SUDDIKSHANA KANNADA NEWS/ DAVANAGERE/ DATE:01-06-2023
ಬೆಂಗಳೂರು: ಐದು ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಲು ವಿಶೇಷ ಸಚಿವ ಸಂಪುಟ ಸಭೆ (SPECIAL CABINET MEETING) ನಡೆಸಿದ ಸಿಎಂ ಸಿದ್ದರಾಮಯ್ಯ (CM SIDDARAMAI), ನಾವು ಬಹಳ ಸುದೀರ್ಘವಾಗಿ ಐದು ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿದ್ದೀವಿ. ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಐದು (FIVE) ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಕೊಡಬೇಕೆಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಜಾತಿ, ಧರ್ಮ, ಯಾವುದೇ ಭಾಷೆ ಸೇರಿದಂತೆ ಇದ್ಯಾವುದೂ ಇಲ್ಲದೇ ಕರ್ನಾಟಕದ ಜನತೆಗೆ ಈ ಗ್ಯಾರಂಟಿಗಳನ್ನು ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.
ಜುಲೈನಿಂದ ಫ್ರೀ… ಫ್ರೀ…!
ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತವಾಗಿ ನೀಡುತ್ತೇವೆ. ಎಲ್ಲರಿಗೂ ವಿದ್ಯುತ್ ಅನ್ನು ಕೊಡುತ್ತೇವೆ ಎಂಬ ವಾಗ್ದಾನ ಕೊಟ್ಟಿದ್ದೇವೆ. ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡಲು ತೀರ್ಮಾನಿಸಿದ್ದೇವೆ. 70 ಯೂನಿಟ್ ಬಳಕೆ
ಮಾಡಿದರೂ ಫ್ರೀ. ಹನ್ನೆರಡು ತಿಂಗಳಿನಲ್ಲಿ ಎಷ್ಟು ವಿದ್ಯುತ್ ಬಳಕೆ ಮಾಡಿದ್ದಾರೆ ಎಂಬ ಮಾಹಿತಿ ಪಡೆಯುತ್ತೇವೆ. 200 ಯೂನಿಟ್ ವಿದ್ಯುತ್ ಕಡಿಮೆ ಬಳಕೆ ಮಾಡಿದವರು ಕರೆಂಟ್ ಬಿಲ್ ಕಟ್ಟುವ ಹಾಗಿಲ್ಲ. 199 ಯೂನಿಟ್ ವಿದ್ಯುತ್ ಬಳಕೆ ಮಾಡಿದರೂ ಬಿಲ್ ಕಟ್ಟುವ ಹಾಗಿಲ್ಲ. 12 ತಿಂಗಳ ಸರಾಸರಿ ತೆಗೆದುಕೊಂಡು ಅದರ ಮೇಲೆ ಶೇಕಡಾ 10ರಷ್ಟು ಮಾಹಿತಿ ಸಂಗ್ರಹಿಸುತ್ತೇವೆ. ವರ್ಷದಲ್ಲಿ ಬಳಕೆ ಮಾಡಿದ ವಿದ್ಯುತ್ ಅನ್ನು ಖರ್ಚು ಮಾಡಿದ ಆಧಾರದ ಮೇಲೆ ಬಿಲ್ ಬರುತ್ತೆ. ಅದರ ಮೇಲೆ ಶೇಕಡಾ 10ರಷ್ಟು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದರು.
ಕಾಲಾವಧಿಯೊಳಗೆ ಬಿಲ್ ಪಾವತಿಸಲೇಬೇಕು:
ಜುಲೈ 1 ರಿಂದ ಆಗಸ್ಟ್ ತಿಂಗಳವರೆಗೆ ಖರ್ಚು ಮಾಡುತ್ತಾರೆ. ಅಲ್ಲಿಂದ ಬಿಲ್ ಶುರುವಾಗುತ್ತದೆ. ಜುಲೈನಲ್ಲಿ ಬಳಸಿದ ವಿದ್ಯುತ್ ಫ್ರೀ. ಇದು ಮೊದಲನೇ ಭರವಸೆ ಈಡೇರಿಸಿದ್ದೇವೆ. ಇಲ್ಲಿಯವರೆಗೆ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಅನ್ನು ಸರ್ಕಾರ ಕಟ್ಟುವುದಿಲ್ಲ. ಅದನ್ನು ಜನರೇ ಕಟ್ಟಬೇಕು. ಬಿಲ್ ಅನ್ನು ಪಾವತಿಸಲೇಬೇಕು. ಕಾಲವಾಕಾಶ ಕೊಡುತ್ತಾರೆ. ಕಾಲಮಿತಿಯೊಳಗೆ ಪಾವತಿಸಲೇಬೇಕು ಎಂದು ತಿಳಿಸಿದರು.
2 ಸಾವಿರ ರೂ. ಪಡೆಯಬೇಕಾ? ಈ ದಾಖಲೆ ಒದಗಿಸಲೇಬೇಕು…!
ಗ್ಯಾರಂಟಿ ನಂಬರ್ 2 ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಕೊಡಲು ತೀರ್ಮಾನ ಮಾಡಿದ್ದೇವೆ. ಆದ್ರೆ, ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಒದಗಿಸಬೇಕು. ಮನೆ ಯಜಮಾನಿಯ ಅಕೌಂಟ್ ಗೆ ತಿಂಗಳಿಗೆ 2 ಸಾವಿರ ರೂಪಾಯಿ ಜಮಾ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದೇವೆ. ಅಕೌಂಟ್ ನಂಬರ್, ಆಧಾರ್ ಕಾರ್ಡ್, ಅಪ್ಲಿಕೇಶನ್ ಕೊಡಬೇಕು. ಜೂನ್ 15ರಿಂದ ಜುಲೈ 15ರೊಳಗೆ ಮಾಹಿತಿ ನೀಡಬೇಕು. ಆನ್ ಲೈನ್ ಮೂಲಕ ಅರ್ಜಿ ಹಾಕಬೇಕು. ಜುಲೈ 15 ರಿಂದ ಆಗಸ್ಟ್ 15ರೊಳಗೆ ಫಲಾನುಭವಿಗಳ ಪಟ್ಟಿ ಮಾಡಿ, ಆಗಸ್ಟ್ 15ಕ್ಕೆ ಅಕೌಂಟ್ ಹಣ ಜಮಾ ಮಾಡುತ್ತೇವೆ ಎಂದು ತಿಳಿಸಿದರು.
ಕೊಟ್ಟಂತ ಮಾಹಿತಿ ಆಧಾರದ ಮೇಲೆ ಅಕೌಂಟ್ ನಂಬರ್, ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತದೆ. ಈ ತಿಂಗಳಿನಿಂದ ಜಾರಿ ಬರಲ್ಲ. ಮುಂದಿನ ತಿಂಗಳಿನಿಂದ ಜಾರಿಗೆ ಬರುತ್ತದೆ. ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಪಡೆಯುತ್ತೇವೆ. ಸೋಷಿಯಲ್ ಸೆಕ್ಯುರಿಟಿ ಪೆನ್ಶನ್ ಅನ್ನು ಪಡೆಯುತ್ತಿರುವವರಿಗೂ ಮನೆ ಯಜಮಾನಿಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎಂದರು.
ಆಗಸ್ಟ್ 15ಕ್ಕೆ ನಿಮ್ಮ ಅಕೌಂಟ್ ಗೆ ಬರುತ್ತೆ ಹಣ:
ಆಗಸ್ಟ್ 15ರ 76ನೇ ಸ್ವಾತಂತ್ರ್ಯ ದಿನಾಚರಣೆ ದಿನ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಪ್ರತಿ ತಿಂಗಳು ಜಮಾ ಮಾಡುತ್ತೇವೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಮನೆ ಯಜಮಾನಿಗೆ ನೀಡುತ್ತೇವೆ ಎಂದು ಪ್ರಕಟಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭ ಹಾಗೂ ಅದಕ್ಕಿಂತ ಮುಂಚಿತವಾಗಿ ಪಕ್ಷದ ವತಿಯಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಐದು ಗ್ಯಾರಂಟಿ ಘೋಷಣೆ ಮಾಡಿ ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಗ್ಯಾರಂಟಿ ಕಾರ್ಡ್ ಗಳಿಗೆ ಸಹಿಯನ್ನು ಹಾಕಿದ್ದೆವು. ಗ್ಯಾರಂಟಿಯಾಗಿ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ, ಜನರಿಗೆ ತಲುಪಿಸುತ್ತೇವೆ ಎಂಬ ಮಾತುಗಳನ್ನು ಗ್ಯಾರಂಟಿ ಕಾರ್ಡ್ ಗಳನ್ನು ಕಾರ್ಯಕರ್ತರಿಗೆ ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ್ದೆವು. ವಿರೋಧ ಪಕ್ಷದವರು ಕುಹಕ ಮಾತು ಆಡಿದ್ದಾರೆ. ಮಾಧ್ಯಮದವರು ಅವರಿಗೆ ಅನಿಸಿದ್ದನ್ನು ಬರೆದಿದ್ದಾರೆ. ಅದಕ್ಕೆ ತಕರಾರಿಲ್ಲ. ಊಹಾಪೋಹ ಮಾಡಿದ್ದೀರಿ. ತಕರಾರು ಮಾಡಿದ್ದೀರಿ. ಕ್ಯಾಬಿನೆಟ್ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ಜನರಿಗೆ ತಿಳಿಸುವ ಕೆಲಸ ಮಾಡಿ ಎಂದರು.
ಸರ್ಕಾರ ರಚನೆಯಾದ ವೇಳೆ ನಾನು ಮುಖ್ಯಮಂತ್ರಿಯಾಗಿ, ಡಿಸಿಎಂ ಆಗಿ ಡಿ. ಕೆ. ಶಿವಕುಮಾರ್, ಎಂಟು ಸಚಿವರು ಪ್ರಮಾಣ ವಚನ ಸ್ವೀಕರಿಸಿದೆವು. ಅಂದೇ ಮೊದಲ ಕ್ಯಾಬಿನೆಟ್ ನಲ್ಲಿ ಐದು ಗ್ಯಾರಂಟಿ ಜಾರಿ ಮಾಡಲು ಒಪ್ಪಿಗೆ ನೀಡಿದ್ದೆವು ಎಂದು ಹೇಳಿದರು.
ಜುಲೈ ತಿಂಗಳಿನಲ್ಲಿ ತಲಾ 10 ಕೆಜಿ ನೀಡುತ್ತೇವೆ:
ಈಗಾಗಲೇ ಆಹಾರ ಸರಬರಾಜು ಮಾಡಲಾಗಿದೆ. ಸಂಗ್ರಹ ಇಲ್ಲದೇ ಇರುವುದರಿಂದ ಜುಲೈ 1 ರಿಂದ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಆಹಾರ ಧಾನ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ತಲಾ 10 ಕೆಜಿ ಕೊಡುತ್ತೇವೆ. ಬಡತನ ರೇಖೆಗಿಂತ ಕೆಳಗೆ ಇರುವವರಿಗೂ ಮುಂದಿನ ತಿಂಗಳಿನಿಂದ ನಾವು ಕೇಂದ್ರ ಭಂಡಾರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ತೆಗೆದುಕೊಂಡು ಹತ್ತು ಕೆಜಿ ಕೊಡುತ್ತೇವೆ ಎಂದು ಘೋಷಿಸಿದರು.
ಜೂನ್ 11ಕ್ಕೆ ಶಕ್ತಿ ಯೋಜನೆ:
ಈ ತಿಂಗಳ 11 ನೇ ತಾರೀಖಿನಂದು ಶಕ್ತಿ ಯೋಜನೆ ಉದ್ಘಾಟನೆ ಮಾಡುತ್ತೇವೆ. ಕರ್ನಾಟಕ ರಾಜ್ಯದೊಳಗೆ ಮಾತ್ರ ಸೀಮಿತವಾಗಿರುತ್ತದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ರಾಜ್ಯದ ಮೂಲೆ ಮೂಲೆಗಳಿಗೆ ಸಂಚರಿಸಬಹುದು. ಎಸಿ ಬಸ್ ಹೊರತುಪಡಿಸಿದಂತೆ ಎಲ್ಲಾ ಬಸ್ ಗಳಲ್ಲಿಯೂ ಉಚಿತವಾಗಿ ಮಹಿಳೆಯರು,ಕಾಲೇಜು ವಿದ್ಯಾರ್ಥಿಗಳು ಪ್ರಯಾಣ ಮಾಡಬಹುದು. ಬೆಂಗಳೂರಿನಿಂದ ತಿರುಪತಿ, ಆಂಧ್ರಪ್ರದೇಶಕ್ಕೆ ಹೋಗುವವರಿಗೆ ಮಾತ್ರ. ಕರ್ನಾಟಕದವರಿಗೆ ಮಾತ್ರ ಉಚಿತ ಪ್ರಯಾಣ. ಎಸಿ ಅಂಡ್ ನಾನ್ ಎಸಿ ಸ್ಲೀಪರ್ ಕೋಚ್ , ಲಕ್ಸುರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.