ಬೆಂಗಳೂರು: ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ (Sexual Harassment) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal) ಹೊರದೇಶದಲ್ಲಿದ್ದುಕೊಂಡೇ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ (anticipatory bail) ಅರ್ಜಿ ಸಲ್ಲಿಸಿದ್ದಾರೆ. ಮೇ 31ಕ್ಕೆ ಬೆಂಗಳೂರಿಗೆ ವಾಪಸ್ ಆಗುವುದಾಗಿ ಈಗಾಗಲೇ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ಆದರೆ ಬೆಂಗಳೂರಿಗೆ ಆಗಮಿಸುವ ಮೊದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ವಕೀಲ ಅರುಣ್ ರೇವಣ್ಣ ಪರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಮಧ್ಯಾಹ್ನ ಅರ್ಜಿಸಲ್ಲಿಸಿದ್ದಾರೆ. ಸಿಐಡಿಯಲ್ಲಿ ಪ್ರಜ್ವಲ್ ವಿರುದ್ಧ ಎರಡು ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣ ಹಾಗೂ ಹೊಳೆ ನರಸೀಪುರ ಠಾಣೆಯಲ್ಲಿ ಒಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ತಮ್ಮ ಮೇಲೆ ಎಫ್ಐಆರ್ ದಾಖಲಾದ ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ತಿಂಗಳ ಬಳಿಕ ಪ್ರಜ್ವಲ್ ಭಾರತಕ್ಕೆ ವಾಪಸ್ ಬರುತ್ತಿದ್ದಾರೆ. ಈಗಾಗಲೇ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಲಾಗಿದೆ. ನಿನ್ನೆಯಷ್ಟೆ ವಿಡಿಯೋ ಬಿಡುಗಡೆ ಮಾಡಿದ್ದ ಪ್ರಜ್ವಲ್, ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು. ಆರೋಪಕ್ಕೆ ಹೆದರಿ ದೇಶ ಬಿಟ್ಟಿಲ್ಲ ಎಂದು ಹೇಳಿದ್ದರು. ಎಸ್ಐಟಿ ನೋಟಿಸ್ಗೆ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದೇನೆ. ತನಿಖೆಗೆ ಹಾಜರಾಗಲು 7 ದಿನಗಳ ಕಾಲಾವಕಾಶವನ್ನೂ ಕೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮೇ 31ರಂದು ತನಿಖೆಗೆ ಹಾಜರಾಗಿ, ಕಾನೂನು ಹೋರಾಟ ನಡೆಸುವೆ ಎಂದಿದ್ದಾರೆ.
ವಿಮಾನ ಇಳಿಯುತ್ತಿದ್ದಂತೆ ಬಂಧನ?
ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಗೃಹಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಬಂಧನಕ್ಕೆ ಪಕ್ಷ ಎಂಬುದು ಬರುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅಂತವರನ್ನು ಬಂಧಿಸಲಾಗುತ್ತದೆ. ಪ್ರಜ್ವಲ್ ವಿರುದ್ಧ ವಾರಂಟ್ ಜಾರಿಯಾಗಿರುವುದರಿಂದ ಬಂಧಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎಸ್ಐಟಿಯವರು ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ತಿಳಿಸಿದರು.