SUDDIKSHANA KANNADA NEWS/ DAVANAGERE/ DATE:22-06-2023
ದಾವಣಗೆರೆ (Davanagere) :ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಬಹಿರಂಗವಾಗಿಯೇ ನಾಯಕರು ವೇದಿಕೆಯಲ್ಲಿ ಮಾತನಾಡುವಂತಾಗಿದೆ. ಇಂದು ದಾವಣಗೆರೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಇದು ಮತ್ತೆ ಪ್ರತಿಧ್ವನಿಸಿತು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೊರತುಪಡಿಸಿದರೆ ಮಾತನಾಡಿದ ಬಹುತೇಕರು ಪಕ್ಷದ ಕೆಲ ನಿರ್ಧಾರಗಳು, ಮುಖಂಡರಿಂದಲೇ ಸೋಲು ಕಾಣುವಂತಾಯಿತು ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು.
ನಮ್ಮವರೇ ನಮ್ಮನ್ನು ಸೋಲಿಸಿದ್ರು:
ಜಗಳೂರು ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರಂತೂ ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಹೇಳಿದರು. ಮಾಜಿ ಸಿಎಂ ಯಡಿಯೂರಪ್ಪ ಅವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಬಿಜೆಪಿ ಬಲಿಷ್ಠವಾಗಿರಲಿದೆ. ಯಾರೂ ಪಕ್ಷವನ್ನೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಿಮ್ಮಿಂದ ಅಲ್ಲ, ನಮ್ಮಿಂದ ಸೋಲು:
ಮಾಜಿ ಸಚಿವ ಗೋವಿಂದ ಕಾರಜೋಳ ಅವರಂತೂ ವೇದಿಕೆಯಲ್ಲಿ ಮೇಲಿರುವ ನಮ್ಮಿಂದಾನೇ ಸೋಲಾಗಿರುವುದು. ವೇದಿಕೆಯ ಮುಂಭಾಗ ಕುಳಿತಿರುವ ಕಾರ್ಯಕರ್ತರಿಂದ ಅಲ್ಲ. ಪಕ್ಷದ ಕೆಲ ತೀರ್ಮಾನಗಳು ಸೋಲಿಗೆ ಕಾರಣವಾಯಿತು ಎಂದು ಬೇಸರ ಹೊರಹಾಕಿದರು.
ಈ ಸುದ್ದಿಯನ್ನೂ ಓದಿ:
B. S. Yediyurappa: ಮತ್ತೆ ಫೀಲ್ಡಿಗಿಳಿದ ರಾಜಾಹುಲಿ: ಜು.5ರಿಂದ ಕಾಂಗ್ರೆಸ್ ವಿರುದ್ಧ ಸತ್ಯಾಗ್ರಹದ ಸಮರ ಸಾರಿದ ಬಿ. ಎಸ್. ಯಡಿಯೂರಪ್ಪ
ಪಕ್ಷದ ಕೆಲ ನಿರ್ಧಾರದಿಂದ ಬಿಜೆಪಿಗೆ ಹಿನ್ನೆಡೆ:
ರೇಣುಕಾಚಾರ್ಯ ಅವರದ್ದೂ ಇದೇ ಅಭಿಮತ. ಪಕ್ಷದ ಕೆಲ ನಿರ್ಧಾರಗಳಿಂದ ಸೋತಿದ್ದೇವೆ. ಹಾಗೆಂದ ಮಾತ್ರಕ್ಕೆ ಮನೆಯಲ್ಲಿ ಕೂರದೇ ಮತ್ತೆ ಪಕ್ಷ ಸಂಘಟಿಸೋಣ. ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಂದು ಹೇಳಲು ಮನಸು ಬರುತ್ತಿಲ್ಲ. ಅವರೂ ಈಗಲೂ ರಾಜ್ಯದ ಜನರ ದೃಷ್ಟಿಯಲ್ಲಿ ಮುಖ್ಯಮಂತ್ರಿ ಅವರೇ ಎಂದು ಕೊಂಡಾಡಿದರು.
ಕಾರ್ಯಕರ್ತರಿಂದ ಪಕ್ಷ ಬೆಳೆದಿರೋದು:
ಸಂಸದ ಜಿ. ಎಂ. ಸಿದ್ದೇಶ್ವರ ಮಾತನಾಡಿ, ಕಾರ್ಯಕರ್ತರಿಂದಲೇ ಪಕ್ಷ ಬೆಳೆದಿರುವುದು. ಮತದಾರರು ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ. 150ರಿಂದ ಮೂರು ಸಾವಿರ ಮತಗಳ ಅಂತರದಿಂದ 52 ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇವರೆಲ್ಲಾ ಗೆದ್ದಿದ್ದರೆ ಪಕ್ಷ ಸರಳ ಬಹುಮತದಿಂದ ಅಧಿಕಾರಕ್ಕೆ ಬರುತಿತ್ತು. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಜಾರಿಗೆ ಬರುವವರೆಗೆ ಬಿಡುವುದು ಬೇಡ. ಈಡೇರಿಸಲು ಆಗದೇ ಕಾಂಗ್ರೆಸ್ ನವರೇ ಅಧಿಕಾರ ಬಿಟ್ಟು ಹೋಗಬೇಕು. ಆ ರೀತಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಸರ್ಕಾರ ಪತನ: ರೇಣುಕಾಚಾರ್ಯ ಭವಿಷ್ಯ..!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಭರವಸೆಗಳು ಸೋಲಿಸಿವೆ. ಚುನಾವಣೆಯಲ್ಲಿ ಸೋತಿರಬಹುದು. ಆದ್ರೆ ಜನರ ದೃಷ್ಟಿಯಲ್ಲಿ ಗೆದ್ದಿದ್ದೇನೆ. ವಿದ್ಯುತ್ ಬಿಲ್ 5 ಪಟ್ಟು ಹೆಚ್ಚಾಗಿದೆ. ಮದ್ಯದ ದರವೂ ದುಪ್ಪಟ್ಟಾಗಿದೆ. ಕಿಕ್ ಮತ್ತು ಶಾಕ್ ಒಂದಾದರೆ ಕಾಂಗ್ರೆಸ್ ಸರ್ಕಾರ ಪತನ ಖಚಿತ. ಜನರು ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಾರೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ನಗರದ ರೇಣುಕಾಮಂದಿರದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನಾವು ಸೋತಿರಬಹುದು, ಆದ್ರೆ, ಸತ್ತಿಲ್ಲ. ತಾಂತ್ರಿಕವಾಗಿ ಸೋಲು ಕಂಡಿದ್ದೇವೆ. ನಾವು ಸೋತಿದ್ದೇವೆ ಎಂಬ ಭಾವನೆ ಬಂದರೆ 25 ವರ್ಷ ಹಿಂದಕ್ಕೆ ಹೋದಂತಾಗುತ್ತದೆ. ಕಾಂಗ್ರೆಸ್ ನ ಬಿಟ್ಟಿ ಭರವಸೆಗಳು, ಪಕ್ಷದ ಕೆಲ ತಪ್ಪು ನಿರ್ಧಾರದಿಂದ ಹಿನ್ನೆಡೆಯಾಗಿದೆ. ಸೋಲನ್ನು ಸವಾಲಾಗಿ ಸ್ವೀಕರಿಸೋಣ. ಇಂದಿನ ಸೋಲು ನಾಳೆಯ ಗೆಲುವು ಎಂದು ಹೇಳಿದರು.
ಮನೆಯಲ್ಲಿ ಸುಮ್ಮನೆ ಕೂರಬೇಡಿ:
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ನಡೆಸಲು ಕಾಂಗ್ರೆಸ್ ಗೆ ಇಷ್ಟ ಇಲ್ಲ. ಲೋಕಸಭಾ ಚುನಾವಣೆ ಬರುತ್ತಿದೆ. ಈಗಿನಿಂದಲೇ ನಾವೆಲ್ಲರೂ ಸಜ್ಜಾಗೋಣ. ಸೋತಿದ್ದೇವೆಂದು ಮನೆಯಲ್ಲಿ ಕೂರಬೇಡಿ. ನಾನು ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಗ್ರಾಮಗಳಿಗೆಲ್ಲಾ ಹೋಗಿ ಬಂದಿದ್ದೇನೆ. ಕಾಂಗ್ರೆಸ್ ಸರ್ಕಾರದ ಮೋಸದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿದೆ. ಶಕ್ತಿ ಪ್ರಯಾಣವೂ ಎಲ್ಲರಿಗೂ ಸಿಗುತ್ತಿಲ್ಲ. ಮನೆಯಲ್ಲಿ ಅತ್ತೆ – ಸೊಸೆ ನಡುವೆ ಗಲಾಟೆ ಆಗುವಂತೆ ಮಾಡಿದೆ. ಮನೆ ಯಜಮಾನಿ ಸೇರಿದಂತೆ ನಾಲ್ವರು ಮಹಿಳೆಯರು ಇರುತ್ತಾರೆ. ಅವರಿಗೆ ಕೊಡೋದಿಲ್ಲ ಎಂದರೆ ಹೇಗೆ? ಎಲ್ಲರಿಗೂ ತಲಾ 2 ಸಾವಿರ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದರು.
ಒಲಿದರೆ ನಾರಿ, ಮುನಿದರೆ ಮಾರಿ:
ಹಳ್ಳಿಗಳಿಗೆ ಹೋದರೆ ಕಾಂಗ್ರೆಸ್ ನ ಗ್ಯಾರಂಟಿಗಳಿಂದ ಆಗಿರುವ ಪರಿಸ್ಥಿತಿ ಅನಾವರಣಗೊಳ್ಳುತ್ತದೆ. ಗ್ಯಾರಂಟಿ ಕಾರ್ಡ್ ಸೈನ್ ಮಾಡಿಕೊಟ್ಟಿದ್ದೇ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂಬ ಘೋಷಣೆ ಮಾಡಿದ್ದರಾ? ಈಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆರೋಪ ಮಾಡಲು ಶುರು ಮಾಡಿರುವ ಕಾಂಗ್ರೆಸ್ ನ ಕುತಂತ್ರ ರಾಜಕಾರಣಕ್ಕೆ ಜನರು ಸೊಪ್ಪು ಹಾಕುವುದಿಲ್ಲ ಎಂದು ಕಿಡಿಕಾರಿದರು.
ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಮಾತಿದೆ. 10 ಕೆಜಿ ಅಕ್ಕಿ ಕೊಡಿ, ವಿದ್ಯುತ್ ಫ್ರೀ ನೀಡಿ, ಕೆಲ ಬಸ್ ಗಳು ತಡೆರಹಿತ ಎಂಬ ಬೋರ್ಡ್ ಹಾಕಿಕೊಂಡು ಸಂಚರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ನಿಲುಗಡೆ ಆಗುತ್ತಿಲ್ಲ. ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಎಂದಿದ್ದರೂ ಯಾಕೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಕಿಡಿಕಾರಿದರು.
ವೇದಿಕೆಯಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದ ಜಿ. ಎಂ. ಸಿದ್ದೇಶ್ವರ, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ನವೀನ್, ಮಾಜಿ ಸಚಿವ ನಾಗೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ್, ನಾಗರಾಜ್, ಕಲ್ಲೇಶ್, ಹರಿಹರ ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಮತ್ತಿತರರು ಹಾಜರಿದ್ದರು.
Davanagere Political News, Davanagere Bjp Meeting, Davanagere Bjp Workers Meeting, Davanagere Visit Bsy, Davanagere Latest News, Davanagere Suddi
Comments 1