SUDDIKSHANA KANNADA NEWS/ DAVANAGERE/ DATE:30_05-2023
ದಾವಣಗೆರೆ (DAVANAGERE): ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಧೈರ್ಯವಂತ. ಜೊತೆಗೆ ಬುದ್ಧಿವಂತ, ಹೋರಾಟಗಾರ. ಸಣ್ಣ ಪುಟ್ಟ ಕೇಸ್‌ಗಳಿಗೆ ಹೆದರಿ ಓಡಿಹೋಗುವ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಆತನ ವಿರುದ್ಧ ಕೊಲೆ, ದರೋಡೆ, ಅತ್ಯಾಚಾರದಂತಹ ತೀವ್ರ ಕ್ರಿಮಿನಲ್ ಕೇಸ್ ದಾಖಲಾಗಿರಲಿಲ್ಲ. ಈತನ ವಿರುದ್ಧ ದಾಖಲಾಗಿದ್ದ ಖಾಸಗಿ ನಿವೇಶನಗಳ ನಕಲಿ ದಾಖಲೆ ಸೃಷ್ಟಿ ಕೇಸ್ 420 ಅಷ್ಟೇ. ಎಫ್.ಐ.ಆರ್ ಆದ ಮೂರ್ನಾಲ್ಕು ದಿನಗಳ ಬಳಿಕ ಮಧ್ಯರಾತ್ರಿ ಹೋಗಿ ಪೊಲೀಸರು ಆತನನ್ನು ಬಂಧಿಸಿ ಕರೆತರುವ ಅವಶ್ಯಕತೆ ಏನಿತ್ತು. ನಿಗೂಢತೆ ಇರುವ ಕಾರಣಕ್ಕೆ ಈ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಹರೀಶ್ ಹಳ್ಳಿ ಸ್ನೇಹಿತರ ಬಳಗ ಆಗ್ರಹಿಸಿದೆ.
ಮೇಲ್ಸೇತುವೆಯಿಂದ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಜಿಗಿದಿದ್ಯಾಕೆ…? ಮುಂದೇನಾಯ್ತು…?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪ್ರಮುಖರು, ಚನ್ನಗಿರಿ ತಾ . ಕಬ್ಬಳ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿರ ಸಾವು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬದವರು ಈಗಾಗಲೇ ದೂರು ನೀಡಿದ್ದಾರೆ. ಸೂಕ್ತ ತನಿಖೆ ನಡೆದು ಸತ್ಯಾಂಶ ಹೊರಬರಬೇಕಾದರೆ ಸಿಐಡಿಯಿಂದ ಆಗೋದಿಲ್ಲ. ಇಲ್ಲಿನ ಪೊಲೀಸರೇ ಅಲ್ಲಿಯೂ ಇರುತ್ತಾರೆ. ಹಾಗಾಗಿ ಸಿಬಿಐಗೆ ವಹಿಸಿದರೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಹರೀಶ್ ಸಾವಿನ ಪ್ರಕರಣ ಸಂಬಂಧ ಪಿಎಸ್ ಐ, ಕಾನ್ ಸ್ಟೇಬಲ್ ಸಸ್ಪೆಂಡ್: ಸಿಐಡಿಗೆ ಕೇಸ್ ವರ್ಗಾವಣೆ, ತನಿಖೆ ಶುರು
ಪ್ರಕರಣ ಸಂಬಂಧ ಈಗಾಗಲೇ ತಪ್ಪಿತಸ್ಥ ಪೊಲೀಸರ ಮೇಲೆ ಕೇಸ್ ದಾಖಲಾಗಿ ಸಸ್ಪೆಂಡ್ ಮಾಡಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂಬ ಮಾಹಿತಿ ದೊರೆತಿದೆ . ಪೊಲೀಸರ ಸುಪರ್ದಿಯಲ್ಲಿರುವಾಗಲೇ ಹರೀಶ್ ಹಳ್ಳಿ ನಿಗೂಢ ಸಾವಿನ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಇದೊಂದು ವ್ಯವಸ್ಥಿತ ಹತ್ಯೆ. ಇದರ ಹಿಂದೆ ದೊಡ್ಡ ದೊಡ್ಡ ಕಾಣದ ಕೈಗಳಿವೆ ಎಂಬುದು ನಮ್ಮ ಅನುಮಾನ. ಸರ್ಕಾರ ಈ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ನಾವು ಹೋಗಿದ್ದೇವೆ. ಅಲ್ಲಿ ನೋಡಿದಾಗ ದೇಹವನ್ನು ಫೈಓವರ್ ಮೇಲಿಂದ ಎತ್ತಿಹಾಕಿದ ರೀತಿ ಕಾಣುತ್ತಿದೆ. ಹರೀಶ್ ಹಳ್ಳಿ ಪೊಲೀಸ್ ಇಲಾಖೆಯಲ್ಲಿನ ಕೆಲವು ಹಗರಣಗಳನ್ನು ವಿಶೇಷವಾಗಿ ರಾಜ್ಯದ್ಯಾಂತ ಸುದ್ದಿಯಾಗಿದ್ದ ಅನಾಥ ಶವಗಳ ಮಾರಾಟ ಮಾಫಿಯಾದ ಬಗ್ಗೆ ಕೆಲವು ಅಧಿಕಾರಸ್ಥರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಅಕ್ರಮ, ಭೂಮಾಫಿಯಾ, ಅಕ್ರಮ ಗಣಿಗಾರಿಕೆ, ವಿವಿಧ ಇಲಾಖೆಗಳ ಭ್ರಷ್ಟಾಚಾರದ ವಿರುದ್ಧ ಹತ್ತು ಹಲವು ಹೋರಾಟಗಳನ್ನು ಮಾಡಿದ್ದಾರೆ. ಘನ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನೂ ಸಹ ಹೂಡಿದ್ದಾರೆ. ಉನ್ನತ ಅಧಿಕಾರಿಗಳು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರೋಧವನ್ನು ಎದುರಿಸುತ್ತಿದ್ದರು.
ಈ ಹಿಂದೆ ಹಲವಾರು ಪೊಲೀಸ್ ಅಧಿಕಾರಿಗಳು ವಿನಾಕಾರಣ ಈತನ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ಠಾಣೆಗೆ ಕರೆತಂದು ಹಿಂಸೆ ನೀಡಿದ ಉದಾಹರಣೆಗಳು ಸಾಕಷ್ಟಿವೆ . ಈ ಎಲ್ಲಾ ಕಾರಣಗಳಿಂದ ಈ ಸಾವಿನ ಹಿಂದೆ ಒಂದು ದೊಡ್ಡ ಷಡ್ಯಂತ್ರ ಅಡಗಿದೆ. ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ನಮ್ಮ ಅನುಮಾನ , ಹಾಗಾಗಿ ಈ ಕೂಡಲೇ ಘನ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ಸತ್ಯ ಹೊರಬರುತ್ತದೆ ಎಂಬುದು ನಮ್ಮ ಆಗ್ರಹ ಎಂದು ಬಳಗದ ಸದಸ್ಯರು
ಹೇಳಿದರು.
ಕೇವಲ ಸಿವಿಲ್ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನುವುದು ಶುದ್ಧ ಸುಳ್ಳು. ಇಲ್ಲಿ ಹರೀಶ್‌ನನ್ನು ಮಧ್ಯರಾತ್ರಿ ಕರೆತಂದ ಪೊಲೀಸರ ಕಾರ್ಯವೈಖರಿ ತುಂಬಾ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ . ತನ್ನ ವಿರುದ್ಧ ಎಫ್.ಐ.ಆರ್ . ದಾಖಲಾಗಿದೆ ಎಂದು ತಿಳಿದಿದ್ದರೂ ಆತ ಎಲ್ಲಿಯೂ ಓಡಿಹೋಗಿರಲಿಲ್ಲ. ಫೋನ್ ಮಾಡಿದ್ದರೆ ಸ್ಟೇಷನ್‌ಗೆ ಬರುತ್ತಿದ್ದ ಅಥವಾ ಹಗಲು ಹೊತ್ತಲ್ಲಿ ಅರೆಸ್ಟ್ ಮಾಡಬಹುದಿತ್ತು. ಪೊಲೀಸರು ತಮ್ಮ ಜೀಪಿನ ಬದಲು ಆತನ ಕಾರಿನಲ್ಲಿಯೇ ಆತನನ್ನು ಕರೆದುಕೊಂಡು ಬಂದಿದ್ದಾರೂ ಏಕೆ ? ಇನ್ನು ದೇಹದ ಮೇಲೆ ಆಗಿರುವ ಗಾಯಗಳನ್ನು ನೋಡಿದರೆ ಮತ್ತು ಡೆತ್ ಸ್ಪಾಟ್ ನೋಡಿದರೆ ಇದೊಂದು ವ್ಯವಸ್ಥಿತ ಕೊಲೆ ಎಂಬ ಅನುಮಾನ ಬರುತ್ತದೆ ಎಂದರು.
ಗೋಷ್ಠಿಯಲ್ಲಿ ಬಳಗದ ಎಂ.ಜಿ ಶ್ರೀಕಾಂತ್, ಗಿರೀಶ್ ಎಸ್ ದೇವರಮನಿ, ಕೆ.ಟಿ ಗೋಪಾಲಗೌಡ, ನಾಗರಾಜ್ ಸುರ್ವೆ, ಮಲ್ಲಿಕಾರ್ಜುನ್ ಇಂಗಳೇಶ್ವರ್, ಚೇತನ್, ಬಲ್ಲೂರು ರವಿಕುಮಾರ್ ಮತ್ತಿತರರು ಹಾಜರಿದ್ದರು.