SUDDIKSHANA KANNADA NEWS/DAVANAGERE/DATE:22-04-2024
ದಾವಣಗೆರೆ (Davanagere): : ತಾತ ಜಿ. ಮಲ್ಲಿಕಾರ್ಜುನಪ್ಪರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಚಿಕ್ಕವಳು. ಆಮೇಲೆ ತಂದೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಚುನಾವಣೆಗೆ ನಿಂತಾಗ ಓಡಾಡಿದ್ದೆ. ಈಗ ಅಮ್ಮನ ಪರ ಪ್ರಚಾರ ಮಾಡುತ್ತಿದ್ದೇನೆ. ಬಿಸಿಲಿನ ಝಳ, ಧಗೆ ನಡುವೆಯೂ ತಾಯಿ ಗಾಯಿತ್ರಿ ಸಿದ್ದೇಶ್ವರ ಅವರು ಓಡಾಡುತ್ತಿರುವುದು ನಮಗೆಲ್ಲರಿಗೂ ಮಾದರಿ. ಹೋದ ಕಡೆಗಳಲ್ಲಿ ಅನ್ನಪೂರ್ಣೇಶ್ವರಿ ಅಂತಾನೇ ಜನರು ಸ್ವಾಗತ ಮಾಡುತ್ತಿದ್ದಾರೆ. ಇದು ತುಂಬಾನೇ ಖುಷಿ ತಂದಿದೆ. ಲೋಕಸಭೆ ಚುನಾವಣೆಯಲ್ಲಿ ತಾಯಿ ಗೆಲ್ಲುವುದು ಖಚಿತ.
ಇದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹಾಗೂ ತಾಯಿ ಗಾಯಿತ್ರಿ ಸಿದ್ದೇಶ್ವರರ ಪುತ್ರಿ ಜಿ. ಎಸ್. ಅಶ್ವಿನಿ ಅವರು ವ್ಯಕ್ತಪಡಿಸಿದ ವಿಶ್ವಾಸ. ನವದೆಹಲಿಯಲ್ಲಿ ವಾಸವಿದ್ದರೂ ತಾಯಿ ಗಾಯಿತ್ರಿ ಸಿದ್ದೇಶ್ವರ ಅವರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ದಾವಣಗೆರೆಗೆ ಬಂದಿದ್ದಾರೆ. ಅಂದಿನಿಂದಲೂ ಇಂದಿನವರೆಗೂ ಹಗಲು ರಾತ್ರಿ ತಾಯಿ ಜೊತೆ ಪ್ರಚಾರ ನಡೆಸುತ್ತಿದ್ದಾರೆ. ಅಮ್ಮನ ಗೆಲುವಿಗೆ ಪುತ್ರಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಈ ಬ್ಯುಸಿ ನಡುವೆ ಸುದ್ದಿಕ್ಷಣ ಮೀಡಿಯಾ ಜೊತೆ ಮಾತನಾಡಿದರು. ಸಂಪೂರ್ಣ ವಿವರ ಇಲ್ಲಿದೆ.
ಲೋಕಸಭೆ ಚುನಾವಣೆ ಬಗ್ಗೆ…?
ಜಿ. ಎಸ್. ಅಶ್ವಿನಿ:
ತಾತನ ಕಾಲದಿಂದಲೂ ಲೋಕಸಭೆ ಚುನಾವಣೆ ನೋಡುತ್ತಿದ್ದೇನೆ. ಹತ್ತಿರದಿಂದಲೇ ಕಂಡಿದ್ದೇನೆ. ಆಗ ಮತ್ತು ಈಗ ಹೋಲಿಕೆ ಮಾಡಿದರೆ ಏನೂ ವ್ಯತ್ಯಾಸ ಕಾಣುತ್ತಿಲ್ಲ. ತಾತ ಚುನಾವಣೆಗೆ ನಿಂತಾಗ ನಾನಿನ್ನು ಚಿಕ್ಕವಳು. ಆಗಲೇ ಚುನಾವಣೆ ಬಂದಾಗ ಎಲ್ಲರೂ ಓಡಾಡುತ್ತಿದ್ದರು. ಸಭೆ ನಡೆಸುತ್ತಿದ್ದರು. ಪ್ರಚಾರಕ್ಕೆ ಹೋಗುತ್ತಿದ್ದರು. ಹಾಗಾಗಿ ಚುನಾವಣೆ ಬಂದಾಗ ನಡೆಯುವ ಸಹಜ ಪ್ರಕ್ರಿಯೆ ಎಂದೆನಿಸುತ್ತದೆ.
ಬಿಸಿಲಿನಲ್ಲಿ ಪ್ರಚಾರ ಕಷ್ಟವಾಗಲ್ವಾ…?
ಜಿ. ಎಸ್. ಅಶ್ವಿನಿ:
ಈ ಬಾರಿಯ ಭಾರೀ ಬಿಸಿಲಿದೆ. ಮನೆಯಿಂದ ಹೊರಗಡೆ ಹೋಗುವುದು ಕಷ್ಟ. ಆದರೂ ಪ್ರಚಾರ ಮಾಡಲೇಬೇಕು. ತಾಯಿ ಈ ವಯಸ್ಸಿನಲ್ಲಿಯೂ ಓಡಾಡುತ್ತಿರುವ ಪರಿ, ಅವರಲ್ಲಿರುವ ಹುಮ್ಮಸ್ಸು ರಾತ್ರಿಯಾದರೂ ಕಳೆಗುಂದಿರುವುದಿಲ್ಲ. ಅಷ್ಟು ಉತ್ಸಾಹಭರಿತರಾಗಿ ಪ್ರಚಾರ ನಡೆಸುತ್ತಾರೆ. ಹೋದ ಕಡೆಗಳಲ್ಲಿ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸ, ಜನರು ಬರಮಾಡಿಕೊಳ್ಳುತ್ತಿರುವ ಪರಿ ಗಾಯಿತ್ರಿ ಸಿದ್ದೇಶ್ವರ ಅವರಿಗೆ ಮತ್ತಷ್ಟು ಚೈತನ್ಯ ತಂದಿದೆ. ಹುಮ್ಮಸ್ಸು ತಂದಿದೆ.
ಅಮ್ಮನ ಪರಿಚಯ…?
ಜಿ. ಎಸ್. ಅಶ್ವಿನಿ:
ಕಳೆದ 30 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿ ನಮ್ಮ ಕುಟುಂಬವಿದೆ. ತಾತನ ಬಗ್ಗೆ ಮೊದಲು ಜನರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಚುನಾವಣೆಗೆ ಸ್ಪರ್ಧಿಸಿದ ಬಳಿಕ ಚಿರಪರಿಚಿತರಾದರು. ತಾತ ನಿಧನ ನಂತರ ಅಪ್ಪಾಜಿ ಸಿದ್ದೇಶ್ವರ ಅವರು ಸ್ಪರ್ಧೆ ಮಾಡಿದರು. ಆಗ ತಾತ ಎಲ್ಲರಿಗೂ ಗೊತ್ತಿದ್ದ ಕಾರಣ ಸಮಸ್ಯೆ ಆಗಲಿಲ್ಲ. ತಂದೆಯೂ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಅಮ್ಮ ಸಹ ಅಪ್ಪಾಜಿಗೆ ಬೆನ್ನುಲುಬಾಗಿ ನಿಂತವರು. ಚುನಾವಣೆ ವೇಳೆಯಲ್ಲಿ ಪ್ರಚಾರ ನಡೆಸಿದವರು. ಅಮ್ಮ ಸಹ ಪರಿಚಯ ಇದ್ದರು. ಈಗ ಅವರೇ ಅಭ್ಯರ್ಥಿಯಾಗಿರುವ ಕಾರಣ ಹೆಚ್ಚು ಪರಿಚಿತವಾಗಿದ್ದಾರೆ. ಮೊದಲಿನಿಂದಲೂ ಚುನಾವಣೆಯಲ್ಲಿ ತಂದೆ ಗೆಲುವಿಗೆ ಶ್ರಮಿಸಿದ್ದಾರೆ.
ತಾಯಿ ಗೆಲ್ಲುತ್ತಾರೆ ಯಾಕಂದ್ರೆ…?
ಜಿ. ಎಸ್. ಅಶ್ವಿನಿ:
ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕಾಗಿ ಬಂದ ಬಳಿಕ ಭಾರತ ದೇಶ ಅಭಿವೃದ್ಧಿ ಹೊಂದಿದೆ. ಇಡೀ ದೇಶ ಮಾತ್ರವಲ್ಲ, ವಿಶ್ವವೇ ಮೋದಿ ಅವರ ಸಾಧನೆಗಳನ್ನು ಕೊಂಡಾಡುತ್ತಿದೆ. ಮೋದಿ ಅವರ ಬಲ ಮತ್ತೊಂದೆಡೆ ತಂದೆ ಸಿದ್ದೇಶ್ವರ ಅವರ 20 ವರ್ಷದ ಸಾಧನೆಗಳು ನಮ್ಮ ಗೆಲುವಿಗೆ ಸಹಾಯವಾಗಲಿದೆ. ತಂದೆಯೂ ಓಡಾಡುತ್ತಿದ್ದಾರೆ. ತಾಯಿಯನ್ನು ಹೋದ ಕಡೆಗಳಲ್ಲಿ ಅನ್ನಪೂರ್ಣೇಶ್ವರಿ ಅಂತಾನೇ ಕರೆಯುತ್ತಾರೆ. ಆರತಿ ತೆಗೆದು ಮನೆ ಮಗಳಂತೆ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು, ಮುಖಂಡರು, ಮಾಜಿ ಶಾಸಕರು, ಹಾಲಿ ಶಾಸಕರು ಸೇರಿದಂತೆ ಎಲ್ಲರೂ ತಾಯಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.
ಬಂಡಾಯದ ಬಿಸಿ ಇದೆಯಾ…?
ಜಿ. ಎಸ್. ಅಶ್ವಿನಿ:
ಟಿಕೆಟ್ ಸಿಗಲಿಲ್ಲ ಎಂದಾಗ ಸಣ್ಣಪುಟ್ಟ ಸಮಸ್ಯೆಗಳು ಆಗುವುದು ಸರ್ವೇ ಸಾಮಾನ್ಯ. ಈಗ ಎಲ್ಲವೂ ಸರಿ ಹೋಗಿದೆ. ಎಲ್ಲರೂ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ತಂದೆ ಕಳೆದ 20 ವರ್ಷಗಳಲ್ಲಿ ಸೋಲನ್ನೇ ಕಂಡಿಲ್ಲ. ನಾಲ್ಕು ಬಾರಿ ಸಂಸದರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ.
ಹೇಗಿದೆ ಟ್ರೆಂಡ್…?
ಜಿ. ಎಸ್. ಅಶ್ವಿನಿ:
ನಾನು ಪ್ರಚಾರಕ್ಕೆ ಹೋಗುತ್ತಿದ್ದೇನೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಪರ ಅಲೆ ಇದೆ. ಹೋದ ಕಡೆಗಳಲ್ಲಿ ದೇಶಕ್ಕೆ ನರೇಂದ್ರ, ದಾವಣಗೆರೆಗೆ ಗಾಯಿತ್ರಿ ಸಿದ್ದೇಶ್ವರ ಎಂಬ ಘೋಷಣೆ ಮೊಳಗುತ್ತಿವೆ. ದೇಶದ ಅಭಿವೃದ್ಧಿಗೆ ಮೋದಿ ಅವರು ಪ್ರಧಾನಿ ಆಗಬೇಕು. ದಾವಣಗೆರೆ ಅಭಿವೃದ್ಧಿಗೆ ಬಿಜೆಪಿಯ ಗಾಯಿತ್ರಿ ಸಿದ್ದೇಶ್ವರ್ ಅವರು ಗೆಲ್ಲಬೇಕೆಂಬುದು ಜಿಲ್ಲೆಯ ಜನರ ಅಪೇಕ್ಷೆ. ಹಾಗಾಗಿ, ಈ ಬಾರಿಯೂ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸ ಇದೆ.
ನೀವು ಮತ ಹಾಕುವುದು ಎಲ್ಲಿ..?
ನನ್ನ ಮತ ದಾವಣಗೆರೆಯಲ್ಲಿಯೇ ಇಲ್ಲಿದೆ. ಇಲ್ಲೇ ಮತ ಚಲಾಯಿಸುತ್ತೇನೆ. ಜನರ ಅಪೇಕ್ಷೆ ಇದೆ. ಬಿಜೆಪಿ ಮತ್ತೆ ಗೆಲ್ಲಬೇಕು. ದೇಶದ ಸದೃಢತೆ, ಅಭಿವೃದ್ಧಿಗೆ ಜನರ ಮುಂದಿರುವ ಏಕೈಕ ಆಯ್ಕೆ ಬಿಜೆಪಿ. ಈ ಕಾರಣಕ್ಕೆ ಗೆಲ್ಲುತ್ತೇವೆ. ತಾಯಿ ಲೋಕಸಭಾ ಸದಸ್ಯರಾಗುತ್ತಾರೆ ಎಂಬ ಅಚಲವಾದ ನಂಬಿಕೆ ಇದೆ.
ಪತಿ ಬಗ್ಗೆ…?
ಜಿ. ಎಸ್. ಅಶ್ವಿನಿ:
ದೆಹಲಿಯಲ್ಲಿ ನನ್ನ ಪತಿ ಡಾ. ಕೆ. ಜೆ. ಶ್ರೀನಿವಾಸ್ ಅವರು ಭಾರತ ದೇಶದ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದರು. ಈಗ ವಿದೇಶಾಂಗ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಇಲ್ಲಿಗೆ ಬರಲು ಅವರೇ ಕಳುಹಿಸಿಕೊಟ್ಟಿದ್ದು. ತಾಯಿ ಪರ ವಾಗಿ ಪ್ರಚಾರ ನಡೆಸುತ್ತಿದ್ದು, ನನಗೂ ತಂದೆ, ತಾಯಿ, ತಾತನಿಗೆ ನೀಡುತ್ತಿದ್ದ ಪ್ರೀತಿ, ವಿಶ್ವಾಸವನ್ನು ಮತದಾರರು ತೋರಿಸುತ್ತಿದ್ದಾರೆ.
ಕುಟುಂಬ ರಾಜಕಾರಣದ ಬಗ್ಗೆ…?
ಜಿ. ಎಸ್. ಅಶ್ವಿನಿ:
ಕುಟುಂಬ ರಾಜಕಾರಣ ಕೇವಲ ನಮ್ಮ ಮನೆಯಲ್ಲಿ ಅಷ್ಟೇ ಅಲ್ಲ. ಎಲ್ಲಾ ಕಡೆ ಇದೆ. ಕಾಂಗ್ರೆಸ್ ನಲ್ಲಿ ಶಾಮನೂರು ಶಿವಶಂಕರಪ್ಪರು ಹಿರಿಯ ಶಾಸಕರು. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಚಿವರು. ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಈಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಇದು ತಾಯಿ – ಮಗಳು ಎಂಬ ಸ್ಪರ್ಧೆಗಿಂತ ಹೆಚ್ಚಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಫೈಟ್. ಈ ಚುನಾವಣೆಯಲ್ಲಿ ತಾಯಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ.