SUDDIKSHANA KANNADA NEWS/ DAVANAGERE/ DATE:29_05-2023
ದಾವಣಗೆರೆ(DAVANAGERE): ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಅದೃಷ್ಟದ ತಾಣ ಎಂಬುದು ಹಳೆ ಮಾತು. ಕಳೆದ ಐದು ವರ್ಷಗಳಿಂದಲೂ ದಾವಣಗೆರೆ ಜಿಲ್ಲೆಯ ಜನರಲ್ಲಿ ಬೇಸರ, ಅಸಹನೆ, ಕೋಪ ಇತ್ತು. ಯಾಕೆಂದರೆ ದಾವಣಗೆರೆ (DAVANAGERE)ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐವರು ಬಿಜೆಪಿ ಶಾಸಕರು ಗೆದ್ದು ಬಂದಿದ್ದರು. ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ 2018ರಲ್ಲಿ ರಚನೆಯಾದರೂ ಗುಬ್ಬಿ(GUBBI) ಶಾಸಕರಾಗಿದ್ದ ಶ್ರೀನಿವಾಸ್ ಗುಬ್ಬಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆ ಬಳಿಕ ಬೈರತಿ ಬಸವರಾಜ್ ಮೂರು ವರ್ಷ ಹತ್ತು ತಿಂಗಳ ಕಾಲ ಜಿಲ್ಲಾ ಮಂತ್ರಿಯಾದರು.
ಆಗಿನಿಂದಲೂ ಜಿಲ್ಲೆಯ ಐವರು ಶಾಸಕರು ಎಷ್ಟೇ ಪ್ರಯತ್ನ ಪಟ್ಟರೂ ಬಿ. ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲೇ ಇಲ್ಲ. ಬಿಜೆಪಿ(BJP)ಯ ಹಿರಿಯ ಶಾಸಕ ಎಸ್. ಎ. ರವೀಂದ್ರನಾಥ್ ಅವರು
ಹಿರಿಯ ಶಾಸಕರಿದ್ದರು. ಮಾಜಿ ಸಿಎಂ ಬಿಎಸ್ ವೈ (BSY)ಪರಮಾಪ್ತ ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಎಲ್ಲರೂ ಪ್ರಯತ್ನ ಪಟ್ಟಿದ್ದರು. ಯಾರಿಗಾದರೂ ಸರಿ, ಜಿಲ್ಲೆಯ ಒಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ
ಪರಿಪರಿಯಾಗಿ ಕೇಳಿಕೊಂಡರೂ, ಬೇಡಿಕೊಂಡರೂ ಕ್ಯಾರೇ ಎನ್ನಲಿಲ್ಲ ಬಿಜೆಪಿ (BJP)ಹೈಕಮಾಂಡ್.
ರಾಜ್ಯ ನಾಯಕರು ಮಾತ್ರ ಭರವಸೆ ಕೊಟ್ಟಿದ್ದು ಬಿಟ್ಟರೆ ಏನೂ ಈಡೇರಲೇ ಇಲ್ಲ. ಕೊನೆಯವರೆಗೂ ಹೈಕಮಾಂಡ್ ಕದ ತಟ್ಟಿ ಬಂದಿದ್ದಷ್ಟೇ ಸಾಧನೆ ಎಂಬಂತಾಗಿಬಿಟ್ಟಿತು. ಕಾಂಗ್ರೆಸ್ (CONGRESS) – ಜೆಡಿಎಸ್ ನಿಂದ ಬಂದು ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಒಂದೇ ಒಂದು ನೆಪ ಇಟ್ಟುಕೊಂಡು ಮಾನ್ಯತೆ ಕೊಡಲಿಲ್ಲ. ಜಿಲ್ಲೆಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ದಾವಣಗೆರೆಗೆ ಚೆಂಬು ಎಂಬೆಲ್ಲಾ ಅಭಿಯಾನ ನಡೆಸಿದ್ದರು. ಇದಕ್ಕೂ
ಬಿಜೆಪಿಯ ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಮನ್ನಣೆ ಕೊಡಲಿಲ್ಲ. ಇದು ಬಿಜೆಪಿ ಕಾರ್ಯಕರ್ತರಲ್ಲಿಯೂ ಬೇಸರ ತರಿಸಿತ್ತು.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಾವಣಗೆರೆ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡಿದರೂ ಶಾಸಕರಿಗೆ ಗೌರವ ಸಿಗಲೇ ಇಲ್ಲ. ಇದು ಜನರಿಗೂ ಬೇಸರ ತರಿಸಿತ್ತು. ಐವರು ಶಾಸಕರಿದ್ದರೂ ಸಚಿವ ಸ್ಥಾನ ಕೊಡಲಿಲ್ಲ ಎಂಬ ಬಗ್ಗೆ ಒಳಗೊಳಗೆ
ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಜಿಲ್ಲೆಯ ಶಾಸಕರೊಬ್ಬರು ಸಚಿವರಾಗಿದ್ದರೆ ಇನ್ನೂ ಒಳ್ಳೆಯ ಕೆಲಸ ಆಗುತ್ತಿದ್ದವು. ಜನರು ಸುಲಭವಾಗಿ ಸಂಪರ್ಕಿಸಬಹುದಿತ್ತು. ಆದ್ರೆ, ಬೈರತಿ ಬಸವರಾಜ್ ಬೆಂಗಳೂರಿನಿಂದ
ಇಲ್ಲಿಗೆ ಬಂದು ಹೋಗುತ್ತಿದ್ದರಾದರೂ ಹೇಳುವಷ್ಟು ಕೆಲಸ ಆಗಲಿಲ್ಲ ಎನ್ನೋ ಆರೋಪವೂ ಇದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಡೆ ಹೀನಾಯ ಸೋಲನುಭವಿಸಿದೆ. ಹರಿಹರ ಹೊರತುಪಡಿಸಿದರೆ ಉಳಿದೆಲ್ಲಾ ಕಡೆಗಳಲ್ಲಿಯೂ ಕಾಂಗ್ರೆಸ್ ಕಮಾಲ್ ಮಾಡಿದೆ. ಜೊತೆಗೆ ಬಿ. ಪಿ. ಹರೀಶ್ ಗೆದ್ದಿದ್ದು ಸಹ ಕೇವಲ 4200 ಮತಗಳ
ಅಂತರದಲ್ಲಿ ಮಾತ್ರ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ತೀವ್ರ ಪೈಪೋಟಿ ನೀಡಿದರೂ, ಪಕ್ಷದೊಳಗಿನ ಕೆಲವರ ಅಸಹಕಾರದಿಂದ ಸೋಲು ಕಂಡರು ಎಂಬುದು ಬಹಿರಂಗವಾಗಿರುವ ಸತ್ಯ.
ಎಸ್. ಎಸ್. ಮಲ್ಲಿಕಾರ್ಜುನ್ ರಿಗೆ ಸಚಿವ ಭಾಗ್ಯ:
ಇನ್ನು ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ 35 ವರ್ಷಗಳ ಬಳಿಕ ಪ್ರಚಂಡ ಜಯಭೇರಿ ಬಾರಿಸಿ ಬಹುಮತ ಪಡೆದಿದೆ. ದಾವಣಗೆರೆ ಉತ್ತರದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಗೆದ್ದು ಬಂದರು. ವಯಸ್ಸಿನ ಕಾರಣದಿಂದ ಶಾಮನೂರು ಶಿವಶಂಕರಪ್ಪರಿಗೆ ಸಚಿವ ಸ್ಥಾನ ನೀಡಿಲ್ಲ. ಬದಲಾಗಿ ಅವರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಇದು ಜಿಲ್ಲೆಯ ಜನರಲ್ಲಿ ಖುಷಿ ತಂದಿದೆ. ಐದು ವರ್ಷಗಳ ಬಳಿಕ ಸ್ಥಳೀಯ ಶಾಸಕರು ಸಚಿವರಾಗುತ್ತಿರುವುದು ಸಹಜವಾಗಿಯೇ ಸಂತಸ ತಂದಿದೆ.
ಜಿಲ್ಲೆಯ ಆರು ಶಾಸಕರಿದ್ದರೂ ಎಸ್. ಎಸ್. ಮಲ್ಲಿಕಾರ್ಜುನ್ ಈ ಹಿಂದೆ ಮಂತ್ರಿಯಾಗಿ ಕೆಲಸ ನಿರ್ವಹಿಸಿದವರು, ನಾಲ್ಕನೇ ಬಾರಿ ಗೆದ್ದು ಬಂದಿದ್ದಾರೆ. ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿಯು ಅವರ ಸಾಕಷ್ಟು ನಿರೀಕ್ಷೆ ಇದೆ. ದಾವಣಗೆರೆ ಅಭಿವೃದ್ಧಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದರ ಕುರಿತಂತೆಯೂ ಜನರು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಐದು ವರ್ಷಗಳ ಕಾಲ ಬೇರೆ ಜಿಲ್ಲೆಯ ಶಾಸಕರು ಇಲ್ಲಿಗೆ ಬಂದು ಸಚಿವರಾಗಿದ್ದರು. ಆದ್ರೆ, ಈ ಬಾರಿ ಇಲ್ಲಿನವರೇ ಆಗಿರುವುದು ಖುಷಿಯ ವಿಚಾರ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು.