SUDDIKSHANA KANNADA NEWS| DAVANAGERE| DATE:22-06-2023
ದಾವಣಗೆರೆ (DAVANAGERE): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಈಡೇರಿಸಲೇಬೇಕು. ಇಲ್ಲದಿದ್ದರೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ನ ಒಳಗೆ ಹಾಗೂ ಹೊರಗೂ ಪ್ರತಿಭಟನೆ ನಡೆಸುತ್ತೇವೆ. ವಿಧಾನಸೌಧದ ಮುಂದೆ ಧರಣಿ ಕೂರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗುಡುಗಿದರು.
ದಾವಣಗೆರೆಯ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಕ್ಕಿ ಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಹಾಗೂ ಪದವೀಧರರಿಗೆ ಮೂರು ಸಾವಿರ ರೂಪಾಯಿ ಹಾಗೂ ಡಿಪ್ಲೊಮೋ ಪದವೀಧರರಿಗೆ ವಿದ್ಯಾನಿಧಿ ನೀಡಲೇಬೇಕು. ಇಲ್ಲದಿದ್ದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವು 10 ಕೆ.ಜಿ. ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಜನರಿಗೆ ಅಕ್ಕಿ ಕೊಡುವ ಬದಲು ವಿನಾಕಾರಣ ಸಬೂಬು ಹೇಳುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಅಕ್ಷಮ್ಯ ಅಪರಾಧ. ಕೊಟ್ಟ ಭರವಸೆ ಮೊದಲು ಈಡೇರಿಸಿ. ಅದನ್ನು ಬಿಟ್ಟು ಆರೋಪ ಮಾಡುತ್ತಾ ಕೂರುವುದು ಒಳ್ಳೆಯದಲ್ಲ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರಯ, ಸದ್ಯದಲ್ಲಿಯೇ ಆಯ್ಕೆ ಆಗಲಿದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.