SUDDIKSHANA KANNADA NEWS/ DAVANAGERE/ DATE:11-06-2024
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ ಸಂಬಂಧ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ನಟಿ ಪವಿತ್ರಾ ಗೌಡ ಸೇರಿದಂತೆ ಹಲವರು ಅರೆಸ್ಟ್ ಆಗಿದ್ದಾರೆ.
ಈ ಹಿಂದೆ ಪತ್ನಿ ವಿಜಯಲಕ್ಷ್ಮಿಗೆ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ಮೆಜೆಸ್ಟಿಕ್ ದಾಸ ಈಗ ಮತ್ತೆ ತನ್ನ ಪ್ರೀತಿಯ ಮನದನ್ನೆಗೋಸ್ಕರ ಕಂಬಿ ಎಣಿಸುವಂತಾಗಿದೆ. ಬೆಂಗಳೂರಿನಲ್ಲಿ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಗೆಳತಿ ಪವಿತ್ರಾಗೌಡರನ್ನು ಬಂಧಿಸಿದ್ದಾರೆ. ವಿಚಾರಣೆ ಚುರುಕುಗೊಳಿಸಿದ್ದಾರೆ.
ಮೈಸೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಗಿರೀಶ್, ಎಸಿಪಿ ಚಂದನ್ರಿಂದ ನಟ ದರ್ಶನ್ ವಿಚಾರಣೆ ನಡೆಯುತ್ತಿದೆ. ಅನ್ನಪೂರ್ಣೇಶ್ವರಿನಗರ ಠಾಣೆ ಬಳಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಪವಿತ್ರಾಗೌಡಳನ್ನು ವಶಕ್ಕೆ ಪಡೆದ ಆರ್.ಆರ್. ನಗರ ಪೊಲೀಸ್ ಇನ್ಸ್ ಪೆಕ್ಟರ್ ಮಾರ್ಕಂಡಯ್ಯ ಅವರು ಕಾಮಾಕ್ಷಿ ಪಾಳ್ಯ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಜೊತೆ ಅವರ ಅಕ್ಕ ಕೂಡ ಠಾಣೆಗೆ ಆಗಮಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 10 ಜನರನ್ನು ವಿಜಯನಗರ ಎಸಿಪಿ ಚಂದನ್ ತಂಡ ಬಂಧಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೈಸೂರಿನ ರ್ಯಾಡಿಸನ್ ಹೋಟೆಲ್ನಲ್ಲಿ ದರ್ಶನ್ ಅರೆಸ್ಟ್ ಮಾಡಲಾಗಿದ್ದು ನಟ ದರ್ಶನ್ ಸೇರಿದಂತೆ ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿ 10 ಜನರನ್ನು ಅರೆಸ್ಟ್ ಮಾಡಿದ್ದಾರೆ.
ಯಾರು ಈ ರೇಣುಕಾಸ್ವಾಮಿ…?
ಚಿತ್ರದುರ್ಗದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯ ನಿವಾಸಿ ರೇಣುಕಾಸ್ವಾಮಿ. ಈತ ಅಪೊಲೋ ಮೆಡಿಕಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಶನಿವಾರಮನೆಯಿಂದ ಹೊರಟವರು ವಾಪಸ್ ಬಂದಿಲ್ಲ. ಈ ಬಗ್ಗೆ ಕುಟುಂಬದವರಿಗೆ ಆತಂಕ ಎದುರಾಗಿತ್ತು. ಆ ಬಳಿಕ ರೇಣುಕಾಸ್ವಾಮಿ ಶವವಾಗಿ ಪತ್ತೆ ಆಗಿರುವುದಾಗಿ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನಕ್ಕೆ ಒಳಗಾಗಿದ್ದಾರೆ. ಕೊಲೆ ಕೇಸ್ನಲ್ಲಿ ಅವರು ಅರೆಸ್ಟ್ ಆಗಿದ್ದಾರೆ. ಮೈಸೂರಿನ ರ್ಯಾಡಿಸನ್ ಹೋಟೆಲ್ನಲ್ಲಿ ಈ ಬಂಧನ ನಡೆದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ದರ್ಶನ್ಗೂ ನಂಟಿದೆ ಎನ್ನಲಾಗಿದೆ. ಅಷ್ಟಕ್ಕೂ ಯಾರು ಈ ರೇಣುಕಾಸ್ವಾಮಿ? ಅವರಿಗೂ ಪವಿತ್ರಾ ಗೌಡಗೂ ಏನು ಸಂಬಂಧ ಎನ್ನುವ ಪ್ರಶ್ನೆಗೆ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತಿದೆ.
ಜೂನ್ 9ರಂದು ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪದ ಮೋರಿಯಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿದೆ. ಅನುಗ್ರಹದ ಸೆಕ್ಯೂರಿಟಿ ಆಫೀಸರ್ ಕೇವಲ್ ರಾಮ್ ದೋರ್ ಜೀ ಅವರು ಪೊಲೀಸರಿಗೆ ಕರೆ ಮಾಡಿ, ‘ಮೋರಿಯ ಮುಂದೆ 30-35 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿದ್ದರು. ಅಪರಿಚಿತ ಶವ ಪ್ರಕರಣವನ್ನು ತನಿಖೆ ಮಾಡಿದ ಪೊಲೀಸರಿಗೆ ಬಿಗ್ ಲೀಡ್ ಸಿಕ್ಕಿತ್ತು.
ಶವ ಪತ್ತೆ ವೇಳೆ ಮುಖ,ತಲೆಗೆ ಹಾಗೂ ಕಿವಿಗೆ ಗಾಯವಾಗಿರುವು ಕಂಡು ಬಂದಿದೆ. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಅವರು ನಟ ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದರು.
ರೇಣುಕಾಸ್ವಾಮಿ ಮಾಡಿದ ತಪ್ಪೇನು?
ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಕೆಟ್ಟಾದಾಗಿ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಅಶ್ಲೀಲ ಮೇಸೆಜ್, ಫೋಟೋ ಹಾಕಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ದರ್ಶನ್ ಹಾಗೂ ಇನ್ನೂ ಕೆಲವರು ಸೇರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಮನೆಗೆ ಬಿಗಿ ಭದ್ರತೆ:
ಆಪ್ತೆ ಪವಿತ್ರಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು ಎಂಬ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ವಿಜಯನಗರ ಎಸಿಪಿ ಚಂದನ್ ತಂಡ ಮೈಸೂರಿನ ಫಾರ್ಮ್ಹೌಸ್ನಲ್ಲಿ ನಟ ದರ್ಶನ್ ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಬೆನ್ನಲ್ಲೇ ಬೆಂಗಳೂರಿನ ನಟ ದರ್ಶನ್ ಮನೆ ಬಳಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ದರ್ಶನ್ ಮನೆ ಬಳಿ ಬ್ಯಾರಿಕೇಡ್ ಹಾಕಿ 20ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಫ್ಯಾನ್ಸ್ಗಳಿಂದ ಏನಾದ್ರು ತೊಂದರೆ ಆಗಬಹುದು ಎಂಬ ಕಾರಣಕ್ಕೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಸದ್ಯ ದರ್ಶನ್ ಮನೆ ಬಳಿ ಯಾರು ಕೂಡ ಇಲ್ಲ ಎಂದು ತಿಳಿದುಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ. ಈ ಹಿನ್ನೆಲೆ ನಟ ದರ್ಶನ್, ಚಿತ್ರದುರ್ಗದ ದರ್ಶನ್ ಫ್ಯಾನ್ ಸಂಘಟನೆ ಅಧ್ಯಕ್ಷನಿಗೆ ಫೋನ್ ಕಾಲ್ ಮಾಡಿ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನ ಕರೆತರುವಂತೆ ಹೇಳಿದ್ದರು.
ಬೆಂಗಳೂರಿಗೆ ರೇಣುಕಾಸ್ವಾಮಿ ಕರೆದುಕೊಂಡು ಬಂದು ವಿನಯ್ ಎನ್ನುವವರಿಗೆ ಸೇರಿದ ಶೆಡ್ನಲ್ಲಿ ಇರಿಸಿದ್ದರು. ರೇಣುಕಾಸ್ವಾಮಿಗೆ ದರ್ಶನ್ ಸೇರಿ 4 ಜನರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ಬಳಿಕ ರೇಣುಕಾಸ್ವಾಮಿಗೆ ಬಲವಾದ ಆಯುಧದಿಂದ ಶೆಡ್ನಲ್ಲೇ ಹಲ್ಲೆ ಮಾಡಿ ಜೂನ್ 8ರ ಶನಿವಾರ ರಾತ್ರಿ ಕೊಲೆ ಮಾಡಲಾಗಿದೆ. ನಂತರ ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಮೃತದೇಹ ಎಸೆಯಲಾಗಿದೆ. ಭಾನುವಾರ ಬೆಳಗಿನ ಜಾವ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು.
ರೇಣುಕಾಸ್ವಾಮಿ ಶವವನ್ನ ನಾಯಿಗಳು ಎಳೆಯುತ್ತಿದ್ದಾಗ ಮೃತದೇಹ ಪತ್ತೆಯಾಗಿತ್ತು. ಸದ್ಯ ಕಾಮಾಕ್ಷಿ ಪಾಳ್ಯ ಸ್ಟೇಷನ್ಗೆ ರೇಣುಕಾಸ್ವಾಮಿ ಪೋಷಕರು ಆಗಮಿಸಿದ್ದು ಕಣ್ಣೀರಿಟ್ಟಿದ್ದಾರೆ.