ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಆರು ಬಂಧಿತ ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಮೂವರು ಆರೋಪಿಗಳ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
‘ಅಪರಾಧ ವಿಭಾಗದ ವಿಶೇಷ ನ್ಯಾಯಾಲಯದಲ್ಲಿ 1,735 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇದು ತನಿಖೆಯ ಭಾಗವಾಗಿ ಸಂಗ್ರಹಿಸಿದ ಪ್ರಮುಖ ದಾಖಲೆಗಳನ್ನು ಒಳಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಈ ಪ್ರಕರಣ ಸಂಬಂಧ 46 ಸಾಕ್ಷಿಗಳ ಹೇಳಿಕೆಗಳು ಮತ್ತು ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಏಪ್ರಿಲ್ 14ರ ಮುಂಜಾನೆ 5 ಗಂಟೆ ವೇಳೆಗೆ ಎರಡು ಬೈಕ್ಗಳಲ್ಲಿ ಬಂದ ಇಬ್ಬರು ಆರೋಪಿಗಳು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ನಾಲ್ಕು ಸುತ್ತು ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದರು. ಇವರುಗಳ ಸಲ್ಮಾನ್ ಖಾನ್ ಹತ್ಯೆಗೆ ಪಾಕ್ ನಿಂದ ಸುಪಾರಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.