ಮಂಗಳೂರು: ಪ್ರಸಕ್ತ ಶಾಲಿನ ಶೈಕ್ಷಣಿಕ ವರ್ಷವು ಮೇ 29 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಗಳು ಆರಂಭಗೊಂಡಿದ್ದು ಬುಧವಾರದಿಂದ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಲಿವೆ.
ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೌಲ ಸೌಕರ್ಯ ಕಲ್ಪಿಸುವ ಮತ್ತು ಪೀಠೊಪಕರಣಗಳನ್ನು ಸರಿಪಡಿಸುವ ಕಾರ್ಯಗಳು ನಡೆದಿವೆ. ಶಾಲಾವರಣದ ಸ್ವಚ್ಛತೆ, ವಿದ್ಯಾರ್ಥಿಗಳನ್ನು ಆಕರ್ಷಿಸಲು ಬೇಕಾದ ಸಿದ್ಧತೆಯಾಗಿದೆ. ಕೆಲವು ಶಾಲೆಗಳಿಂದ ಹೊಸ ಕೊಠಡಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮಳೆಗಾಲಕ್ಕೆ ಮಕ್ಕಳ ಸುರಕ್ಷತೆಗೂ ಬೇಕಾದ ಕಾರ್ಯಗಳು ಕೂಡಲೇ ಆರಂಭವಾಗಲಿದೆ. ಕೆಲವೆಡೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು, ಕಾಮಗಾರಿಗಳನ್ನು ನಡೆಸಲಾಗಿದೆ. ಶೈಕ್ಷಣಿಕ ತರಗತಿಗಳು ಮೇ 29 ರಿಂದ ಆರಂಭವಾದರೂ ಮೇ 31ರಂದು ಎಲ್ಲ ಶಾಲೆಗಳಲ್ಲೂ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಶಾಲೆಯ ಮುಖ್ಯದ್ವಾರಕ್ಕೆ ತಳಿರು ತೋರಣಗಳನ್ನು ಕಟ್ಟಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಆಹ್ವಾನಿಸಲಾಗುತ್ತದೆ.
ಊರಿನ ಹಿರಿಯರು, ಗಣ್ಯರು, ದಾನಿಗಳನ್ನು, ಶಿಕ್ಷಣ ಪ್ರೇಮಿಗಳನ್ನು ಕರೆಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾ ಕಚೇರಿಯು ಶಾಲೆಗಳಿಗೆ ಸೂಚಿಸಲಾಗಿದೆ. ಹೀಗಾಗಿ ಎಲ್ಲೆಡೆ ಇದಕ್ಕೆ ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಸಮವಸ್ತ್ರದಲ್ಲಿ ಕೆಲವು ಬದಲಾವಣೆಗಳನ್ನು ಈ ವರ್ಷ ಶಿಕ್ಷಣ ಇಲಾಖೆ ಮಾಡಿದೆ. 8, 9 ಮತ್ತು 10ನೇ ಕ್ಲಾಸ್ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದ ಚೂಡಿದಾರ್ ಸಮವಸ್ತ್ರವನ್ನು ಈ ವರ್ಷದಿಂದ 6 ಮತ್ತು 7 ನೇ ಕ್ಲಾಸ್ ವಿದ್ಯಾರ್ಥಿನಿಯರಿಗೂ ನೀಡಲು ಮುಂದಾಗಿದೆ ಶಿಕ್ಷಣ ಇಲಾಖೆ. ಖುಷಿ ವಿಚಾರವಾಗಿ ಶಾಲಾರಂಭದಲ್ಲಿಯೇ 2 ಜೊತೆ ಸಮವಸ್ತ್ರವನ್ನು 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸಜ್ಜಾಗಿದೆ ಇಲಾಖೆ. Ad