SUDDIKSHANA KANNADA NEWS/DAVANAGERE/DATE:22_11_2025
ದಾವಣಗೆರೆ: ದಾವಣಗೆರೆಯ ಜೆಡಿಎಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಟಿ. ಅಸ್ಗರ್ ಕೊಲೆಗೆ ಯತ್ನಿಸಿದ್ದ ಆರೋಪಿಗೆ ನೆರವು ನೀಡಿದ್ದ ಆರೋಪದ ಮೇರೆಗೆ ನಟಿ ಕಂ ಕಾಂಗ್ರೆಸ್ ನಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ವಾಹನ ಸವಾರರಿಗೆ ಗುಡ್ ನ್ಯೂಸ್: ಸಂಚಾರಿ ಇ-ಚಲನ್ ಪ್ರಕರಣಗಳಲ್ಲಿ ದಂಡ ಪಾವತಿಸಿದ್ರೆ ಶೇ.50ರಷ್ಟು ರಿಯಾಯಿತಿ!
ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ನಾಯಕಿ ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಸವಿತಾ ಮಲ್ಲೇಶ್ ನಾಯ್ಕ್ ಬಂಧಿತರು. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಲು ಯತ್ನಿಸಿದ ರೌಡಿಶೀಟರ್ ಗೆ ಸಹಕಾರ ನೀಡಿದ್ದು ಖಚಿತವಾದ ಕಾರಣಕ್ಕೆ ಬಂಧಿಸಲಾಗಿದೆ.
ಘಟನೆ ಹಿನ್ನೆಲೆ:
ಕಳೆದ ನವೆಂಬರ್ 10ರಂದು ಟಿಪ್ಪು ಜಯಂತಿ ವೇಳೆ ಸಾಮಾಜಿಕ ಹೋರಾಟಗಾರ ಹಾಗೂ ಜೆಡಿಎಸ್ ಮುಖಂಡ ಟಿ. ಅಸ್ಗರ್ ಅವರ ಮೇಲೆ ಕಾಂಗ್ರೆಸ್ ಮುಖಂಡ ಖಾಲಿದ್ ಪೈಲ್ವಾನ್ ಚಾಕುವಿನಿಂದ ಇರಿದಿದ್ದ. ಗಾಯಗೊಂಡಿದ್ದ ಅಸ್ಗರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಅಸ್ಗರ್ ಕೊಲಗೆ ಯತ್ನಿಸಿದ ಆರೋಪಿ ಖಾಲೀದ್ ಪೈಲ್ವಾನ್ ಗೆ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಸಹಾಯ ಮಾಡಿದ್ದು ತನಿಖೆಯಿಂದ ಗೊತ್ತಾಗಿದೆ. ಆಶ್ರಯ ನೀಡಿದ್ದಲ್ಲದೇ, ಹಣಕಾಸಿನ ನೆರವು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸವಿತಾ ಮಲ್ಲೇಶ್ ನಾಯ್ಕ್ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಟಿಕೆಟ್ ಬಯಸಿದ್ದರು. ಕೊನೆ ಹಂತದವರೆಗೂ ಪ್ರಯತ್ನ ಮಾಡಿದ್ದರು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಕೆ. ಎಸ್. ಬಸವಂತಪ್ಪರಿಗೆ ಟಿಕೆಟ್ ನೀಡಿತ್ತು. ಇದರಿಂದ ಬೇಸರಗೊಂಡು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು. ಬಳಿಕ ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದರು.
ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದರು. ಪ್ರತಿಭಟನೆ, ಸಭೆ ಸೇರಿದಂತೆ ಆಗಾಗ್ಗೆ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ ಸಹಾಯ ಮಾಡಿದ್ದರಿಂದ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ. ಸದ್ಯ ಜೈಲಿನಲ್ಲಿ ಕಾಂಗ್ರೆಸ್ ನಾಯಕಿ ಕಂಬಿ ಎಣಿಸುತ್ತಿದ್ದಾರೆ.






Leave a comment