರು ಎನಿಸುವಂತೆ ಬೆಳಕಿನ ಬಾಳುವೆಗಾಗಿಯೆ ಅಕ್ಷರ ಜ್ಞಾನ ಕಲಿಸುವ ಪ್ರತಿ ಶಿಕ್ಷಕ/ ಶಿಕ್ಷಕಿಯೂ ಗುರು/ಗುರುಮಾತೆ ಎನಿಸಿ ಪೂಜನೀಯವಾಗಿದ್ದಾರೆ.

ಹುಟ್ಟಿದ ಮಗುವಿಗೆ ಮೊದಲು ಗುರುವಾಗುವವಳು ಅಮ್ಮ.ಆಕೆ ಮಗುವನ್ನು ಮಾನವನನ್ನಾಗಿಸುವಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತಾಳೆ.ಹಸಿಮಣ್ಣಿನ ಮುದ್ದೆಯಾದ ಮಗುವಿನ ಮನವನ್ನು ತಿದ್ದಿ ತೀಡಿ ಸಂಸ್ಕಾರದ ಆಕೃತಿ ಮಾಡುವಲ್ಲಿ ಜೀವನ ಪೂರ ಸವೆಯುವ ತಾಯಿ…,ಮೊದಲ ಗುರುವಾದರೆ ತಪ್ಪುಗಳನ್ನು ಒಪ್ಪ ಮಾಡಿ ಸರಿ ದಾರಿ ತೋರುವ ತಂದೆ ಎರಡನೇ ಗುರುವಾಗುತ್ತಾನೆ ನಂತರ ಮನೆಯಿಂದ ಶಾಲೆಗೆ ಹೋಗುವ ಮಗುವಿಗೆ ಸಿಗುವ ಹಲವಾರು ಶಿಕ್ಷಕರು ಅದರ ಭವ್ಯಭವಿಷ್ಯದ ಬೆಳಕಿಗೆ ಬಹಳಷ್ಟು ಶ್ರಮವಹಿಸುತ್ತಾರೆ. ಅವರನ್ನೆಲ್ಲ ವಿದ್ಯಾರ್ಥಿಗಳು ಗುರುಪೂರ್ಣಿಮೆಯಂದು ಗೌರವಿಸಿ ನಮಸ್ಕಾರ ಮಾಡುತ್ತಾರೆ. ಇದು ನಮ್ಮ ಭಾರತೀಯ ಪರಂಪರೆಯ ಜೀವಂತಿಕೆಯ ಸಂಸ್ಕೃತಿ ಕೂಡ.

ಆದರೆ ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಗುರುಹಿರಿಯರ ಬಗ್ಗೆ ತಾಯ್ತಂದೆಯರ ಬಗ್ಗೆ ಗೌರವ ಭಾವನೆಗಳು ಕಡಿಮೆಯಾಗುತ್ತಿವೆ.ಇದಕ್ಕೆ ಕಾರಣಗಳು ಏನೇ ಇರಲಿ. ಸಂಸ್ಕೃತಿ ಅಲ್ಲಗಳೆದು ಬದುಕಿದರೆ ನಮ್ಮ ಮುಂದಿನ ಮುಂಬೆಳಕುಗಳಿಗೆ ಬೆಳಕೇ ಇಲ್ಲ! ಇಂತಹ ಪರಿಸ್ಥಿತಿಯಲ್ಲಿ ಗುರುವಿನ ಮೌಲ್ಯವನ್ನು ಮಹಿಮೆಯನ್ನು ತಿಳಿಸಲು ಗುರುಪೂರ್ಣಿಮೆಯ ದಿನದಂದು ಮಾಡುವ ಧಾರ್ಮಿಕ ಸಂಸ್ಕಾರ ಶೈಕ್ಷಣಿಕ ಕಾರ್ಯಕ್ರಮಗಳು ಬಹಳ ಮಹತ್ವವನ್ನು ಪಡೆಯುತ್ತವೆ.

ಇನ್ನು ಶಾಲಾ ಕಾಲೇಜುಗಳಲ್ಲಿ ಗುರುಪೂರ್ಣಿಮೆಯನ್ನು ಆಚರಿಸಿ, ಅಂದು ಪರಮಹಂಸ, ವಿವೇಕಾನಂದರ ಗುರುಶಿಷ್ಯರ ದಿವ್ಯ ಬಾಂಧವ್ಯದ ಬಗ್ಗೆ, ವಿವೇಕಾನಂದರ ಗುರು ಭಕ್ತಿ ಚಿಕಾಗೊ ಭಾಷಣದಲ್ಲಿ ಬೀರಿದ ಮಹಿಮೆಯ ಬಗ್ಗೆ, ಸಿ. ವಿ. ರಾಮನ್ ರವರ ಶಿಷ್ಯವತ್ಸಲದ ವಿಚಾರದ ಬಗ್ಗೆ , ರಾಧಾಕೃಷ್ಣನ್ ರವರು ಗುರುಸ್ಥಾನಕ್ಕೆ ತಂದ ಶೋಭೆಯ ಬಗ್ಗೆ ಅಷ್ಟೇ ಅಲ್ಲದೇ ಗುರುವಿನ ಮೂರ್ತಿಯನ್ನೆ ಮಾಡಿ ಧ್ಯಾನಮಾತ್ರದಿಂದಲೇ ಅಪಾರ ಬಿಲ್ವಿದ್ಯೆಯನ್ನು ಕಲಿತ ಏಕಲವ್ಯನ ಬಗ್ಗೆ, ಗುರುವು ನೀಡಿದ ಶಿಕ್ಷೆಯನ್ನು ತನ್ನ ಒಳಿತಿಗೆಂದೇ ಭಾವಿಸಿ ಗುರುವನ್ನು ಪೂಜ್ಯತೆಯಿಂದ ಕಂಡು ಗೌರವಿಸಿದ ಅಗ್ನಿಭೂತಿ ಬಗ್ಗೆ,ಇಂತಹ ಹಲವಾರು ಗುರುಶಿಷ್ಯರ ವಿಚಾರ ಕಥೆಗಳನ್ನು ವಿದ್ಯಾರ್ಥಿಗಳಿಗೆ ಹೇಳುವುದರಿಂದ ಗುರುಭಕ್ತಿ ಭಾವ ಮೂಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗುರುಗಳ ಬಗ್ಗೆ ಭಕ್ತಿಭಾವದ ಲೇಖನಗಳನ್ನು ಪ್ರಕಟಿಸಿ ಸಮಾಜದಲ್ಲಿ ಗುರುಪರಂಪರೆ ಜಾಗೃತಿಗೊಳಿಸುವಲ್ಲಿ ಪತ್ರಿಕಾ ಮಾಧ್ಯಮಗಳು ಬಹಳ ಉತ್ತಮ ಸಂಸ್ಕೃತಿಕಾರ್ಯ ಮಾಡುತ್ತಿವೆ.

ಗುರು ಪೂರ್ಣಿಮೆ ನಿಜಕ್ಕೂ ಬಾಳಿಗೆ ಬೆಳಕನ್ನು ತುಂಬುವ ಗುರುಗಳನ್ನು ಗೌರವಿಸುವ ದಿನ. ಗುರು ಪ್ರಭಾವ ಪಾತ್ರವಿಲ್ಲದೆ ಯಾರ ಜೀವನವೂ ಬೆಳಗಿಲ್ಲ. ಗುರುವು ನಮ್ಮಂತೆ ಕೇವಲ ಮನುಷ್ಯ ಎನಿಸಿದರೂ ಆ ಸ್ಥಾನಮಾನದಲ್ಲಿ ನಿಂತು ಗುರು
ಮಾಡುವ ನೀಡುವ ಕಾಯಕ ಬೆಳಕು ಅಂದು ಇಂದು ಎಂದಿಗೂ ಈ ಭುವಿಯನ್ನು ಜನರ ಬದುಕನ್ನು ಕಾಯುತ್ತಿದೆ. ಎಲ್ಲರೂ ಆ ಗುರುವಿನ ಸ್ಥಾನಮಾನಕ್ಕೆ ಬಾಗಿ ನಮಿಸೋಣ…“ಹರ ಮುನಿದರೂ ಗುರು ಕಾಯುವನು” ಎಂಬ ನುಡಿಯಂತೆ ಗುರುವಿಗೆ ಭಕ್ತಿಯಿಂದ ನಮಿಸಿ,ಧ್ಯಾನಿಸಿ ಗೌರವಿಸಿ ಅಕ್ಷರ ಕಲಿತರೆ ಅದು ಬೇಗ ಮನಸ್ಸಿಗೆ ಬುದ್ದಿಗೆ ನಾಟಿ ನಮ್ಮನ್ನು ದಿವ್ಯರನ್ನಾಗಿ ಮಾಡುತ್ತದೆ. ಬನ್ನಿ ನಾವೆಲ್ಲರೂ ನಮ್ಮ ಬದುಕುಗಳನ್ನು ಬೆಳಗಿದ, ಬೆಳಗಿಸುತ್ತಲೇ ಇರುವ ಗುರುಗಳಿಗೆ ಗೌರವಿಸಿ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸೋಣ.. ಗುರುಪೌರ್ಣಿಮೆಯ ಮಹತ್ವವನ್ನು ನಡೆಯಾಗಿ ಪಾಲಿಸಿ, ಗುರುವಿಗೆ ಭಕ್ತಿ ವಿನಯಗಳಿಂದ ಕಾಯಕವಾಗಿ ಗೌರವಿಸಿ ಅದರ ಅನುಭವಾಮೃತದ ಮಹಿಮೆಯನ್ನು ಸಾರೋಣ.

ಲೇಖಕರು: ಎ. ಸಿ. ಶಶಿಕಲಾ ಶಂಕರಮೂರ್ತಿ (ನಮ್ರತಾ), ಶಿಕ್ಷಕಿ, ಸಾಹಿತಿ                                                ದಾವಣಗೆರೆ

 

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment