ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ನಲ್ಲೇ ಹೃದಯಾಘಾತದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಖಾಸಗಿ ಶಾಲಾ ಬಸ್ ಚಾಲಕ ಗುರುವಾರ ಮುಂಜಾನೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರನ್ನು ಶಾಲಾ ಬಸ್ ಚಾಲಕ ಪೇತ್ರಿ ನಿವಾಸಿ ಆಲ್ವಿನ್ ಡಿ’ಸೋಜಾ (53) ಎಂದು ಗುರುತಿಸಲಾಗಿದೆ. ಅವರು ಬ್ರಹ್ಮಾವರದ ಖಾಸಗಿ ಶಾಲೆಯಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲದತ್ತ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರಿಗೆ ಲಘು ಹೃದಯಾಘಾತವಾಗಿತ್ತು. ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯ ಬಸ್ 65 ಮಕ್ಕಳನ್ನು ಹತ್ತಿಸಿಕೊಂಡು ಪೆರಂಪಳ್ಳಿಯಾಗಿ ಮಣಿಪಾಲದ ಕಡೆಗೆ ತೆರಳುತ್ತಿತ್ತು.
ಪೆರಂಪಳ್ಳಿಗೆ ಬರುತ್ತಿದ್ದಂತೆ ಬಸ್‌ನ ಚಾಲಕ ಆಲ್ವಿನ್ ಡಿಸೋಜಾ (52) ಅವರಿಗೆ ಲಘು ಹೃದಯಾಘಾತವಾಗಿದೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಚಾಲಕ ಆಲ್ವಿನ್ ಅವರು ಬಸ್‌ನನ್ನು ಸಂಪೂರ್ಣ ಎಡಕ್ಕೆ ತಿರುಗಿಸಿ ನಿಲ್ಲಿಸಿದ್ದರು. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಐದಾರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದರು.