SUDDIKSHANA KANNADA NEWS/ DAVANAGERE/ DATE:11-07-2024
ದಾವಣಗೆರೆ (Davanagere): ಲಕ್ಷಾಂತರ ವಿದ್ಯಾರ್ಥಿಗಳ ಪ್ರೀತಿಯ ಕನ್ನಡ ಮೇಷ್ಟ್ರು, ಕನ್ನಡ ಸಾರಸ್ವತ ಲೋಕಕ್ಕೆ ಈ ಪ್ರಾಧ್ಯಾಪಕರು ನೀಡಿರುವ ಕೊಡುಗೆ ಅಪಾರ. ನಿವೃತ್ತಿ ಹೊಸ್ತಿಲಲ್ಲಿರುವ ಪ್ರೀತಿಯ ಕನ್ನಡ ಮೇಷ್ಟ್ರಿಗೆ ಪಾಠ ಕಲಿಸಿದ, ಕನ್ನಡ ಹೇಳಿಕೊಟ್ಟ ಗುರುಗಳಿಗೆ ಅರ್ಥಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮವನ್ನು ಶಿಷ್ಯರು ಆಯೋಜಿಸಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇವರ ಗರಡಿಯಲ್ಲಿ ಪಳಗಿರುವವರು ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಗುರುಗಳ ಕನ್ನಡ ಪ್ರೇಮ ನೆನಪು ಮಾಡಿಕೊಳ್ತಾರೆ. ಅವರೆಂದರೆ ಕನ್ನಡ ಲೋಕದ ನಿಘಂಟು ಎಂಬ ಪ್ರೀತಿಯ ಮೆಚ್ಚುಗೆ ಮಾತು ಕೇಳಿಬರುತ್ತದೆ.
ಅಂದ ಹಾಗೆ ಅಪರೂಪದಲ್ಲಿ ಅಪರೂಪ ಎನ್ನುವ ಅಧ್ಯಾಪಕರ ಹೆಸರು ಡಾ. ಬಿ. ಸಿ. ದಾದಾಪೀರ್ ನವಿಲೇಹಾಳ್ (Dadapeer navilehal) ದಾವಣಗೆರೆ ಸೇರಿದಂತೆ ಇಡೀ ರಾಜ್ಯಾದ್ಯಂತ ಶಿಷ್ಯ ವರ್ಗ ಹೊಂದಿರುವ ದಾದಾಪೀರ್ ಅವರನ್ನು ಕನ್ನಡ ಪ್ರೀತಿಯ ಮೇಷ್ಟ್ರು ಅಂತಾನೇ ಶಿಷ್ಯಗಣ ಕರೆಯುತ್ತದೆ. ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾರೆ, ಪೂಜಿಸುತ್ತಾರೆ, ಗೌರವಿಸುತ್ತಾರೆ. ಅಷ್ಟು ಶಿಷ್ಯಂದಿರ ಮನ ಗೆದ್ದ ದಾದಾಪೀರ್ ನವಿಲೇಹಾಳ್ ಅವರದ್ದು ಎಂದೆಂದಿಗೂ ಕನ್ನಡ ವಿಚಾರದಲ್ಲಿ ಅಚ್ಚಅಳಿಯದ ಹೆಸರು ಎಂದರೆ ತಪ್ಪಾಗಲಾರದು.
ಯಾರು ದಾದಾಪೀರ್ ನವಿಲೇಹಾಳ್…?
ಡಾ. ದಾದಾಪೀರ್ ನವಿಲೇಹಾಳ್. ಜುಲೈ 2 ರಂದು 1964ರಲ್ಲಿ ಸಣ್ಣ ಚಮನ್ ಸಾಬ್, ಬಿ. ಬುಡನ್ ದಂಪತಿಯ ಪುತ್ರರಾಗಿ ಜನಿಸಿದವರು. ಪಾಠ ಪ್ರವಚನ, ಕನ್ನಡ ಪ್ರೇಮ, ಬೋಧನೆ, ಬರವಣಿಗೆ, ಸಾಹಿತ್ಯ ಸೇರಿದಂತೆ ಹಲವು ಲೇಖನಗಳು ಎಲ್ಲರಿಗೂ
ಮೃಷ್ಟಾನ್ನ ಬಡಿಸಿದಂತೆ ಇರುತ್ತದೆ. ಹಾಗಾಗಿ ಅವರ ಬರವಣಿಗೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಗ್ರಾಮೀಣ ಪ್ರದೇಶದಲ್ಲಿ ಕಷ್ಟಪಟ್ಟು ಓದಿದ ಅವರು, ತ್ಯಾವಣಿಗೆಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣ ಪಡೆದರು. 1986ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿಗೆ ಪದವಿ ಓದಲು ಸೇರಿದ ಅವರು, ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿಯಲ್ಲಿ 1988ರಲ್ಲಿ ಕನ್ನಡ ಎಂ ಎ ಮುಗಿಸಿದರು.
