SUDDIKSHANA KANNADA NEWS/ DAVANAGERE/ DATE:11-05-2024
ದಾವಣಗೆರೆ: ಜೂನ್ 1ರಿಂದ ದಾವಣಗೆರೆ ಜಿಲ್ಲೆಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಗಾಳಿ ಬೀಸುವುದು ಖಚಿತ. ಇನ್ನು 30 ವರ್ಷ ಇಲ್ಲಿಂದ ಕದಲುವುದಿಲ್ಲ. ಬಂಡವಾಳಶಾಹಿಗಳ ರಾಜಕಾರಣಕ್ಕೆ ಮುಕ್ತಿಗೊಳಿಸೋಣ. ರಾಜಕಾರಣಿಗಳು ಉದ್ಯಮಿಗಳಾಗಿ ಜನರ ವಿಶ್ವಾಸ, ನಂಬಿಕೆ ಕಳೆದು ಕೊಂಡಿದ್ದಾರೆ. ಚುನಾವಣೆಗಳಲ್ಲಿ ನೂರಾರು ಕೋಟಿ ರೂಪಾಯಿ ಚೆಲ್ಲಿ ಗೆಲ್ಲುವ ವ್ಯವಸ್ಥೆ ಬದಲಾಗಬೇಕಿದೆ. ಈ ವ್ಯವಸ್ಥೆ ಸರಿಪಡಿಸಲು ಐದು ವರ್ಷ ಇಲ್ಲವೇ ಹತ್ತು ವರ್ಷಗಳು ಆಗಬಹುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.
ನಗರದ ಬಂಟರ ಭವನದಲ್ಲಿ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭ ಹಾಗೂ ಇದು ಅಂತ್ಯವಲ್ಲ, ಆರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಯದ ವಾತಾವರಣದಲ್ಲಿ ಅಸ್ಮಿತೆ ಕಳೆದುಕೊಂಡು ಬದುಕುವುದು ಬೇಡ, ಸ್ವಾಭಿಮಾನಿಗಳಾಗಿ ಹೋರಾಡೋಣ. ಜೂ.1 ರ ಬಳಿಕ ಜಿಲ್ಲೆಯ ಪ್ರತಿಯೊಂದು ಶಾಲೆ, ಕಾಲೇಜಿಗೆ ಭೇಟಿ ಮಕ್ಕಳೊಂದಿಗೆ ಸಂವಾದ ನಡೆಸುತ್ತೇನೆ. ಅವರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುತ್ತೇನೆ. ಶಿಕ್ಷಣದ ಮಹತ್ವ ತಿಳಿಸಿಕೊಡುವ ಕೆಲಸ ನಿರಂತರವಾಗಿ ನಡೆಸುತ್ತೇನೆ ಎಂದು ಹೇಳಿದರು.

ವಾಮಮಾರ್ಗದಲ್ಲಿ ಹೋಗಲ್ಲ:
ಜಿಲ್ಲೆಯಾದ್ಯಂತ ಪಾದಯಾತ್ರೆ ಮಾಡಿದಾಗ 300 ಹಳ್ಳಿಗಳು, ಕಾಲ್ನಡಿಗೆಯಲ್ಲಿ 600 ಹಳ್ಳಿಗಳಿಗೆ ಹೋಗಿದ್ದೆ. ನಾನು ಯಾರಿಗೂ ಮೋಸ ಮಾಡಿಲ್ಲ. ಡೀಲ್ ಆಗಿಲ್ಲ. ನಾನು ಕ್ರಾಂತಿ ಮಾಡಲು ಬಂದಿದ್ದೇನೆ ಹೊರತು ಯಾರದ್ದೋ ವಿರುದ್ಧದಂಗೆ ಎದ್ದು ಕ್ರಾಂತಿ ಅಲ್ಲ. ನನ್ನದೇನಿದ್ದರೂ ಮೌನ ಕ್ರಾಂತಿ. ದೊಡ್ಡ ನಾಯಕತ್ವ ಸೃಷ್ಟಿಗೆ ಬಂದಿದ್ದೇನೆ. ಐಎಎಸ್, ಐಪಿಎಸ್ ಓದಿದವರು ನನ್ನ ನಡೆ, ನುಡಿ ಈ ಚುನಾವಣೆಯಲ್ಲಿ ನೋಡಿದ್ದಾರೆ, ಅವರಿಗೆಲ್ಲಾ ನೈತಿಕ ಶಿಕ್ಷಣ ನೀಡಿದ್ದೇನೆ. ಆತ್ಮಸಾಕ್ಷಿಗೆ ವಂಚನೆ ಮಾಡಲ್ಲ. ಲಕ್ಷಾಂತರ ಜನರು, ಸಾವಿರಾರು ವಿದ್ಯಾರ್ಥಿಗಳು ಮುಂದಿನ ನಾಯಕ ಎಂದು ಭಾವಿಸಿದ್ದಾರೆ. ಎಷ್ಟೇ ಅಡ್ಡಗಾಲು ಹಾಕಿದರೂ ವಾಮ ಮಾರ್ಗದಲ್ಲಿ ಹೋಗಲ್ಲ. ಜನರ ಅಭಿಪ್ರಾಯ ಕೇಳಿ ಮುಂದುವರಿಯುತ್ತೇನೆ ಎಂದು ತಿಳಿಸಿದರು.
ಏಕಾಭಿಮುಖ ನಿರ್ಧಾರ ಇಲ್ಲ.
ಭಾರತೀಯ ಚುನಾವಣಾ ಇತಿಹಾಸದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತೇನೆ. 3ಲಕ್ಷ ಮತಗಳು ಸಿಕ್ಕರೆ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದಂತೆ. ಒಂದೂ ರೂಪಾಯಿ ಮುಟ್ಟದೇ ಎರಡು ರಾಷ್ಟ್ರೀಯ ಪಕ್ಷಗಳ ಎದುರು ಹಾಕಿಕೊಂಡು ಸ್ವಾಭಿಮಾನಿಗಳಾಗಿ ನನ್ನ ಪರವಾಗಿ ಮತ ಚಲಾಯಿಸಿದ್ದೀರಾ. ಇವೆರೆಲ್ಲರ ಆಶೀರ್ವಾದ ನನ್ನ ಮೇಲಿದೆ. ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂಬುದು ನನ್ನ ಭಾವನೆ ಎಂದ ಅವರು, ಮುಂಬರುವ ದಿನಗಳಲ್ಲಿ ಪ್ರತಿ ಚುನಾವಣೆಯಲ್ಲಿ ಸ್ಪರ್ಧಿಸೋಣ. ದುಡ್ಡಿನ ಬಲದಿಂದಲ್ಲ. ನಿಮ್ಮ ಗೆಲುವಿಗೆ ನಾನು ಹೋರಾಡುತ್ತೇನೆ, ದುಡಿಯುತ್ತೇನೆ. ಸ್ವಾರ್ಥಿಗಳು, ರಾಕ್ಷಸೀ ಪ್ರವೃತ್ತಿ ಇದ್ದವರು ನನ್ನ ಜೊತೆಗಿದ್ದು ಹೋಗಿದ್ದಾರೆ. ಉಳಿದವರೆಲ್ಲರೂ ಸ್ವಾಭಿಮಾನಿಗಳೇ.ಹೊಸ ರಾಜಕೀಯ ವ್ಯವಸ್ಥೆ ಸೃಷ್ಟಿಸೋಣ. ಅಭಿವೃದ್ದಿ ರಾಜಕಾರಣ ಮಾಡೋಣ ಎಂದು ಹೇಳಿದರು.
ಈ ಬಾರಿ ನಡೆದ ರಾಜ್ಯದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಎರಡು ರಾಷ್ಟ್ರೀಯ ಪಕ್ಷಗಳು ಹಣದ ಹೊಳೆಯನ್ನೇ ಹರಿಸಿವೆ. ಅಂದಾಜಿನ ಪ್ರಕಾರ 28 ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಎರಡೂ ಪಕ್ಷಗಳು ಹತ್ತು ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಮಾಡಿವೆ ಎಂದು ಗಂಭೀರ ಆರೋಪ ಮಾಡಿದ ಅವರು, ಪ್ರವಾಹದ ವಿರುದ್ದ ಈಜಿದ್ದೇವೆ. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ. ಗೆಲುವಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಪೆನ್ ಡ್ರೈವ್ ಬಗ್ಗೆಯೇ ಹೆಚ್ಚು ಚರ್ಚೆಗೆ ಬೇಸರ:
ಇಂದಿನ ದಿನಗಳಲ್ಲಿ ರಾಜಕಾರಣಿಗಳು ಊರಿನ ಜನರು ಅಭಿವೃದ್ಧಿ, ಮಕ್ಕಳ ಶಿಕ್ಷಣದ ಬಗ್ಗೆ ಚರ್ಚೆಯಾಗುತ್ತಿಲ್ಲ. ಪೆನ್ ಡ್ರೈವ್, ಯಾರದ್ದೋ ಬಂಧನ, ಬಿಡುಗಡೆ ಇಂಥ ವಿಚಾರಗಳೇ ರಾಜಕಾರಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ರಾಜಕಾರಣದಲ್ಲಿ ಕೆಳಮಟ್ಟದಿಂದ ಹೋರಾಟ ಮಾಡಿದೆ. ನಾನು ಪಟ್ಟ ಶ್ರಮ ಮತ್ತು ಜನರ ಆಶೀರ್ವಾದದಿಂದ ನನ್ನ ಹೆಸರು ಕಾಂಗ್ರೆಸ್ ಪಕ್ಷದಿಂದ ದೆಹಲಿಗೆ ಹೋಗುತ್ತದೆ. ಕಾಂಗ್ರೆಸ್ ಸದಸ್ಯನಾಗಿದ್ದರಿಂದ, ಪಾದಯಾತ್ರೆ ನಡೆಸಿದ ಕಾರಣ ನನ್ನ ಹೆಸರು ಪ್ರಸ್ತಾಪ ಆಗಿತ್ತು. ನನ್ನ ಹೆಸರು ಶಿಫಾರಸು ಆಗಿತ್ತು. ಶೇಕಡಾ 99ರಷ್ಟು ಜಿಲ್ಲೆಯ ಜನರಿಗೆ ನನಗೆ ಟಿಕೆಟ್ ಸಿಗಬೇಕೆಂಬ ಕನಸು ಇತ್ತು. ಚುನಾವಣೆಯಲ್ಲಿ ರಾತ್ರಿ – ಕತ್ತಲೆ ಆಟದಂತೆ ನನ್ನ ಟಿಕೆಟ್ ಸಹ ತಪ್ಪಿತು. ದೊಡ್ಡ ಕನಸು ಕಾಣಲು ಧೈರ್ಯ ಸಿಕ್ಕಿದ್ದು ನನ್ನ ಅಪ್ಪ ಕೊಡಿಸಿದ ಪುಸ್ತಕಗಳಿಂದ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದವನು. ಹಠ ಹಿಡಿದು ದಾವಣಗೆರೆ ಕ್ಷೇತ್ರದಿಂದಲೇ ಎಂಪಿ ಆಗಬೇಕೆಂಬ ಕನಸು ಕಂಡಿದ್ದೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗೆ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ನಾನೇ ಎಂದು ರಾಜಾರೋಷವಾಗಿ ಸಚಿವರು ಹೇಳಿದ್ದರು. ಬಡತನದಿಂದ ಬಂದು ಸ್ವಂತ ಶಕ್ತಿಯಿಂದ ದಟ್ಟವಾಗಿ ಬೆಳೆದಿದ್ದೇನೆ. ರಾಜಕಾರಣ ಹಾಗೂ ರಾಜಕೀಯ ಪಕ್ಷ ಬಳಸಿಕೊಂಡು ಆಗರ್ಭ ಶ್ರೀಮಂತರಾದವರೇ ಟಿಕೆಟ್ ತಪ್ಪಿಸಿ, ತನ್ನ ಪತ್ನಿಗೆ ಟಿಕೆಟ್ ಕೊಡಿಸಿದರು. ಸಿಎಂ ಕಚೇರಿಯಲ್ಲಿ ಚರ್ಚೆಯಾದಾಗಲೂ ನಿಮಗೆ ಟಿಕೆಟ್ ಇಷ್ಟ ಇಲ್ಲ ಅಂದರೆ ನನಗೆ ಟಿಕೆಟ್ ಕೊಡಿಸಿ ಎಂದೆ. ಆತ್ಮಸಾಕ್ಷಿ ಇಲ್ಲದವರಿಗೆ ದಾವಣಗೆರೆ ಕ್ಷೇತ್ರದ ಮಕ್ಕಳಿಗೆ ಶಿಕ್ಷಣ ಬೇಕಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಣೆ ಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಸೇವೆಗಲ್ಲ, ಪ್ರತಿಷ್ಠೆಗೆ ಬೇಕು ಅಧಿಕಾರ:
ವಿದ್ಯಾಭ್ಯಾಸ ಮುಗಿಸಿದ ನಿರುದ್ಯೋಗಿ ಯುವಕರಿಗೆ, ಶಿಕ್ಷಣ ವಂಚಿತ ಮಕ್ಕಳಿಗೆ ಸಹಾಯ ಮಾಡುವ ಕಳಕಳಿ ಬರಲ್ಲ. ಕುಟುಂಬಕ್ಕೆ ಟಿಕೆಟ್ ತಂದು ಹೊಸ ಯೋಜನೆ ಘೋಷಣೆ ಈಗ ಮಾಡುತ್ತಿದ್ದಾರೆ. ನೀರಾವರಿ ಯೋಜನೆ, ಪ್ರತಿ ಗ್ರಾಮಗಳಿಗೆ ಆ್ಯಂಬುಲೆನ್ಸ್ ಕೊಡಿಸ್ತೇವೆ ಎಂಬುದೂ ಸೇರಿದಂತೆ ಹಲವು ಭರವಸೆ ನೀಡಿದ್ದಾರೆ. 30 ವರ್ಷ ಅಧಿಕಾರ ನಡೆಸಿದವರು ಅಧಿಕಾರ ಇದ್ದಾಗ ಯಾಕೆ ಮಾಡಲಿಲ್ಲ. ಕೇವಲ ಪ್ರತಿಷ್ಠೆಗಾಗಿ ಅಧಿಕಾರ ಬೇಕು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಭಿವೃದ್ಧಿಗೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ದಾವಣಗೆರೆ ಕ್ಷೇತ್ರದಲ್ಲಿ ಭಯದ ವಾತಾವರಣ ಇರುವುದು ನಿಜ. ನನ್ನ ಜೊತೆಗೆ ಇದ್ದವರು ಹೋದದ್ದೇ ಇದಕ್ಕೆ ಸಾಕ್ಷಿ. ನನ್ನ ಜೊತೆಗಿದ್ದವರನ್ನು ಸೈಲೆಂಟ್ ಮಾಡಿಸಿದ್ದಾರೆ. ನನ್ನ ಮನೆಗೆ ಯಾರು ಬರುತ್ತಾರೆ, ಹೋಗುತ್ತಾರೆ ಎಂದು ಗಮನಿಸಿದ್ದಾರೆ. ಸೈಲೆಂಟ್ ಸಪೋರ್ಟ್ ಮಾಡುವವರನ್ನು ಹೆದರಿಸಿದ್ದಾರೆ. ಇದು ಪ್ರಜಾಪ್ರಭುತ್ವ ಅಲ್ಲ. ಸಂವಿಧಾನಕ್ಕೆ ವಿರುದ್ದ ನಡೆದ ಆಶಯ ಎಂದರು.