ಈ ಸುದ್ದಿಯನ್ನೂ ಓದಿ: ಅನರ್ಹ BPL RATION- CARD ರದ್ದು: ರಾಜ್ಯ ಸರ್ಕಾರ ಖಡಕ್ ಆದೇಶ..!
1989ರಿಂದ 1992ರವರೆಗೆ ಜೂನಿಯರ್ ರಿಸರ್ಚ್ ಪೆಲೊ ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿಯಲ್ಲಿ ಸಂಶೋಧನೆ ನಡೆಸಿದರು. 2004ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕದ ಪಿಂಜಾರರು ಕುರಿತ ಮಹಾಪ್ರಂಬಂಧಕ್ಕೆ ಪಿಹೆಚ್ ಡಿ ಪದವಿ ಪಡೆದಿದ್ದಾರೆ.
ಊರಿಗೆ ಹೆಸರು ತಂದವರು:
ದಾದಾಪೀರ್ ಅಂದರೆ ಎಷ್ಟೋ ಜನರಿಗೆ ಗೊತ್ತಾಗುವುದಿಲ್ಲ. ಅದೇ ದಾದಾಪೀರ್ ನವಿಲೇಹಾಳ್ ಎಂದರೆ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಅಷ್ಟು ಖ್ಯಾತಿ ಹೊಂದಿದ್ದಾರೆ. ಡಾ. ಬಿ. ಸಿ. ದಾದಾಪೀರ್ ಎಂದರೆ ಎಲ್ಲರಿಗೂ ತಕ್ಷಣಕ್ಕೆ ನೆನಪಾಗುತ್ತಾರೆ.
ಕನ್ನಡ ಭಾಷಾ ಪ್ರಪಂಚದಲ್ಲಿ ಹೆಸರು ಮಾಡಿದ ಪ್ರತಿಭಾವಂತ ಪ್ರಾಧ್ಯಾಪಕರ ಹೆಸರು ಹೇಳಿ ಎಂದಾಕ್ಷಣ ಎಲ್ಲರಿಗೂ ಮೊದಲ ಹೆಸರು ಬರುವುದೇ ದಾದಾಪೀರ್ ಅವರದ್ದು. ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ಪ್ರಾಧ್ಯಾಪಕರಾದ ಅವರು ಮೂಲತಃ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದವರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದವರು Dadapeer navilehal :
ಚನ್ನಗಿರಿಯ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲವು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಂದ ಕನ್ನಡ ಕಲಿತವರು ಇಂದು ರಾಜ್ಯದ ವಿವಿಧೆಡೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬದುಕಿನ ಸನ್ಮಾರ್ಗ ಆರಿಸಿಕೊಂಡು ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ.
ಮಂಡ್ಯದಲ್ಲಿಯೂ ಕನ್ನಡ ಪಾಠ:
ಮಂಡ್ಯ ಹಾಗೂ ದಾವಣಗೆರೆಯಲ್ಲೂ ಕಾರ್ಯ ನಿರ್ವಹಿಸಿರುವ ಅವರು ಪ್ರಸ್ತುತ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಇದೇ ಜುಲೈ 31ರಂದು ನಿವೃತ್ತಿಯಾಗುತ್ತಿರುವ ಅವರ ಜೊತೆ ಅರ್ಧ ದಿನ ಕಳೆದು ಗತ ನೆನಪುಗಳನ್ನು ಮೆಲುಕು ಹಾಕೋಣವೆಂದು
ಒಂದಷ್ಟು ಸಮಾನ ಮನಸ್ಕರು ನಿರ್ಧರಿಸಿದ್ದಾರೆ.
ಅದಕ್ಕಾಗಿ ಚನ್ನಗಿರಿಯ ಮರಾಠ ಸಮುದಾಯ ಭವನದಲ್ಲಿ ಇದೇ ಜುಲೈ 13ರಂದು ಪ್ರೀತಿಯ ಶಿಷ್ಯಗಣ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ದಾದಾಪೀರ್ ನವಿಲೇಹಾಳ್ ಅವರ ಆಪ್ತರು, ಕುಟುಂಬದವರಿಗೂ ಆಹ್ವಾನ ನೀಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರಲಿದ್ದಾರೆ. ಪ್ರೀತಿಯ ಮೇಷ್ಟ್ರಿಗೆ ಪ್ರೀತಿಯ ಬೀಳ್ಕೊಡುಗೆ ಅರ್ಥಪೂರ್ಣ ನಡೆಸಲು ಶಿಷ್ಯರು ಸಿದ್ದತೆ ಮಾಡಿದ್ದಾರೆ.
ಎಲ್ಲೆಲ್ಲಿ ಕಾರ್ಯನಿರ್ವಹಣೆ…?
1992ರಿಂದ 2003ರವರೆಗೆ ಚನ್ನಗಿರಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 2003ರಿಂದ 2008ರವರೆಗೆ ಮಂಡ್ಯದ ಸರ್ಕಾರಿ ಮಹಿಳಾ ಕಾೇಜು, 2008ರಿಂದ 2020ರವರೆಗೆ ದಾವಣಗೆರೆಯ ಸರ್ಕಾರಿ ಮಹಿಳಾ ಕಾಲೇಜಿಗೆ ಅಧ್ಯಾಪಕರಾಗಿ ಬಂದ
ದಾದಾಪೀರ್ ನವಿಲೇಹಾಳ್ ಅವರು, 2024ರ ಜುಲೈ 30ರವರೆಗೆ ಕೆಲಸ ನಿರ್ವಹಿಸಲಿದ್ದಾರೆ.
ಕೃತಿಗಳು:
ದಾದಾಪೀರ್ ನವಿಲೇಹಾಳ್ ಅವರು ಐದು ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ. ಪಿಂಜಾರರ ಸಂಸ್ಕೃತಿ, ಕುರುಮಾಮರ ಸಂಸ್ಕೃತಿ, ಕನ್ನಡ ಸಿರಿ, ಸಾಹಿತ್ಯ ಸಂವೇದನೆ, ಕನ್ನಡ ಲೋಕ ಎಂಬ ಐದು ಕೃತಿಗಳನ್ನು ಲೋಕಾರ್ಪಣೆಗೊಳಿಸಿ, ಸೈ ಎನಿಸಿಕೊಂಡಿದ್ದಾರೆ. ಬರವಣಿಗೆಯಲ್ಲಿಯೂ ಪ್ರೀತಿಯ ಮೇಷ್ಟ್ರು ಎಲ್ಲರ ಮನ ಗೆದ್ದಿದ್ದಾರೆ.
ಸಾಹಿತ್ಯ, ವಿಜ್ಞಾನ, ಜಾನಪದ, ಪರಿಸರ, ಸಿನಿಮಾ ಸೇರಿದಂತೆ ಇತರೆ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ದಾದಾಪೀರ್ ಅವರು, ನೂರಾರು ವಿಚಾರ ಸಂಕಿರಣ ಮತ್ತು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವ ಖ್ಯಾತಿ ಹೊಂದಿದ್ದಾರೆ.
ಜೀವನದುದ್ದಕ್ಕೂ ಕನ್ನಡ ಸೇವೆ, ಕನ್ನಡ ಪಾಠ, ಕನ್ನಡಕ್ಕಾಗಿ ದುಡಿದಿರುವ ದಾದಾಪೀರ್ ಸರ್ ಅಂಥ ಅಧ್ಯಾಪಕರು ಸಿಗುವುದು ವಿರಳ. ಇಂಥ ಗುರುಗಳನ್ನು ಪಡೆದ ಶಿಷ್ಯವರ್ಗದವರೇ ಅದೃಷ್ಟವಂತರು. ಇಷ್ಟೆಲ್ಲಾ ಖ್ಯಾತಿ ಹೊಂದಿರುವ ದಾದಾಪೀರ್ ನವಿಲೇಹಾಳ್ ಅವರ ಸರಳತೆ, ವಿನಯ, ಪಾಠ ಮಾಡುವ ರೀತಿ, ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವ ಪರಿ ಅದ್ಭುತ, ಅನನ್ಯ. ಒಟ್ಟಿನಲ್ಲಿ ಸಾರ್ಥಕ ಸೇವೆ ಸಲ್ಲಿಸಿರುವ ದಾದಾಪೀರ್ ನವಿಲೇಹಾಳ್ ಅವರ ನಿವೃತ್ತಿ ನಂತರ ಬದುಕು ಹಸನಾಗಿರಲಿ, ಅವರಿಂದ ಮತ್ತಷ್ಟು ಕೃತಿಗಳು ಹೊರಬರಲಿ, ಕನ್ನಡ ಪಾಠ ಮುಂದುವರಿಯಲಿ ಎಂದು ವಿದ್ಯಾರ್ಥಿಗಳು ಆಶಯ ವ್ಯಕ್ತಪಡಿಸಿದ್ದಾರೆ.