ಎಲ್ಲರ ಬಗ್ಗೆ ಗೌರವವಿದೆ, ದ್ವೇಷದ ರಾಜಕಾರಣ ಮಾಡಲ್ಲ:
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ನನ್ನ ಜೊತೆ ಉತ್ತಮವಾಗಿ ಮಾತನಾಡಿದ್ದಾರೆ. ಅವರ ಬಗ್ಗೆ ನನಗೇನೂ ದ್ವೇಷ ಇಲ್ಲ. ಅವರಿಗೂ ಸಹ ಇಲ್ಲ. ಗೌರವಯುತವಾಗಿ ಮಾತನಾಡಿದ್ದಾರೆ. ಸಚಿವರೊಂದಿಗೆ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದಾಗಲೂ ವಿನಯವಾಗಿ ಮಾತನಾಡಿದ್ದಾರೆ. ಅವರ ವಿರುದ್ದ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನನ್ನದೇನಿದ್ದರೂ ಸ್ವಾಭಿಮಾನಿ ಹೋರಾಟ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಯುವ ಮುಖಂಡ ಶರತ್ ಕುಮಾರ್, ರಂಗಸ್ವಾಮಿ, ಅಹಿಂದ ಮುಖಂಡರಾದ ಕೃಷ್ಣಪ್ಪ, ಮಂಜಪ್ಪ, ರಾಜು ಮೌರ್ಯ, ಷಣ್ಮುಖಪ್ಪ, ಮುತ್ತಿಗೆ ಜಂಬಣ್ಣ, ಗೌರಿಪುರ ನಾಗರಾಜ್, ರವಿ, ಸೇರಿದಂತೆ ಹರಪನಹಳ್ಳಿ, ಜಗಳೂರು, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ, ಜಗಳೂರು, ದಾವಣಗೆರೆಯಿಂದ ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತುಳಿಯಲು ಯತ್ನಿಸಿದ್ದಾಗ ಮೇಲೆ ಬಂದಿದ್ದೇನೆ
ನನ್ನನ್ನು ತುಳಿಯಲು ಯತ್ನಿಸಿದಾಗಲೆಲ್ಲಾ, ಅಪಪ್ರಚಾರ ನಡೆಸಿದಾಗಲೆಲ್ಲಾ ಮೇಲೆ ಬಂದಿದ್ದೇನೆ. ಲಕ್ಷಾಂತರ ಜನರ ಕನಸು, ಅಪೇಕ್ಷೆ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳು, ಸಚಿವರು ಆತ್ಮಸಾಕ್ಷಿಗೆ ವಿರುದ್ಧವಾಗಿ ನನ್ನ ವಿರುದ್ಧ ಪ್ರಚಾರ ನಡೆಸಿದ್ದಾರೆ. ಅಪಾರ ಜನಬೆಂಬಲ ಇದ್ದವರು, ಪಕ್ಷದ ತತ್ವ, ಸಿದ್ಧಾಂತದ ಹೆಸರಿನಲ್ಲಿ ಬಂದು ಬೇರೆಯವರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆ. ಸಾವಿರಾರು ಟೀಕೆ, ವಿರೋಧ, ಒತ್ತಡ ಬಂದರೂ ಮುಂದೆ ಬಂದಿದ್ದೇವೆ. ಮುಂದೆಯೂ ಮುಂದುವರಿಯುತ್ತೇವೆ. ಹಿಂದೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ.
ಜಿ. ಬಿ. ವಿನಯ್ ಕುಮಾರ್, ಪಕ್ಷೇತರ ಅಭ್ಯರ್ಥಿ
ನಾಲ್ಕು ಕ್ಷೇತ್ರಗಳಲ್ಲಿ ಒತ್ತಡವಿದೆ
ಹರಿಹರ, ಹೊನ್ನಾಳಿ, ದಾವಣಗೆರೆ ದಕ್ಷಿಣ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಇದೆ. ಚುನಾವಣೆಗೆ ಇನ್ನು ನಾಲ್ಕು ವರ್ಷ ಇದೆ. ಪಕ್ಷದಿಂದ ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೂ ಕಣಕ್ಕಿಳಿಯುತ್ತೇನೆ. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ನಿಮ್ಮ ಜೊತೆ ಚರ್ಚಿಸುತ್ತೇನೆ. ಏಕಮುಖ ನಿರ್ಧಾರ ತೆಗೆದುಕೊಳ್ಳುವುದಿಲ್ಲ.
ಜಿ. ಬಿ. ವಿನಯ್ ಕುಮಾರ್, ಪಕ್ಷೇತರ ಅಭ್ಯರ್ಥಿ
ಮಾನಸಿಕ, ನೈತಿಕ ಗೆಲುವು ಸಿಕ್ಕಿದೆ
ಪ್ರಜಾಪ್ರಭುತ್ವದ ಮಹಾಯುದ್ಧದಲ್ಲಿ ಈಗಾಗಲೇ ಮಾನಸಿಕ, ನೈತಿಕ ಗೆಲುವು ಲೋಕಸಭೆ ಚುನಾವಣೆಯಲ್ಲಿ ಸಿಕ್ಕಿದೆ. ಶೇಕಡಾ 20ರಿಂದ 30ರಷ್ಟು ರಾಜಕೀಯ ಪ್ರಜ್ಞೆ ಮೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಶೇಕಡಾ 65ರಿಂದ 70 ರಷ್ಟು ಮಂದಿಯಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಬೇಕಿದೆ.
ಮುಸ್ಲಿಂ ಸಮುದಾಯ ವೋಟ್ ಬ್ಯಾಂಕ್ ಆಗಿ ಬಳಕೆಯಾಗುತ್ತಿದೆ. ಆಜಾದ್ ನಗರಕ್ಕೆ ಹೋಗಿ ಅಲ್ಪಸಂಖ್ಯಾತರ ಮಕ್ಕಳ ಬೆಳೆಸಬೇಕು. ಎಸ್ಸಿ, ಎಸ್ಟಿ, ಬಂಜಾರ ಮಕ್ಕಳು ಅಧಿಕಾರಿಗಳಾಗಬೇಕು ಎಂಬ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತೇನೆ. ಮುಸ್ಲಿಂ ಸಮುದಾಯದವರ ಮತ ಬಾರದಿದ್ದರೂ ಅವರ ಶೈಕ್ಷಣಿಕ, ಸಾಮಾಜಿಕ ಸದೃಢತೆ ಜಾಗೃತಿ ಮೂಡಿಸುತ್ತೇನೆ.
ಜಿ. ಬಿ. ವಿನಯ್ ಕುಮಾರ್, ಪಕ್ಷೇತರ ಅಭ್ಯರ್ಥಿ
ಐಎಎಸ್ ಸಂಸ್ಥೆ ಆರಂಭ:
ದಾವಣಗೆರೆಯಲ್ಲಿ ಇನ್ನು ಮೂರು ತಿಂಗಳಿನಲ್ಲಿ ಸುಸಜ್ಜಿತವಾದ ಐಎಎಸ್ ಸಂಸ್ಥೆ ಆರಂಭಿಸುತ್ತೇನೆ. ಈ ಮೂಲಕ ಬಡವರ ಮಕ್ಕಳೂ ಉನ್ನತ ಅಧಿಕಾರಿಗಳಾಗಬಹುದು ಎಂಬುದನ್ನು ತೋರಿಸಿಕೊಡುತ್ತೇನೆ. ನಾನು ಓಡಾಡಲು ಶುರು ಮಾಡಿದ ಮೇಲೆ ಅಧಿಕಾರದಲ್ಲಿದ್ದವರು ಓಡಾಡಲು ಶುರು ಮಾಡಿದ್ದಾರೆ. ಜಿಲ್ಲೆಯ ಹಳ್ಳಿಗಳಿಗೆ ಭೇಟಿ ನೀಡಿದ ಮೇಲೆ ಅವರೂ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನಾನು ಯಾರ ವಿರುದ್ಧವೂ ಇಲ್ಲ. ಯಾವ ಪಕ್ಷಗಳ ದ್ವೇಷಿಯೂ ಅಲ್ಲ. ಗ್ರಾಮಗಳು ಅಭಿವೃದ್ಧಿಯಾಗಬೇಕು, ಜನಸೇವೆ ಮಾಡಬೇಕೆಂಬ ಕಲ್ಪನೆ ನನ್ನದು. ದ್ವೇಷ ರಹಿತ, ದುಡ್ಡು ರಹಿತ ರಾಜಕಾರಣ ಮಾಡೋಣ.
ಜಿ. ಬಿ. ವಿನಯ್ ಕುಮಾರ್, ಪಕ್ಷೇತರ ಅಭ್ಯರ್ಥಿ